ADVERTISEMENT

ಸಂತೇಮರಹಳ್ಳಿ | ನೀರುಗಂಟಿ ಆತ್ಮಹತ್ಯೆ: ಪಂಚಾಯಿತಿ ಕಡತ ಪರಿಶೀಲನೆ

ಡೆತ್‌ನೋಟ್‌ನಲ್ಲಿರುವ ಸತ್ಯಾಸತ್ಯತೆಗಳ ಪರಿಶೀಲನೆಗೆ ಇಒ ನೇತೃತ್ವದ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:41 IST
Last Updated 19 ಅಕ್ಟೋಬರ್ 2025, 5:41 IST
ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್ ನೇತೃತ್ವದ ಬಿಜೆಪಿ ಮುಖಂಡ ತಂಡ ಶನಿವಾರ ಹೊಂಗನೂರು ಗ್ರಾಮಕ್ಕೆ ಭೇಟಿನೀಡಿ ಮೃತ ನೀರಗಂಟಿ ಕುಟುಂಬಕ್ಕೆ ಸಾಂತ್ವನ ಹೇಳಿತು
ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್ ನೇತೃತ್ವದ ಬಿಜೆಪಿ ಮುಖಂಡ ತಂಡ ಶನಿವಾರ ಹೊಂಗನೂರು ಗ್ರಾಮಕ್ಕೆ ಭೇಟಿನೀಡಿ ಮೃತ ನೀರಗಂಟಿ ಕುಟುಂಬಕ್ಕೆ ಸಾಂತ್ವನ ಹೇಳಿತು   

ಸಂತೇಮರಹಳ್ಳಿ (ಚಾಮರಾಜನಗರ): ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೀರುಗಂಟಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಶನಿವಾರ ತಾಲ್ಲೂಕು ಪಂಚಾಯಿತಿ ಇಒ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ವಶಕ್ಕೆ ಪಡೆಯಿತು.

ಮೃತ ಚಿಕ್ಕೂಸ ನಾಯಕ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಅಧಿಕಾರಿಗಳು ಮಾಹಿತಿ ಹಾಗೂ ದಾಖಲೆಗಳನ್ನು ಕಲೆ ಹಾಕಿದರು. ಇದೇ ವೇಳೆ  ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ‘ಜಿಪಂ ಸಿಇಒ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು’ ಎಂದು ಆಗ್ರಹಿಸಿದರು.

‘ನೀರುಗಂಟಿಗೆ 27 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆಯೇ, ಮೃತರ ಸೇವಾ ಅವಧಿ ಎಷ್ಟು, ಬಾಕಿ ವೇತನ ಪಾವತಿಯಾಗದ ಅವಧಿಯಲ್ಲಿ ಕಾರ್ಯ ನಿರ್ವಹಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಯಾರು? ಸಭೆಯ ನಡಾವಳಿಗಳು ಏನು? ನೀರುಗಂಟಿಯ ನೇಮಕಾತಿಯಲ್ಲಿ ನಿಯಮಗಳ ಪಾಲನೆಯಾಗಿದೆಯೇ? ವೇತನ ಪಾವತಿಗೆ ಯಾವ ಮೂಲದಿಂದ ಆರ್ಥಿಕ ಸಂಪನ್ಮೂಲ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲಾಯಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ಡೆತ್‌ನೋಟ್‌ನಲ್ಲಿರುವ ಆರೋಪಗಳ ಸತ್ಯಾಸತ್ಯತೆಗಳ ಬಗ್ಗೆ ‍ಪರಿಶೀಲಿಸಿ ವರದಿ ನೀಡಲು ಸಮಿತಿ ರಚಿಸಲಾಗಿದೆ. ಆರೋಪಿತ ಪಿಡಿಒ ರಾಮೇಗೌಡರನ್ನು ಅಮಾನತುಗೊಳಿಸಲಾಗಿದ್ದು, ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸ್ಪಷ್ಟಪಡಿಸಿದರು.  

‘ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಅಂಶ ಡೆತ್‌ನೋಟ್‌ನಲ್ಲಿರುವುದು ಚರ್ಚೆಗೆ ಗ್ರಾಸವಾಗಿದೆ. ಪತ್ನಿ ರೂಪಾ ಅಧ್ಯಕ್ಷೆಯಾಗಿದ್ದರೂ ಅವರ ಪತಿ ಅಧಿಕಾರ ಚಲಾಯಿಸುತ್ತಿದ್ದರೇ’ ಎಂಬ ಪ್ರಶ್ನೆ ಎದ್ದಿದೆ. ‘ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪತ್ನಿಯ ಹೆಸರಿನಲ್ಲಿ ಪತಿ ಅಧಿಕಾರ ಚಲಾಯಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂಬ ಆಗ್ರಹಗಳೂ ಕೇಳಿಬಂದಿವೆ. 

ಬಿಜೆಪಿ ಮುಖಂಡರ ಭೇಟಿ ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್ ಮಾಜಿ ಶಾಸಕ ಬಾಲರಾಜ್ ನೇತೃತ್ವದ ತಂಡ ಶನಿವಾರ ಹೊಂಗನೂರು ಗ್ರಾಮಕ್ಕೆ ಭೇಟಿನೀಡಿ ಮೃತ ನೀರಗಂಟಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ವಿತರಿಸಿದರು. ಬಳಿಕ ಮಾನಾಡಿದ ನಿರಂಜನ ಕುಮಾರ್ ಮೃತ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗೂ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಚಿಕ್ಕೂಸ ನಾಯಕಗೆ 27 ತಿಂಗಳ ವೇತನ ನೀಡದೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಬದಲು ಆರ್‌ಎಸ್‌ಎಸ್ ವಿರುದ್ದ ನಾಲಗೆ ಹರಿಬಿಡುತ್ತಿದ್ದಾರೆ ಎಂದು ಟೀಕಿಸಿದರು. ಮುಖಂಡರಾದ ಲೋಕೇಶ್ ರಾಜುನಾಯಕ ಟಗರಪುರ ರೇವಣ್ಣ ಹೊಂಗನೂರು ಮಹದೇವಸ್ವಾಮಿ ಮೂಡ್ನಾಕೂಡು ಪ್ರಕಾಶ್ ಪೋಲ್ ಮಹದೇವಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.