ಹನೂರು: ರಾಜ್ಯದಲ್ಲೇ ಮೊದಲ ಬಾರಿಗೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಆರಂಭವಾಗಿದ್ದ ಜನ-ವನ ಸೇತುವೆ ಸಾರಿಗೆ ವ್ಯವಸ್ಥೆಯನ್ನು ಮರು ಆರಂಭಿಸುವಂತೆ ಕಾಡಂಚಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಮಾನವ–ಪ್ರಾಣಿ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ನಡುವೆ ಬಾಂಧವ್ಯ ವೃದ್ಧಿಗೆ ಜನ-ವನ ಸೇತುವೆಯಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎನ್ನಲಾಗುತ್ತಿದೆ.
ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರಿಗೆ ತುರ್ತು ಆರೋಗ್ಯ ಸೇವೆ ದೊರೆಯುಬೇಕು, ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು, ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ 2022ರಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ‘ಜನ–ವನ–ಸೇತುವೆ’ ಎಂಬ ವಿಭಿನ್ನ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿತ್ತು.
ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಅಂದಿನ ಮಲೆ ಮಹದೇಶ್ವರ ಬೆಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರ ಶ್ರಮದಿಂದ ಆರಂಭವಾಗಿದ್ದ ಕಾರ್ಯಕ್ರಮ ಸ್ಥಳೀಯರ ವಿಶ್ವಾಸಕ್ಕೆ ಪಾತ್ರವಾಗಿತ್ತು. ಜಿಲ್ಲಾ ಖನಿಜ ನಿಧಿಯಲ್ಲಿ ₹ 60 ಲಕ್ಷ ಬಳಸಿಕೊಂಡು ನಾಲ್ಕು ಸಾರಿಗೆ ವಾಹನಗಳನ್ನು ಖರೀದಿಸಿದ್ದ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು.
ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಇಂಡಿಗನತ್ತ, ಮೆದಗನಾಣೆ, ಮೆಂದಾರೆ, ನಾಗಮಲೆ ಮಾರ್ಗ, ಪಡಸಲನತ್ತ, ಪಾಲಾರ್ ಮಾರ್ಗ, ಕೊಕ್ಬರೆ, ತೇಕಾಣೆ, ತೋಕೆರೆ, ದೊಡ್ಡಾಣೆ ಮಾರ್ಗ, ಹನೂರು ವನ್ಯಜೀವಿ ವಲಯದ ಕಾಂಚಳ್ಳಿ, ಪಚ್ಚೆದೊಡ್ಡಿ ಮಾರ್ಗಗಳಲ್ಲಿ ಜನವನ ಸೇತುವೆ ವಾಹನಗಳು ಸಂಚರಿಸುತ್ತಿದ್ದವು.
ಸಾರಿಗೆ ವ್ಯವಸ್ಥೆ ಇಲ್ಲದ ಕಾಡಂಚಿನ ಗ್ರಾಮಗಳು ಜನರು ಅನಾರೋಗ್ಯ, ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ತುರ್ತು ಅಗತ್ಯತೆಗಳಿಗೆ ಪಟ್ಟಣಗಳಿಗೆ ಬರಲು, ಮಕ್ಕಳು ಶಾಲೆಗಳಿಗೆ ತೆರಳಲು, ಹಾಡಿಗಳಿಗೆ ಪಡಿತರ ಸಾಗಣೆ ಸೇರಿದಂತೆ ಹಲವು ಉದ್ದೇಶಗಳಿಗೆ ಜನವನ ಸೇತುವೆ ಬಳಕೆಯಾಗುತ್ತಿತ್ತು. ಶಿಕ್ಷಕರು, ಅಂಗನವಾಡಿ ಸಿಬ್ಬಂದಿ ಕೂಡ ವಾಹನದಲ್ಲಿಯೇ ಓಡಾಡತ್ತಿದ್ದರು.
ಆರೋಗ್ಯ ಹದಗೆಟ್ಟಾಗ, ಮಕ್ಕಳು ಶಾಲೆಗಳಿಗೆ ಹೋಗಲು ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಉಳಿದಂತೆ ಕೆಲಸ ಕಾರ್ಯಗಳಿಗೆ ಓಡಾಡಲು ಕನಿಷ್ಠ ದರ ನಿಗದಿಮಾಡಲಾಗಿತ್ತು. ಎಂ.ಎಂ ಹಿಲ್ಸ್ ಡಿಸಿಎಫ್ ಏಡುಕುಂಡಲು ವರ್ಗಾವಣೆಯಾದ ಬಳಿಕ ಜನವನ ಸೇತುವೆ ಯೋಜನೆ ನನೆಗುದಿಗೆ ಬಿತ್ತು. ನಿರ್ವಹಣೆ ಕೊರತೆಯಿಂದ ವಾಹನಗಳನ್ನು ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಯಿತಾದರೂ ಸಮರ್ಪಕವಾಗಿ ನಿರ್ವಹಣೆಯಾಗಲಿಲ್ಲ. ಈಗ ಮತ್ತೆ ಜನವನ ಸೇತುವೆ ಕಾರ್ಯಕ್ರಮ ಆರಂಭಿಸಬೇಕು ಎಂಬು ಕೂಗು ಕಾಡಂಚಿನ ಗ್ರಾಮಗಳ ನಿವಾಸಿಗಳಿಂದ ಕೇಳಿಬಂದಿದೆ.
ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯಿಂದ ಜಾರಿಯಾದ ಮೊದಲ ಖಾಸಗಿ ವಾಹನ ಸೇವೆಗೆ ಕಾಡಂಚಿನ ನಿವಾಸಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅರಣ್ಯ ಹಾಗೂ ಸ್ಥಳೀಯರ ನಡುವೆ ಬಾಂಧವ್ಯವೂ ಗಟ್ಟಿಯಾಗಿತ್ತು. ಸಾರಿಗೆ ಸೇವೆಗೆ ಪ್ರತಿಯಾಗಿ ಪಚ್ಚೆದೊಡ್ಡಿ ಗ್ರಾಮಸ್ಥರು ಅಂದಿನ ಡಿಸಿಎಫ್ ಏಡುಕೊಂಡಲು ಹಾಗೂ ಆರ್‌ಎಫ್‌ಒ ಸಯ್ಯದ್ ಸಾಬ್ ನದಾಫ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದರು.
ಜನವನ ಸೇತುವೆ ಸಾರಿಗೆ ನಂತರ ಪರಿಸ್ಥಿತಿ ಭಿನ್ನವಾಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಕಂದಕ ನಿರ್ಮಾಣವಾಗಿದೆ, 6 ಹುಲಿಗಳ ಅಸಹಜ ಸಾವಿನ ನಂತರ ಅಸಹನೆ ಹೆಚ್ಚಾಗಿರುವ ಹೊತ್ತಿನಲ್ಲಿ ಅರಣ್ಯ ಇಲಾಖೆ ಮತ್ತೆ ‘ಜನ–ವನ ಸೇತುವೆ’ ಮರು ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸ್ಥಳೀಯರು ಅರಣ್ಯ ಇಲಾಖೆ ನಡುವಿನ ಸಂಪರ್ಕ ಸೇತುವೆ ತುರ್ತು ಸೇವೆ ಪಡೆಯಲು ನೆರವಾಗಿದ್ದ ವಾಹನಗಳು ಹಾಡಿಗಳಿಂದ ಪಟ್ಟಣಗಳಿಗೆ ತೆರಳಲು ಸಹಕಾರಿ
ಕಾಡಂಚಿನ ಜನರ ಉಪಯೋಗಕ್ಕೆ ಆರಂಭಿಸಲಾಗಿದ್ದ ಜನ-ವನ ಸೇತುವೆ ಸಾರಿಗೆ ಸ್ಥಗಿತವಾಗಿದ್ದು ಕೂಡಲೇ ಪುನಾರಂಭಿಸಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕ್ರಮ ವಹಿಸಬೇಕು–ಹೊನ್ನೂರು ಪ್ರಕಾಶ್ ರೈತ ಮುಖಂಡ
ಜನವನ ಸೇತುವೆಯಡಿ ನೀಡಲಾಗಿದ್ದ ನಾಲ್ಕು ವಾಹನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ವಾಹನ ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿ ಒಂದು ವಾಹನ ಇದೆ. ವಾಹನಗಳನ್ನು ಮತ್ತೆ ಸುರ್ಪದಿಗೆ ಪಡೆದು ಸ್ಥಳೀಯರ ಅನುಕೂಲಕ್ಕೆ ಬಳಸಲಾಗುವುದು–ಭಾಸ್ಕರ್ ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್
ಬಾಂಧವ್ಯ ವೃದ್ಧಿ ಮಲೆಮಹದೇಶ್ವರ ವನ್ಯಧಾಮದ ಸುತ್ತಲೂ ಹಲವು ಗ್ರಾಮಗಳಿದ್ದು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಬಾಂಧವ್ಯ ವೃದ್ಧಿಯಾಗಬೇಕು ಹಾಗೂ ಸ್ಥಳೀಯರ ಸಮಸ್ಯೆಗಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜನ-ವನ ಸೇತುವೆ ಸಾರಿಗ ವ್ಯವಸ್ಥೆ ಆರಂಭಿಸಿತ್ತು. ಈ ಯೋಜನೆಗೆ ಸ್ಥಳೀಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು ಎನ್ನುತ್ತಾರೆ ಎಂಎಂ ಹಿಲ್ಸ್‌ನ ಹಿಂದಿನ ಡಿಸಿಎಫ್ ವಿ.ಏಡುಕುಂಡಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.