ADVERTISEMENT

ಜಾನಪದ ಅಕಾಡೆಮಿ ಪ್ರಶಸ್ತಿಗೆ ಸೋಬಾನೆ ಕಲಾವಿದೆ ಬಿ.ಹೊನ್ನಮ್ಮ ಆಯ್ಕೆ

ನಾಲ್ಕು ದಶಕಗಳ ಕಲಾ ಸೇವೆಗೆ ಸಂದ ಗೌರವ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 14:23 IST
Last Updated 4 ಜನವರಿ 2021, 14:23 IST
ಬಿ.ಹೊನ್ನಮ್ಮ
ಬಿ.ಹೊನ್ನಮ್ಮ   

ಚಾಮರಾಜನಗರ: ಸಮೀಪದ ರಾಮಸಮುದ್ರದ ಸೋಬಾನೆ ಕಲಾವಿದೆ ಬಿ.ಹೊನ್ನಮ್ಮ ಅವರು 2020ನೇ ಸಾಲಿನ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

50 ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುತ್ತಾ ಬಂದಿರುವ ಹೊನ್ನಮ್ಮ ಅವರದ್ದು, ಕಲಾ ಸೇವೆಯ ಕುಟುಂಬ. ಅವರ ತಾಯಿ ಚಿಕ್ಕಸಿದ್ದಮ್ಮ, ಚಿಕ್ಕಮ್ಮ ಹನುಮಮ್ಮ ಅವರು ಕೂಡ ಸೋಬಾನೆ ಕಲಾವಿದರೇ. 70 ವರ್ಷ ವಯಸ್ಸಿನ ಹೊನ್ನಮ್ಮ ಅವರು ನಾಲ್ಕು ದಶಕಗಳಿಂದ ಸೋಬಾನೆ ಕಲಾವಿದರ ತಂಡದ ಭಾಗವಾಗಿ ಹಾಗೂ ತಮ್ಮದೇ ತಂಡಕಟ್ಟಿಕೊಂಡು ಅಪರೂಪದ ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ತಾಯಿ ಹಾಗೂ ಚಿಕ್ಕಮ್ಮನಿಂದ ಸೋಬಾನೆ ಪದಗಳನ್ನು ಕಲಿತಿರುವ ಹೊನ್ನಮ್ಮ ಅವರು ತಮ್ಮ ನಾಲ್ವರು ಹೆಣ್ಣು ಮಕ್ಕಳಿಗೆ ಹಾಗೂ ತಮ್ಮ ತಂಡದ ಸದಸ್ಯರಿಗೆ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ.

ADVERTISEMENT

ಮದುವೆ, ಗೃಹ ಪ್ರವೇಶ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಸೋಬಾನೆ ಪದಗಳನ್ನು ಹಾಡುತ್ತಾ ಖ್ಯಾತಿ ಗಳಿಸಿರುವ ಹೊನ್ನಮ್ಮ ಅವರಿಗೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗಸ್ವಾಮಿ,ಶಿವಶರಣೆಶಂಕಮ್ಮ, ಜೋಗುಳಹಾಡು, ಒಡಹುಟ್ಟಿದವರ ಹಾಡು, ತಾಯಮ್ಮನ ಹಾಡು, ಚಾಮುಂಡೇಶ್ವರಿ, ನಂಜುಂಡೇಶ್ವರರ ಕುರಿತ ಹಾಡು, ಬೀಸೋಕಲ್ಲು ಹಾಡುಗಳು ಕರಗತವಾಗಿದೆ.

‘ಮೂರು ದಿನಗಳಗಳವರೆಗೆ ನಿರಂತರವಾಗಿ ಹಾಡುವಷ್ಟು ಪದಗಳು ನನಗೆ ತಿಳಿದಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹೊನ್ನಮ್ಮ.

ಒಂಬತ್ತು ವರ್ಷಗಳ ಕಾಲ ಆಕಾಶವಾಣಿ ಕಲಾವಿದರಾಗಿ ಕಾರ್ಯನಿರ್ವಹಿಸಿರುವ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಹೊನ್ನಮ್ಮ ಅವರ ಕಲಾ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ದಸರಾ ಮಹೋತ್ಸವದಲ್ಲಿ ಸನ್ಮಾನಿಸಿದೆ. ಜಿಲ್ಲಾ ಕಸಾಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.

ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹೊನ್ನಮ್ಮ ಅವರು, ‘50 ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುತ್ತಾ ಬಂದಿದ್ದೇನೆ. ನನ್ನ ಹಿರೀಕರೆಲ್ಲ ತೀರಿ ಹೋಗಿದ್ದಾರೆ. ಈಗ ನಾನೇ ಹಿರೀಕಳು. 10 ಜನರ ತಂಡ ಕಟ್ಟಿ ಪ್ರದರ್ಶನ ನೀಡುತ್ತಿದ್ದೇನೆ. ಮಕ್ಕಳಿಗೆ ಹಾಗೂ ಆಸಕ್ತಿ ಇರುವವರಿಗೆ ಹೇಳಿಕೊಡುತ್ತಿದ್ದೇನೆ. ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.