ಚಾಮರಾಜನಗರ: ನೇರ ನಡೆ ನುಡಿಯು ನಿಷ್ಠಾವಂತ ರಾಜಕಾಣಿಯಾಗಿದ್ದ ಮಾಜಿ ಶಾಸಕ ದಿ.ಎಂ.ಸಿ.ಬಸಪ್ಪ ರಾಜಕಾರಣಿಗಳಿಗೆ ಆದರ್ಶ ಪ್ರಾಯರು ಎಂದು ಸುತ್ತೂರು ಕ್ಷೇತ್ರದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಂ.ಸಿ ಬಸಪ್ಪ ಜನ್ಮ ಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಬಸಪ್ಪ ಅವರ ತಂದೆ ಚಿಕ್ಕಲಿಂಗಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದರು. ತಂದೆಯ ಹೋರಾಟದ ಹಾದಿಯಲ್ಲಿ ಬೆಳೆದುಬಂದ ಬಸಪ್ಪ ಕೂಡ ಹಲವು ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಜನಪರ ಕಾರ್ಯ ಮಾಡಿದ್ದಾರೆ. ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದ ಬಸವಪ್ಪ ಬಳಿ ಸ್ವಂತ ಕಾರು ಸಹ ಇರಲಿಲ್ಲ. ಬಸ್‌ನಲ್ಲಿಯೇ ಓಡಾಡುತ್ತ ಸರಳವಾಗಿ ಬದುಕಿ ತೋರಿಸಿದ್ದರು. ನೇರವಾದ ಮಾತುಗಳಿಗೆ ಹೆಸರಾಗಿದ್ದ ಅವರು ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಅಪಾರ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.
ಹಿರಿಯ ಶ್ರೀ ರಾಜೇಂದ್ರ ಸ್ವಾಮೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದ ಬಸಪ್ಪ ಶ್ರೀಮಠದ ಜೊತೆಗೆ ಉತ್ತಮ ಬಾಂಧವ್ಯ ಹೊಂಡಿದ್ದರು. ಮೇರು ವ್ಯಕ್ತಿತ್ವದ ಎಂ.ಸಿ.ಬಸಪ್ಪ ಅವರ 100ನೇ ಜನ್ಮ ಶತಮಾನೋತ್ಸವ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಚಿಕ್ಕಹೊಳೆ ಅಣೆಕಟ್ಟೆ ನಿರ್ಮಾಣ ಸಂದರ್ಭ ಗುತ್ತಿಗೆದಾರರೊಬ್ಬರು ಬಾಕಿ ಹಣ ಬಿಡುಗಡೆಯಾಗದೆ ತೊಂದರೆ ಸಿಲುಕಿದಾಗ ಹಣ ಬಿಡುಗಡೆ ಮಾಡಿಸಿದ್ದರು. ಪ್ರತಿಯಾಗಿ ಉಡುಗೊರೆ ಕೊಡಲು ಬಂದಾಗ ಕೋಪಗೊಂಡು ನಿರಾಕರಿಸಿದ್ದರು. ಅವರ ಪ್ರಾಮಾಣಿಕತೆ ಬಿಂಬಿಸುವ ಹಲವು ಪ್ರಸಂಗಗಳನ್ನು ಹಲವರು ಹೇಳುತ್ತಾರೆ. ಬಸಪ್ಪ ವ್ಯಕ್ತಿತ್ವ ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಸುತ್ತೂರು ಶ್ರಿಗಳು ಹೇಳಿದರು.
ಶರಣ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ರಾಜಕಾರಣವನ್ನು ಸೇವಾ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಬಸಪ್ಪನವರು ಸೋಲು, ಗೆಲುವಿನ ಬಗ್ಗೆ ಚಿಂತಿಸದೆ ಸಮಾಜಕ್ಕೆ ಅರ್ಪಿಸಿಕೊಂಡಿದ್ದರು. ಹೋರಾಟದ ಬದುಕಿನಲ್ಲಿ ಮೌಲ್ಯಗಳ ಜೊತೆಗೆ ರಾಜಿ ಮಾಡಿಕೊಳ್ಳದೆ, ಅಧಿಕಾರಕ್ಕೆ ಆಸೆ ಪಡದೆ ಬದುಕಿದರು ಎಂದರು.
ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಹಾಗೂ ಸಾಹಿತಿ ಕೆ.ವೆಂಕಟರಾಜು ಬಸಪ್ಪ ಅವರ ರಾಜಕಾರಣ ಹಾಗೂ ಸಮಾಜಸೇವೆಯ ಕುರಿತು ಮಾತನಾಡಿದರು. ಶಿವಲಿಂಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತಕ ಶಂಕರ ದೇವನೂರು, ಗಂಗಾಬಿಕೆ ಎಂ.ಸಿ.ಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಬಿ.ಕೆ. ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಬಿ.ಎಸ್.ವಿನಯ್, ಎಂಸಿ ಬಸಪ್ಪ ಪುತ್ರ ಎಂ.ಬಿ. ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.