ADVERTISEMENT

ಚಾಮರಾಜನಗರ | 'ಗೃಹರಕ್ಷಕರ ಸೇವೆ ಕಾಯಂಗೊಳಿಸಿ; ಸಮಾನ ವೇತನ ನೀಡಿ'

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:45 IST
Last Updated 15 ಜುಲೈ 2025, 7:45 IST
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಲೇಬರ್ ರೈಟ್ಸ್ ಫೋರಂವತಿಯಿಂದ ಸೂಲಗಿತ್ತಿ ನರಸಮ್ಮ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸಂವಿಧಾನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾವಗಡ ಶ್ರೀರಾಮ್ ಮಾತನಾಡಿದರು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಲೇಬರ್ ರೈಟ್ಸ್ ಫೋರಂವತಿಯಿಂದ ಸೂಲಗಿತ್ತಿ ನರಸಮ್ಮ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸಂವಿಧಾನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾವಗಡ ಶ್ರೀರಾಮ್ ಮಾತನಾಡಿದರು   

ಚಾಮರಾಜನಗರ: ಗೃಹ ರಕ್ಷಕರ ಸೇವೆ ಖಾಯಂಗೊಳಿಸಿ ವರ್ಷಪೂರ್ತಿ ಕರ್ತವ್ಯ ಹಾಗೂ ಸಮಾನ ವೇತನ ನೀಡಬೇಕು ಎಂದು ಲೇಬರ್ ರೈಟ್ಸ್‌ ಫೋರಂ ಸಂಸ್ಥಾಪಕ ಪಾವಗಡ ಶ್ರೀರಾಮ್ ಒತ್ತಾಯಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಲೇಬರ್ ರೈಟ್ಸ್ ಪೋರಂ ವತಿಯಿಂದ ಸೂಲಗಿತ್ತಿ ನರಸಮ್ಮ ಅವರ 105ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ರಕ್ಷಕರು ನಿವೃತ್ತಿಯಾದ ಬಳಿಕ ಜೀವನ ನಿರ್ವಹಣೆ ಬಹಳ ಕಷ್ಟವಾಗುತ್ತದೆ ಎಂದರು. 

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹ 10 ಲಕ್ಷ ಇಡುಗಂಟು ಕೊಡಬೇಕು, ನಿವೃತ್ತಿಯ ನಂತರ ಬದುಕು ಕಟ್ಟಿಕೊಳ್ಳಲು ನೆರವು ನೀಡಬೇಕು. ಸೇವಾ ಅವಧಿಯಲ್ಲಿ ವರ್ಷಪೂರ್ತಿ ಕರ್ತವ್ಯ ಸಲ್ಲಿಸುವ ಅವಕಾಶ ಹಾಗೂ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಗೃಹ ರಕ್ಷಕರು ಕಾನೂನು ಸುವ್ಯವಸ್ಥೆ ನಿಯಂತ್ರಿಸುವ, ಸಮಾಜವಿರೋಧಿ ಕೃತ್ಯಗಳನ್ನು ತಡೆಯಲು ಶ್ರಮಿಸುತ್ತಿದ್ದಾರೆ. ಆಪತ್ತಿನ ಕಾಲದಲ್ಲಿ ಜನರ ಜೀವ ಉಳಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ 8 ಲಕ್ಷ ಹಾಗೂ ರಾಜ್ಯದಲ್ಲಿ 27 ಸಾವಿರ ಗೃಹರಕ್ಷಕದಳದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದ ಯಾವುದೇ ಭಾಗಕ್ಕೆ ನಿಯೋಜಿಸಿದರೂ ಕರ್ತವ್ಯ ನಿಭಾಯಿಸುತ್ತಾರೆ. ಸರ್ಕಾರದ ಘನತೆ, ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಉತ್ಸವ, ಸಭೆ, ಸಮಾರಂಭಗಳಲ್ಲಿ ಹವಾಮಾನ ವೈಪರೀತ್ಯ, ಸವಾಲುಗಳನ್ನು ಎದುರಿಸು ಪೊಲೀಸರ ಮಾದರಿಯಲ್ಲಿಯೇ ಸೇವೆ ಮಾಡುತ್ತಿದ್ದು ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸೂಲಗಿತ್ತಿ ನರಸಮ್ಮ ಕುಗ್ರಾಮದಲ್ಲಿ ಹುಟ್ಟಿ ಕಾಯಕದ ಮೂಲಕ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅವರ ಸೇವೆ ಸಮಾಜಕ್ಕೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಸನ್ನ ಕುಮಾರ್, ರಾಜ್ಯ ಕಾರ್ಯದರ್ಶಿ ಮೌನಾಸಾಬ್, ಮೈಸೂರು ಜಿಲ್ಲಾಧ್ಯಕ್ಷ ಕಾಳೇಗೌಡ, ಉಪಾಧ್ಯಕ್ಷ ನಾರಾಯಣ ಸ್ವಾಮಿ, ಮುಖಂಡರಾದ ನಾಗೇಶ್, ಲಿಂಗರಾಜು, ಜವರೇಗೌಡ, ಯೋಗೇಶ್, ರಾಮಪ್ಪ, ಸುಮಿತ್ರಾ, ಭಾಗ್ಯಾ, ಚಿಕ್ಕೇಗೌಡ, ಸಿದ್ದರಾಜು, ಬಸವರಾಜು, ಕೃಷ್ಣಮೂರ್ತಿ, ಚಿಕ್ಕಣ್ಣ, ನಾಗರಾಜು, ಆನಂದ್, ದೌಲತ್ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.