ಗುಂಡ್ಲುಪೇಟೆ: ಶಿವಪುರದ ಕಲ್ಲುಕಟ್ಟೆ ಕೆರೆ ಮತ್ತು ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸದೆ ಇರುವುದನ್ನು ಖಂಡಿಸಿ ರೈತ ಒಕ್ಕೂಟದ ವತಿಯಿಂದ ಕಲ್ಲುಕಟ್ಟೆ ಕೆರೆ ಕೋಡಿ ಆವರಣದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ತಾಲ್ಲೂಕಿನ ಆಲಂಬೂರು ಏತ ನೀರಾವರಿಯ, ತಾಲ್ಲೂಕಿನ 4ನೇ ಹಂತದ ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತರ ಒಕ್ಕೂಟದ ಪದಾಧಿಕಾರಿಗಳು ಕಲ್ಲುಕಟ್ಟೆ ಕೆರೆ ಕೋಡಿ ಆವರಣದ ಮುಂದೆ ಜಮಾಯಿಸಿ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಧರಣಿನಿರತ ರೈತ ನಾಗರ್ಜುನ್ ಮಾತನಾಡಿ, ಆಲಂಬೂರು ಏತ ನೀರಾವರಿ ಯೋಜನೆಯ 4ನೇ ಹಂತದ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ಕಳೆದ ಮೂರು ವರ್ಷಗಳಿಂದಲೂ ನೀರು ತುಂಬಿಸಿಲ್ಲ. ಒಂದೆರಡು ಕೆರೆಗಳಿಗೆ ಸೀಮಿತವಾಗಿ ನೀರು ನಿಲುಗಡೆಯಾಗಿದೆ ಎಂದರು.
ಈ ಭಾಗದ 25 ಗ್ರಾಮಗಳಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೀರಾವರಿ ಮತ್ತು ವಾರ್ಷಿಕ ಬೆಳೆಯಿದ್ದು, ಸುಮಾರು ₹200 ಕೋಟಿ ವಹಿವಾಟು ನಡೆಯುತ್ತದೆ. ಇದರಿಂದ ತಾಲ್ಲೂಕಿನಲ್ಲಿ 60 ಸಾವಿರ ಮಂದಿ ಕೃಷಿ ಕಾರ್ಮಿಕರಿಗೆ ರೈತರು ಉದ್ಯೋಗ ಕೊಡುತ್ತಿದ್ದಾರೆ. ಕಳೆದ 110 ದಿನಗಳಿಂದ ನಮ್ಮ ಭಾಗದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕಾಗಿದ್ದು, ಘೋಷಣೆ ಆಗಿಲ್ಲ. ಇದರ ಜೊತೆಗೆ ನೀರಾವರಿ ಇಲಾಖೆಯವರು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಆದ್ದರಿಂದ ಕೂಡಲೇ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರಾವರಿ ಇಲಾಖೆ ಇಇ ಗುರುಪ್ರಸಾದ್ ಮತ್ತು ಮಹೇಶ್, ನೀರೆತ್ತುವ ಮೂರು ಮೋಟರ್ ಗಳು ದುರಸ್ತಿಗೆ ಬಂದಿರುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಮೋಟರ್ ಯಂತ್ರಗಳನ್ನು ದುರಸ್ತಿಗಾಗಿ ಪುಣೆಗೆ ಕಳುಹಿಸಲಾಗಿದೆ. ಅದು ಬಂದ ಕೂಡಲೇ ಸರಿಪಡಿಸಿ ನೀರು ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೈತರು, ಒಮ್ಮೆಲೆ ಮೂರು ಮೋಟರ್ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಕೆಲಸವನ್ನು ಇಲ್ಲಿಯತನಕ ಮಾಡಲಿಲ್ಲ. ಹೀಗಿದ್ದರೂ ಕೂಡ ಮೂರು ದುರಸ್ತಿಯಾಗಲು ಕಾರಣವೇನು? ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳಿಗೆ ಕಾಳಜಿಯಿಲ್ಲ. ಮೋಟರ್ ದುರಸ್ತಿಯಾಗುವ ತನಕ ನೀವು ಮನೆಗೆ ಹೋಗಬಾರದು ಎಂದು ಅಧಿಕಾರಿಗಳನ್ನು ಸ್ಥಳದಲ್ಲೇ ಕೂರಿಸಿಕೊಂಡರು.
ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಆಲಂಬೂರು ಏತ ನೀರಾವರಿ ಯೋಜನೆಯ 4ನೇ ಹಂತದ ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತರ ಒಕ್ಕೂಟದ 500ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.