ADVERTISEMENT

ಗುಂಡ್ಲುಪೇಟೆ | ಮಡಹಳ್ಳಿ ಕುತನೂರು ಗುಡ್ಡದಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆ

ಗಣಿಗಾರಿಕೆ ಪ್ರದೇಶದ ಸುತ್ತಲಿನ ರೈತರ ಆರೋಪ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 2:57 IST
Last Updated 16 ಜುಲೈ 2025, 2:57 IST
ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಮಡಹಳ್ಳಿ ಹಾಗೂ ಕೂತನೂರು ಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆ
ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಮಡಹಳ್ಳಿ ಹಾಗೂ ಕೂತನೂರು ಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆ   

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಮಡಹಳ್ಳಿ ಹಾಗೂ ಕೂತನೂರು ಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಕ್ಕಪಕ್ಕದ ರೈತರಿಗೆ ತೊಂದರೆಯಾಗುತ್ತಿರುವ ದೂರುಗಳು ಕೇಳಿಬಂದಿದೆ.

ಕೂತನೂರು ಗ್ರಾಮದ ಸರ್ವೇ ನಂಬರ್ 368 ಹಾಗೂ ಮಡಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರ್ವೆ ನಂ371/2, 386/2 ರಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ರಕ್ಷಣಾ ಕ್ರಮಗಳನ್ನು ಅನುಸರಿಸದೆ ಗಣಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ಮಾಡಲಾಗುತ್ತಿದ್ದು ಸುತ್ತಮುತ್ತಲಿನ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ಆರೋಪಿಸಿದ್ದಾರೆ.

ಗಣಿಗಾರಿಕೆ ಮಾಡುವಾಗ ಸಿಡಿಯುವ ಕಲ್ಲುಗಳು ಅಕ್ಕಪಕ್ಕದ ರೈತರ ಜಮೀನುಗಳಿಗೆ ಬಂದು ಬೀಳುತ್ತಿವೆ. ಪರಿಣಾಮ ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ಭಯಬೀಳುವಂತಾಗಿದೆ. ಉಳುಮೆ ಮಾಡುವಾಗ, ನೀರು ಹಾಹಿಸುವಾಗ, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಾಗ ಯಾವಾಗ ಮೈಮೇಲೆ ಕಲ್ಲುಗಳು ಬೀಳುತ್ತವೆಯೋ ಎಂಬ ಆತಂಕ ಎದುರಾಗಿದೆ ಎನ್ನುತ್ತಾರೆ ರೈತರು.

ADVERTISEMENT

ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುವಾಗಿ ಸಿಡಿಯುವ ಕಲ್ಲುಗಳು ಬಿದ್ದು ದನಗಳ ಪ್ರಾಣಹಾನಿಯಾಗುವ ಭೀತಿ ಇದೆ. ರಾಸುಗಳನ್ನು ಜಮೀನಿನಲ್ಲಿ ಮೇಯಲು ಬಿಡಲು ಭಯವಾಗುತ್ತಿದೆ ಎಂದು ದೂರಿದ್ದಾರೆ.

ಗಣಿಗಾರಿಕೆ ನಡೆಯುತ್ತಿರುವ ಜಾಗದಲ್ಲಿ ಬೇಲಿ ಅಳವಡಿಸಲಾಗಿದ್ದು ಆಕಸ್ಮಿಕವಾಗಿ ಜಾನುವಾರುಗಳು ಗಣಿಗಾರಿಕೆ ನಡೆಯುವ ಜಾಗಕ್ಕೆ ಹೋದರೆ ಮರಳಿ ಕರೆತರಲು ಭಯವಾಗುತ್ತದೆ. ದೈತ್ಯಗಾತ್ರದ ಕಲ್ಲುಗಳು ನೂರಾರು ಅಡಿಗಳಷ್ಟು ಆಳವಿರುವ ಕಂದಕಗಳು ಭೀತಿ ಹುಟ್ಟಿಸುತ್ತಿವೆ ಎನ್ನುತ್ತಾರೆ ರೈತರು.

ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಗಣಿ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ನಿಯಮ ಉಲ್ಲಂಘನೆ ಮಾಡಿರುವವರಿಗೆ ನೋಟಿಸ್ ನೀಡಿದ್ದಾರೆಯೇ, ಇಲ್ಲವೇ ತಿಳಿಯುತ್ತಿಲ್ಲ. ಸರ್ಕಾರಿ ಜಾಗದಲ್ಲೂ ಗಣಿಗಾರಿಕೆ ನಡೆಯುತ್ತಿರುವ ಅನುಮಾನಗಳಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮಸ್ಥರಿಂದ ರೈತರಿಂದ ದೂರುಗಳು ಬಂದಾಗ ಮಾತ್ರ ಅಧಿಕಾರಿಗಳು ನೆಪಮಾತ್ರಕ್ಕೆ ಗಣಿಗಾರಿಕೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕಂದಾಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಡಿ ಗುರುತು ಮಾಡಿ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯ ಎಚ್.ಆರ್.ರಾಜಗೋಪಾಲ್ ಒತ್ತಾಯಿಸಿದ್ದಾರೆ.

ಹಿಂದೆ ಮಡಹಳ್ಳಿ ಗುಡ್ಡದ ಬಳಿ ನಡೆಯುತ್ತಿದ್ದ ಗಣಿಗಾಣಿಕೆ ವೇಳೆ ಗುಡ್ಡ ಕುಸಿದು ನಾಲ್ವರು ಜೀವಂತ ಸಮಾಧಿಯಾಗಿದ್ದರು. ಇಂತಹ ದುರ್ಘಟನೆ ಸಂಭವಿಸಿದ್ದರೂ ನಿಯಮ ಮೀರಿ ಗಣಿಗಾರಿಕೆ ನಡೆಯುತ್ತಿದ್ದು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ರಾಜಗೋಪಾಲ್ ದೂರಿದರು.

‘ಗಣಿಗಾರಿಕೆ ಸ್ತಬ್ಧ!’

‘ಈ ಭಾಗದಲ್ಲಿ ಬೆಳಿಗ್ಗಿನಿಂದ ರಾತ್ರಿವರೆಗೂ ನೂರಾರು ಲಾರಿಗಳು ಕ್ವಾರಿಗಳಿಂದ ಕಲ್ಲುಗಳನ್ನು ಕ್ರಷರ್ ಹಾಗೂ ನೆರೆಯ ರಾಜ್ಯ ಕೇರಳಕ್ಕೆ ಸಾಗಣೆ ಮಾಡುತ್ತಿದ್ದವು. ಸೋಮವಾರ ಅಧಿಕಾರಿಗಳು ಭೇಟಿ ನೀಡಿದ ಪರಿಣಾಮ ಅಕ್ರಮ ಕಲ್ಲು ಸಾಗಣೆ ಮಾಡುತ್ತಿದ್ದ ಲಾರಿಗಳು ಕಾರ್ಯ ನಿರ್ವಹಿಸದೆ ಅಲ್ಲಲ್ಲಿ ನಿಂತಿದ್ದವು. ಗಣಿಗಾರಿಕೆಯೂ ಸ್ತಬ್ಧವಾಗಿತ್ತು ’ ಎಂದು ಎಚ್.ಆರ್ ರಾಜಗೋಪಾಲ್  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.