ಚಾಮರಾಜನಗರ: ರಾಜ್ಯದೆಲ್ಲೆಡೆ ಹಠಾತ್ ಹೃದಯಾಘಾತ, ಹೃದಯ ಸ್ತಂಬನದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಹೃದಯದ ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಗೆ (ಸಿಮ್ಸ್) ಕೆಲವು ದಿನಗಳಿಂದ ತಪಾಸಣೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅತಿಯಾದ ರಕ್ತದೊತ್ತಡ, ಮಧುಮೇಹ, ಆಯಾಸ, ಎದೆ ನೋವು, ಹೊಟ್ಟೆ ನೋವು, ಪಕ್ಕೆ ನೋವು, ಉಸಿರಾಟ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಇಸಿಜಿ ಹಾಗೂ ಎಕೋ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿದ್ದಾರೆ ಎನ್ನುತ್ತಾರೆ ಅಲ್ಲಿನ ವೈದ್ಯರು.
ದುಪ್ಪಟ್ಟು ಪರೀಕ್ಷೆ: ಸಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ರೋಗಿಗಳು ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಬರುತ್ತಿದ್ದಾರೆ. ಮೂರು ದಿನಗಳಿಂದ ಪರೀಕ್ಷೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಪ್ರತಿದಿನ 10 ರಿಂದ 15 ರೋಗಿಗಳು ಮಾತ್ರ ಬರುತ್ತಿದ್ದರು ಎನ್ನುತ್ತಾರೆ ಸಿಮ್ಸ್ ನಿರ್ದೇಶಕರಾದ ಡಾ.ಎಚ್.ಜಿ.ಮಂಜುನಾಥ್.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲೂ ಹೃದ್ರೋಗ ತಪಾಸಣೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇಸಿಜಿ, ಎಕೋ ಪರೀಕ್ಷೆಗೆ ಒಳಪಡುವವರು ದುಪ್ಪಟ್ಟಾಗಿದ್ದಾರೆ. ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆಗಳ ಕೊರತೆ ಇರುವುದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲೂ ಜಿಲ್ಲೆಯ ಹೆಚ್ಚಿನ ರೋಗಿಗಳು ತಪಾಸಣೆಗೆ ಹೋಗುತ್ತಿದ್ದಾರೆ.
ಎದೆನೋವಿಗೆ ಚಿಕಿತ್ಸೆಗೆ ಬರುತ್ತಿರುವ ರೋಗಿಗಳಿಗೆ ಇಸಿಜಿ ಹಾಗೂ ಎಕೋ ಪರೀಕ್ಷೆ ಮಾಡಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಹೊಟ್ಟೆ ಉಬ್ಬರ, ಹೊಟ್ಟೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಸಮಸ್ಯೆಗಳು ಪತ್ತೆಯಾಗಿದ್ದು ಔಷಧ ಹಾಗೂ ಸಲಹೆ ನೀಡಿ ಕಳುಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಹೃದಯಾಘಾತ’ದ ಸಾವಿನ ಸುದ್ದಿಗಳಿಂದ ಆತಂಕಗೊಂಡು ತಪಾಸಣೆಗೆ ಬರುತ್ತಿರುವುದು ಕಂಡುಬರುತ್ತಿದೆ ಎನ್ನುತ್ತಾರೆ ಸಿಮ್ಸ್ ವೈದ್ಯರು.
ಹೃದಯದ ಕಾಳಜಿ ಹೇಗೆ: ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೃದಯದ ಆರೋಗ್ಯಕ್ಕೆ ಪ್ರತಿನಿತ್ಯ 30 ರಿಂದ 45 ನಿಮಿಷ ವಾಕಿಂಗ್ ಮಾಡಬೇಕು. ಕನಿಷ್ಠ 8 ಗಂಟೆಗಳ ನಿದ್ರೆ ಮಾಡಬೇಕು, ಮೂರು ಹೊತ್ತು ಮನೆಯ ಊಟ ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ ಸಿಮ್ಸ್ ಡೀನ್ ಡಾ.ಎಚ್.ಜಿ.ಮಂಜುನಾಥ್.
ಸಮಸ್ಯೆ ಗುರುತಿಸುವಿಕೆ ಹೇಗೆ: ಹೃದಯಾಘಾತ ಸಂಭವಿಸುವ ಮುನ್ನ (ಹೃದಯಸ್ತಂಬನ ಹೊರತಾಗಿ) ದೇಹದಲ್ಲಿ ಕೆಲವು ಬದಲಾವಣೆಗಳು ಗೋಚರಿಸುತ್ತವೆ. ಎಂದಿನಿಂತೆ ಪ್ರತಿನಿತ್ಯದ ಚಟುವಟಿಕೆಗಳನ್ನು ಸರಾಗವಾಗಿ ಮಾಡಲು ಸಾಧ್ಯವಾಗದಿದ್ದರೆ, ದೇಹ ಸ್ಪಂದಿಸದಿದ್ದರೆ ತುರ್ತು ಚಿಕಿತ್ಸೆಗೆ ಒಳಗಾಗುವುದು ಸೂಕ್ತ. ಉದಾಹರಣೆಗೆ ವಾಕಿಂಗ್ ಮಾಡುವಾಗ ಅತಿಯಾದ ಆಯಾಸ ಕಾಣಿಸಿಕೊಳ್ಳುವುದು, ಮಹಡಿಯ ಮೆಟ್ಟಿಲು ಹತ್ತಲು ಸಾಧ್ಯವಾಗದಿರುವುದು, ಎದೆ, ಭುಜ, ಕತ್ತು, ಕೈಗಳಲ್ಲಿ ವಿಪರೀತ ನೋವು, ಉಸಿರಾಟಕ್ಕೆ ತೊಂದರೆ, ಅತಿಯಾದ ಬೆವರುವಿಕೆ ಹೃದಯಾಘಾತವಾಗುವ ಪ್ರಾಥಮಿಕ ಲಕ್ಷಣಗಳಾಗಿರುತ್ತವೆ.
ಇಂತಹ ಪರಿಸ್ಥಿತಿ ಎದುರಾದರೆ ನಿರ್ಲಕ್ಷ್ಯ ಮಾಡದೆ ಇಕೋ, ಇಸಿಜಿ ಸಹಿತ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳು ಇರುವ ಆಸ್ಪತ್ರೆಗಳಿಗೆ ತುರ್ತು ತೆರಳಿ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಿಮ್ಸ್ ಆಸ್ಪತ್ರೆಯಲ್ಲೂ ತುರ್ತು ಚಿಕಿತ್ಸೆ ಲಭ್ಯವಿದ್ದು ಪಡೆದುಕೊಳ್ಳಬಹುದು ಎನ್ನುತ್ತಾರೆ ಡೀನ್ ಡಾ.ಎಚ್.ಜಿ.ಮಂಜುನಾಥ್.
ನಿರ್ವಹಣೆ: ಬಾಲಚಂದ್ರ ಎಚ್.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥಸ್ವಾಮಿ, ಮಲ್ಲೇಶ ಬಿ.
ಕಳೆದ 6 ವರ್ಷಗಳಲ್ಲಿ ಸಿಮ್ಸ್ ಆಸ್ಪತ್ರೆಯಲ್ಲಿ ಎದೆನೋವು, ಹೃದಯ ಸಂಬಂಧಿ ಕಾಯಿಲೆಗಳಿಗೆ 600ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಕೆಲವು ದಿನಗಳಿಂದ ಇಕೋ, ಇಸಿಜಿ ಮಾಡಿಸಿಕೊಳ್ಳಲು ಆಸ್ಪತ್ರೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಹೃದಯಾಘಾತ ಲಕ್ಷಣಗಳು ಕಂಡುಬಂದರೆ ತುರ್ತು ಚಿಕಿತ್ಸೆ ಪಡೆದುಕೊಳ್ಳಬೇಕು.
–ಡಾ.ಜಿ.ಮಂಜುನಾಥ್, ಸಿಮ್ಸ್ ಡೀನ್
ಹೃದಯಾಘಾತ ಪ್ರಕರಣಗಳ ಮಾಹಿತಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಹೃದಯಾಘಾತದಿಂದ ಮೃತಪಟ್ಟವರು ಹಾಗೂ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಿಂದಿನಿಂದಲೂ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಪರೀಕ್ಷೆ ಮಾಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ಹೃದ್ರೋಗ ತಪಾಸಣೆಗೆ ಸರ್ಕಾರದಿಂದ ಆದೇಶ ಬಂದರೆ ಪಾಲಿಸಲಾಗುವುದು.
– ಡಾ.ಎಸ್.ಚಿದಂಬರ್, ಡಿಎಚ್‌ಒ
ಯಳಂದೂರು ತಾಲೂಕಿನಲ್ಲಿ ಸಣ್ಣ ಎದೆ ನೋವಿಗೂ ಇಸಿಜಿ ಮತ್ತು ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಏರಿಕೆ ಕಂಡಿದೆ. ಪ್ರತಿದಿನ 25 ಮಂದಿ ಪರೀಕ್ಷೆಗೆ ಬರುತ್ತಿದ್ದಾರೆ, 20 ರಿಂದ 50 ವಯೋಮಾನದವರು ಇದರಲ್ಲಿ ಹೆಚ್ಚಾಗಿದ್ದಾರೆ.
ಡಾ.ಶ್ರೀಧರ್, ಯಳಂದೂರು ಆಸ್ಪತ್ರೆ ವೈದ್ಯಾಧಿಕಾರಿ
ಸಾಮಾಜಿಕ ಜಾಲತಾಣಗಳಲ್ಲಿ ಹೃದಯಾಘಾತದ ಸುದ್ದಿ ನೋಡಿ ಆತಂಕಗೊಂಡು ಕೆಲವರು ಆಸ್ಪತ್ರೆಗೆ ಬಂದು ಇಸಿಜಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ಯಾಸ್ಟಿಕ್ ಸಮಸ್ಯೆ ಇದ್ದವರೂ ಹೃದಯಾಘಾತವಾಗುವ ಭೀತಿಯಿಂದ ಬರುತ್ತಿದ್ದಾರೆ. ಅತಿಯಾದ ಒತ್ತಡ ಇತರೆ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರೋಗ ಲಕ್ಷಣಗಳಿದ್ದರೆ ಮಾತ್ರ ತಪಾಸಣೆ ಮಾಡಿಸಿಕೊಳ್ಳಿ.
ಡಾ. ರಾಜಶೇಖರ್, ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ
ನಟ ಪುನೀತ್ ರಾಜಕುಮಾರ್ ನಿಧನರಾದ ಬಳಿಕ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಹೃದಯಾಘಾತದಿಂದ ಸಾವುಗಳು ಸಂಭವಿಸಿದ ನಂತರ ಇಸಿಜಿ ಪರೀಕ್ಷೆಗೆ ಬರುವವರ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿದೆ.
–ಡಾ.ಅಲಿಂ ಪಾಷಾ, ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.