ಚಾಮರಾಜನಗರ: ಒಪ್ಪೊತ್ತಿನ ಊಟಕ್ಕಾಗಿ ಸಾವಿರಾರು ಕಿ.ಮೀ ಪ್ರಯಾಣಿಸುವ ಬಡಕುಟುಂಬಗಳ ಕಥೆ ಇದು. ಬದುಕಿನ ಬಂಡಿ ಸಾಗಿಸಲು ಈ ಕುಟುಂಬಗಳಿಗೆ ಗೊತ್ತಿರುವುದು ಕಮ್ಮಾರಿಕೆ ಮಾತ್ರ.
ಅದೇ ಕೌಶಲವನ್ನು ಜೀವನಾಧಾರವಾಗಿ ಮಾಡಿ, ಅಗತ್ಯ ಸಲಕರಣೆಗಳನ್ನು ಗೂಡ್ಸ್ ರಿಕ್ಷಾದಲ್ಲಿ ತುಂಬಿಕೊಂಡು ಸಂಸಾರ ಸಮೇತ ದೇಶ ಸಂಚಾರ ಮಾಡುತ್ತಿವೆ ಈ ಕುಟುಂಬಗಳು.
ಮಹಾರಾಷ್ಟ್ರದ ಔರಂಗಬಾದ್‌ನ ಹಳ್ಳಿಯೊಂದರ ಕುಟುಂಬಗಳು ಜಿಲ್ಲೆಯಲ್ಲಿ ಒಂದು ವಾರದಿಂದ ಬೀಡುಬಿಟ್ಟಿವೆ. ಕಮ್ಮಾರ ಕುಟುಂಬದ ಗೂಡ್ಸ್ ರಿಕ್ಷಾಗಳು ಸೋಮವಾರ ಚಾಮರಾಜನಗರದ ಬೀದಿಗಳಲ್ಲಿ ಕಂಡು ಬಂದವು.
ಅರ್ಧ ಗಂಟೆ ಇದ್ದರೆ ಹೆಚ್ಚು: ಊರೂರು ಅಲೆಯುವ ಈ ಕುಟುಂಬಗಳು ಒಂದು ಊರಿನಲ್ಲಿ ಅರ್ಧ ಗಂಟೆ ಇದ್ದರೆ ಹೆಚ್ಚು. ರಸ್ತೆ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸುವ ಇವರು, ತಾವು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಕುಡಗೋಲು,ಕೊಡಲಿ, ಗುದ್ದಲಿ, ಪಿಕಾಸಿ, ಹಾರೆ, ಚಾಕು ಮತ್ತಿತರ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಯಾರಾದರೂ ದುರಸ್ತಿಗೆ ತಂದು ಕೊಟ್ಟರೆ, ಅಲ್ಲೇ ಕುಲುಮೆ ಸಿದ್ಧಪಡಿಸಿ, ಕಬ್ಬಿಣದ ವಸ್ತುಗಳನ್ನು ರಿಪೇರಿ ಮಾಡಿ ಕೊಡುತ್ತಾರೆ. ಆ ಬಳಿಕ ಅವರ ಸಂಚಾರ ಪಕ್ಕದ ಊರು ಅಥವಾ ಬೇರೆ ರಾಜ್ಯದತ್ತ ಸಾಗುತ್ತದೆ.
ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಕೃಷಿ ಉಪಯೋಗಿಹಾಗೂ ಗೃಹೋಪಯೋಗಿ ಕಬ್ಬಿಣದ ಸಾಮಾನುಗಳನ್ನು ಸಿದ್ಧಪಡಿಸುವ ಜೊತೆಗೆ ಮಾರಾಟವನ್ನೂ ಮಾಡುತ್ತಾರೆ.
ತಿ.ನರಸೀಪುರ, ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲೆಲ್ಲ ಸುತ್ತಾಡಿ ಸೋಮವಾರ ಚಾಮರಾಜನಗರಕ್ಕೆ ಬಂದಿದ್ದವು ಐದು ಕುಟುಂಬಗಳು.
ಮಹಿಳೆಯರ ಗಟ್ಟಿತನ: ಹೆಚ್ಚು ಶ್ರಮವನ್ನು ಬೇಡುವ ಕಮ್ಮಾರಿಕೆ ಕೆಲಸದಲ್ಲಿ ಮಹಿಳೆಯರೂ ಭಾಗಿಯಾಗುವುದು ವಿಶೇಷ. ಪುರುಷರಿಗೆ ಸಮನಾಗಿ ಮಹಿಳೆಯರು ಕೂಡ ಲಯಬದ್ಧವಾಗಿ ಕಾದ ಕಬ್ಬಿಣಕ್ಕೆ ಸುತ್ತಿಗೆಯಿಂದ ಬಡಿಯುತ್ತಾರೆ.
‘ಜೀವನ ನಿರ್ವಹಣೆಗಾಗಿ ರಾಜ್ಯ ಬಿಟ್ಟು ರಾಜ್ಯಕ್ಕೆ ಅಲೆದಾಡುತ್ತಿರುತ್ತೇವೆ. ದೀಪಾವಳಿಗೆ ಮಾತ್ರ ಊರಿಗೆ ಹೋಗುವುದು. ಹೆಚ್ಚೆಂದರೆ ಒಂದು ತಿಂಗಳು ಮಾತ್ರ ಇದ್ದು, ಮತ್ತೆ ನಮ್ಮ ವೃತ್ತಿಯಲ್ಲಿ ತೊಡಗಿ ಆಟೊ ಮೂಲಕ ಊರೂರು ಸುತ್ತುತ್ತೇವೆ. ದಿನಕ್ಕೆ₹ 500ರಿಂದ₹ 1000 ಸಾವಿರ ಸಿಕ್ಕರೆ ಅದೇ ಹೆಚ್ಚು. ಸಿದ್ಧಪಡಿಸಿರುವಕಬ್ಬಿಣದ ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಮಾರಾಟ ಮಾಡುತ್ತಿದ್ದೇವೆ. ಇದರಿಂದ ನಮ್ಮ ಜೀವನ ಸಾಗುತ್ತಿದೆ’ ಎಂದು ಕುಟುಂಬದ ಸದಸ್ಯಕಿರಣ್ ಮತ್ತು ಇವರ ಪತ್ನಿ ಶಾಂತಾಬಾಯಿ ‘ಪ್ರಜಾವಾಣಿ’ಗೆಹೇಳಿದರು.
‘ಜೀವನ ಸಾಗಿಸಲು ಕಷ್ಟ ಪಡುವುದು ಅನಿವಾರ್ಯ’
‘ಬಯಲು ಕುಲುಮೆಯೇ ನಮ್ಮ ವೃತ್ತಿಜೀವನವಾಗಿದೆ.ಒಂದೇ ಕಡೆ ಇದ್ದರೆ ವ್ಯಾಪಾರ ಆಗುವುದಿಲ್ಲ. ಆದ್ದರಿಂದಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ ಹೀಗೆ ನಾವು ಸುತ್ತಾಡುತ್ತಿದ್ದೇವೆ.ಸಂಸಾರ ಕಟ್ಟಿಕೊಂಡು ಹೋಗಲುಬಾಡಿಗೆ ಗೂಡ್ಸ್ ಆಟೊ ಬಳಸುತ್ತೇವೆ. ಕೆಲವರು ತಮ್ಮದೇ ಆದ ಆಟೊ ಹೊಂದಿದ್ದಾರೆ. ಇವುಗಳ ವೆಚ್ಚ ನಿಭಾಯಿಸುವುದು ಕಷ್ಟವಾದರೂ ಬದುಕಲು ಇದು ಅನಿವಾರ್ಯ. ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೇವೆ’ ಎಂದು ಕಿರಣ್‌ಹೇಳಿದರು.
ಬೆಲೆ ಎಷ್ಟು?: ‘ಚೂರಿ₹ 70, ಕುಡಗೋಲು₹ 120ರಿಂದ₹ 150, ಕೊಡಲಿ ಮತ್ತು ಮಚ್ಚು ₹ 150ರಿಂದ₹ 200, ಗುದ್ದಲಿ ₹ 200ರಿಂದ ₹ 250 ಹೀಗೆ 8ರಿಂದ 10ಕ್ಕೂ ಹೆಚ್ಚು ಕಬ್ಬಿಣದ ಪರಿಕರಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ ಮತ್ತು ಹಳೆಯ ಪರಿಕರಗಳನ್ನು ದುರಸ್ತಿ ಪಡಿಸುತ್ತೇವೆ’ ಎಂದು ಸಂಜು ಅವರು ಹೇಳಿದರು.
ಮೂರು ಭಾಷೆ ಗೊತ್ತು: ‘ನಾವುಮರಾಠಿ ಭಾಷೆ ಮಾತನಾಡುತ್ತೇವೆ. ನನಗೆಕನ್ನಡ ಸ್ವಲ್ಪ ಗೊತ್ತು. ಕನ್ನಡ, ಹಿಂದಿ, ಸ್ವಲ್ಪ ಇಂಗ್ಲಿಷ್... ಈ ಮೂರು ಭಾಷೆ ಅರ್ಥ ಆಗುತ್ತದೆ. ವ್ಯಾಪಾರಕ್ಕಾಗಿ ಇಂಗ್ಲಿಷ್, ಹಿಂದಿ ಕಲಿಯುವುದು ಅನಿವಾರ್ಯ’ ಎಂದು ಕಿರಣ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.