ADVERTISEMENT

ಸಾಹಿತ್ಯಕ್ಕೆ ಗಡಿಜಿಲ್ಲೆಯ ಕೊಡುಗೆ ಅಪರಿಮಿತ: ನಾಗಣ್ಣ

ರಾಮಾಪುರ: ಹನೂರು ತಾಲ್ಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 17:01 IST
Last Updated 11 ಫೆಬ್ರುವರಿ 2023, 17:01 IST
ಸಮ್ಮೇಳನಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು
ಸಮ್ಮೇಳನಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು   

ಹನೂರು: ರಾಜ್ಯದ ಗಡಿಭಾಗದಲ್ಲಿ ಸಾಹಿತ್ಯ ರಚನೆ ಸೀಮಿತವಾಗಿದ್ದರೂ, ಕನ್ನಡ ಸಾಹಿತ್ಯಕ್ಕೆ ಅದರ ಕೊಡುಗೆ ಮಾತ್ರ ಅಪರಿಮಿತವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ.ಡಿ ನಾಗಣ್ಣ ಶನಿವಾರ ಹೇಳಿದರು.

ತಾಲ್ಲೂಕಿನ ರಾಮಾಪುರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದ್ದರೂ ಸಾಹಿತ್ಯಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. 13-14ನೇ ಶತಮಾನದಲ್ಲಿ ಸೃಷ್ಟಿಯಾದ ಮಂಟೇಸ್ವಾಮಿ, ಮಹದೇಶ್ವರ ಪರಂಪರೆ ಈ ನೆಲಮೂಲದ ಬಹುದೊಡ್ಡ ಪರಂಪರೆ. ದಮನಿತರ ದನಿಯಾಗಿ ಸಂತರು ಮಾಡಿದ ಸಾಧನೆ ಅನನ್ಯವಾದುದು’ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.‌ಕೇಶವನ್ ಪ್ರಸಾದ್ ಮಾತನಾಡಿ, ‘ಅಕ್ಷರ ಜ್ಞಾನವನ್ನು ಪಡೆದು ಸಾಹಿತ್ಯ ರಚನೆ ಮಾಡುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುತ್ತಿರುವುದು ಸಂತಸದ ವಿಚಾರ. ಹಾಗೆಯೇ ಅಕ್ಷರ ಜ್ಞಾನವೇ ಇಲ್ಲದೆ ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗನಾಥಸ್ವಾಮಿ ಮತ್ತು ಬಾಲನಾಗಮ್ಮ ಮುಂತಾದ ಹತ್ತು ಹಲವಾರು ಕಾವ್ಯಗಳನ್ಬು ಹಾಡಿ ದಾಖಲಿಸಲು ಕಾರಣೀಭೂತರಾಗಿರುವುದು ಸ್ಮರಣೀಯವಾದುದು. ಸಾಹಿತ್ಯ ಸೃಷ್ಟಿಗೆ ತರಬೇತಿಯ ಅಗತ್ಯವಿಲ್ಲ. ತನಗೆ ತಾನೇ ಸಮಯದ ನಿರ್ಬಂಧವಿಲ್ಲದೆ ಹೊರಹೊಮ್ಮುತ್ತದೆ’ ಎಂದರು.

ADVERTISEMENT

ಸಂಶೋಧನೆ ಬೇಕು: ಶಾಸಕ ಆರ್‌.ನರೇಂದ್ರ ಮಾತನಾಡಿ, ‘ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದ್ದರೂ, ಶೈಕ್ಷಣಿಕವಾಗಿ ಗಣನೀಯ ಪ್ರಗತಿ ಸಾಧಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಶೋಧನಾ ಲೇಖನಗಳು ಬರಬೇಕಿದೆ. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಕ್ಷೇತ್ರದ ಗಡಿಗ್ರಾಮಗಳಲ್ಲಿ ತಮಿಳು ಭಾಷೆ ಅಧಿಕೃತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮುಖ್ಯವಾಹಿನಿಗೆ ಬರುತ್ತಿರುವುದು ಶ್ಲಾಘನೀಯ’ ಎಂದರು.

ಮೆರುಗು ತಂದ ಮೆರವಣಿಗೆ: ಸಮ್ಮೇಳನದ ಉದ್ಘಾಟನೆಗೂ ಮೊದಲು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗಮನ ಸೆಳೆಯಿತು. ರಾಮಾಪುರದ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಮೆರವಣಿಗೆಗೆ ಚಾಲನೆ‌ ನೀಡಿದರು. ಬಳಿಕ ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಮುಖಂಡ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶೈಲಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಮಹಾದೇಶ್, ಕರುನಾಡ ವಿಜಯ ಸೇನೆ ಜಿಲ್ಲಾ ಸಹಕಾರ ವಿನೋದ್ ಕುಮಾರ್ ಇದ್ದರು.

‘ಬೆಟ್ಟದ ರೈತರ ಸ್ಥಿತಿ ಚಿಂತಾಜನಕ’

ಸಮ್ಮೇಳನದ ಅಂಗವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ‘ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ದಿನನಿತ್ಯ ಅರಣ್ಯಾಧಿಕಾರಿಗಳ ಕಿರುಕುಳ ರೋದನವಾಗಿದೆ. ಇಲ್ಲಿನ ಜನರಿಗೆ ಆರೋಗ್ಯ ಹದಗೆಟ್ಟರೆ ಡೋಲಿಯಲ್ಲಿ ಹೊತ್ತು ಸಾಗಬೇಕಾದ ಪರಿಸ್ಥಿತಿ ಈಗಲೂ ಇದೆ. ಈ ಬಗ್ಗೆ ಇಲ್ಲಿನ ಅಧಿಕಾರಿ, ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಸುಮ್ಮನಿದ್ದಾರೆ’ ಎಂದರು.

ಕವಿಗೋಷ್ಠಿ: ನಂತರ ನಡೆದ ಕವಿಗೋಷ್ಠಿಯಲ್ಲಿ ತಾಲ್ಲೂಕಿನ ವಿವಿಧೆಡೆಗಳಿಂದ ಬಂದಿದ್ದ ಯುವ ಕವಿ, ಕವಯತ್ರಿಯರು ಕವನಗಳನ್ನು ವಾಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

‌ಸಮಾರೋಪ: ಸಂಜೆ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ, ಬಿಜೆಪಿ ನಾಯಕಿ ಪರಿಮಳಾ ನಾಗಪ್ಪ, ‘ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ’ ಎಂದರು.

ಮದ್ರಾಸ್ ವಿವಿಯ ಕನ್ನಡ ಪ್ರಾಧ್ಯಾಪಕ ಡಾ. ರಂಗಸ್ವಾಮಿ, ಕ.ರಾ.ಮು.ವಿ ವಿ ಕನ್ನಡ ಪ್ರಾಧ್ಯಾಪಕ ಡಾ.ಪಿ ಮಣಿ, ಜಾನಪದ ಸಾಹಿತ್ಯ ಪರಿಷತ್ ಹನೂರು ಘಟಕದ ಅಧ್ಯಕ್ಷ ಸಿ.ಕೆ ಕೃಷ್ಣಕುಮಾರ್, ಕಸಾಪ ತಾಲ್ಲೂಕು ಕಾರ್ಯದರ್ಶಿ ಅಭಿಲಾಷ್, ಕೋಶಾಧ್ಯಕ್ಷ ಅಶೋಕ್, ಸತೀಶ್ ಪೊನ್ನಾಚಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.