ADVERTISEMENT

ಎಚ್‌ಎಸ್‌ವಿ ಗೀತೆಗಳು ನೆಮ್ಮದಿಯ ಜೀವನಕ್ಕೆ ಪೂರಕ: ಸುರೇಶ್ ಎನ್. ಋಗ್ವೇದಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:25 IST
Last Updated 6 ಜೂನ್ 2025, 13:25 IST
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಹೆಚ್‌ಎಸ್‌ವಿ ನುಡಿನಮನ ಕಾರ್ಯಕ್ರಮ ನಡೆಯಿತು
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಹೆಚ್‌ಎಸ್‌ವಿ ನುಡಿನಮನ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ: ಕವಿ ಹೆಚ್‌.ಎಸ್.ವೆಂಕಟೇಶ್ ಮೂರ್ತಿ ಅವರ ಗೀತೆಗಳಲ್ಲಿ ಆಧ್ಯಾತ್ಮ, ಪ್ರೀತಿ, ಕರುಣೆ, ಭಾವನೆ, ಪ್ರಕೃತಿ, ನೋವು, ಮಾನವ ಸಂಬಂಧಗಳು ಮೇಳೈಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ನಡೆದ ಹೆಚ್‌ಎಸ್‌ವಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌ಎಸ್‌ವಿ ಭಾವಗೀತೆಗಳಲ್ಲಿ ಸೂಕ್ಷ್ಮತೆ ಪರಿಣಾಮಕಾರಿಯಾಗಿ ಅಭಿವ್ಯಕ್ತವಾಗಿವೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ, ಸುಗಮ ಸಂಗೀತ ಕ್ಷೇತ್ರ ಹಾಗೂ ಭಾವನಾ ಜೀವಿಗಳಿಗೆ ಅಪಾರ ನೋವು, ನಷ್ಟ ಉಂಟಾಗಿದೆ ಎಂದರು.

ಎಚ್ಎಸ್‌ವಿ ಕವಿ, ಸಾಹಿತಿ, ವಿಮರ್ಶಕ, ಕಾದಂಬರಿಕಾರ, ನಾಟಕಕಾರರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಎಂಟು ದಶಕಗಳ ಕಾಲ ಭಾವಗೀತೆಗಳ ಕವಿಯಾಗಿ ಜನರ ಮನದಲ್ಲಿ ಉಳಿದ ಸಾತ್ವಿಕ ಸಜ್ಜನರಾಗಿದ್ದಾರೆ. ಅವರ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಗೀತೆಯ ಸಾರವನ್ನು ಅರಿತರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಿ.ಕೆ.ಆರಾಧ್ಯ ಮಾತನಾಡಿ ಎಚ್ಎಸ್‌ವಿ ಅವರ ಜೀವನ, ಬದುಕು, ಕನ್ನಡ ಸಾಹಿತ್ಯದ ಚಿಂತನೆಗಳು ಜೀವನ ಶ್ರೇಷ್ಠತೆಗೆ, ಸರಳತೆಗೆ, ಸೌಂದರ್ಯ ಪ್ರಜ್ಞೆಗೆ ಹಾಗೂ ವಿವೇಕಕ್ಕೆ ಸಾಕ್ಷಿಯಾಗಿವೆ ಎಂದರು.

ಕಸಾಪ ಸದಸ್ಯ ರವಿಚಂದ್ರ ಪ್ರಸಾದ್ ಎಚ್‌ಎಸ್‌ವಿ ಅವರ ಭಾವಗೀತೆಗಳನ್ನು ಹಾಡಿ ಗಾನನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬರಹಗಾರ ಲಕ್ಷ್ಮೀ ನರಸಿಂಹ, ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಶಿವಲಿಂಗ ಮೂರ್ತಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ವಾಸಂತಿ ವಸುಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.