ADVERTISEMENT

ಹೊನ್ನೇಗೌಡನಹಳ್ಳಿಗೆ ವಿದ್ಯುತ್ ಸಂಪರ್ಕ ನೀಡಿ: ಬಿ.ಮಹೇಶ್

ವಿದ್ಯುತ್ ಸಂಪರ್ಕ ವಂಚಿತ ಕಾಡಂಚಿನ ಗ್ರಾಮ: ಮುಖಂಡ ಬಿ.ಮಹೇಶ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:02 IST
Last Updated 22 ಸೆಪ್ಟೆಂಬರ್ 2024, 14:02 IST
ಹರದನಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ಈಚೆಗೆ ಜನಸಂಪರ್ಕ ಸಭೆ ನಡೆಯಿತು
ಹರದನಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ಈಚೆಗೆ ಜನಸಂಪರ್ಕ ಸಭೆ ನಡೆಯಿತು   

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಹೋಬಳಿಗೆ ಸೇರಿದ ಹೊನ್ನೇಗೌಡನ ಹಳ್ಳಿ ಗ್ರಾಮದ ಜನ 20 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಬಿ.ಮಹೇಶ್ ಅಧಿಕಾರಿಗಳಿಗೆ ತಿಳಿಸಿದರು.

ಹರದನಹಳ್ಳಿ ಗ್ರಾಮದಲ್ಲಿ ಇರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ 14 ಕುಟುಂಬಗಳು ವಾಸಿಸುತ್ತಿವೆ. ರೈತರಿಗೆ ವ್ಯವಸಾಯ ಮಾಡಲು ಬಾವಿಯಲ್ಲಿ ನೀರಿದ್ದರೂ ವಿದ್ಯುತ್ ಸಂಪರ್ಕವಿಲ್ಲದೆ ಬಳಸಲಾಗುತ್ತಿಲ್ಲ. ರಾತ್ರಿ ವೇಳೆ ಕಾಡು ಪ್ರಾಣಿಗಳ ದಾಳಿಯಿಂದ ಬೆಳೆದ ಫಸಲು ಹಾಳಾಗುತ್ತಿದೆ. ನಾಲ್ಕಾರು ಮನೆಗಳಿಗೆ ಮಾತ್ರ ಸೋಲಾರ್ ವ್ಯವಸ್ಥೆ ಇದ್ದು, ಶೀಘ್ರ ಅಧಿಕಾರಿಗಳು ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.

ಚೆಸ್ಕಾಂ ವಿಭಾಗ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ಮಾತನಾಡಿ, ಶೀಘ್ರ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತ ಹೋರಾಟಗಾರ ಚಿಕ್ಕಮೊಳೆ ಸಿದ್ದಶೆಟ್ಟಿ ಮಾತನಾಡಿ, ‘ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ರೈತರು ಬೆಳೆದ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಶಿವಮೂರ್ತಿ ಮಾತನಾಡಿ, ಜಮೀನಿನಲ್ಲಿ ಅಡಿಕೆ ಹಾಕಲಾಗಿದ್ದು ನೀರಿಲ್ಲದೆ ಒಣಗುತ್ತಿದ್ದು 25 ಕೆ.ವಿ ಸರ್ವಿಸ್ ಸ್ಟೇಷನ್ ಸ್ಥಾಪಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹರದನಹಳ್ಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದ್ರುಪದ್, ಸಹಾಯಕ ಎಂಜಿನಿಯರ್‌ಗಳಾದ ರವಿಕುಮಾರ್, ವಸಂತ್, ಕುಮಾರ್, ಸತೀಶ್, ನವೀನ್, ಹಿರಿಯ ಲೆಕ್ಕ ಸಹಾಯಕ ಮಹದೇವಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.