ADVERTISEMENT

ಚಾಮರಾಜನಗರ | ತ್ರಿವರ್ಣ ರಂಗಿನಲ್ಲಿ ಮಿಂದೆದ್ದ ಜಿಲ್ಲೆ

ಚಾ.ನಗರದ ಎಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 8:07 IST
Last Updated 16 ಆಗಸ್ಟ್ 2025, 8:07 IST
ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು 
ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು    

ಚಾಮರಾಜನಗರ: ಜಿಲ್ಲಾ ಪೊಲೀಸ್ ಕವಾಯತು ಮೈದಾನದ ತುಂಬೆಲ್ಲ ಶುಕ್ರವಾರ ಸ್ವಾತಂತ್ರ್ಯೋತ್ಸವ ರಂಗು ತುಂಬಿಕೊಂಡಿತ್ತು. ಎಲ್ಲೆಡೆ ತ್ರಿವರ್ಣ ರಾರಾಜಿಸುತ್ತಿದ್ದವು. ಶ್ವೇತ ವಸ್ತ್ರಧಾರಿಗಳಾಗಿದ್ದ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರ‌ಧ್ವಜ ಹಿಡಿದು ಗಾಳಿಯಲ್ಲಿ ಹಾರಾಡಿಸುತ್ತ ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂತು.

ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ರಾಷ್ಟ್ರಧ್ವಜಾರೋಹಣ ನೆರವೇರಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ನೆರೆದಿದ್ದವರೆಲ್ಲರೂ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿ ರಾಷ್ಟ್ರಕ್ಕೆ ಗೌರವ ಸಮರ್ಪಣೆ ಮಾಡಿದರು.

ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್‌, ಅಬಕಾರಿ, ಗೃಹರಕ್ಷಕ ದಳ, ಶಾಲೆ, ಕಾಲೇಜು ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಪಥ ಸಂಚಲನ ನಡೆಸಿ ಗಮನ ಸೆಳೆದರು.

ADVERTISEMENT

  ಸಚಿವ ಕೆ.ವೆಂಕಟೇಶ್‌ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವ ಜಿಲ್ಲೆಯ ಹಲವು ಮಹನೀಯರಿಗೆ ಗೌರವ ಸಲ್ಲಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

‘ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಜೀವನ ಸಾಗಿಸಬೇಕು ಎಂಬ ಆಶಯದೊಂದಿಗೆ ಸರ್ಕಾರ ಹಲವು ಜನಪರ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗಡಿ ಜಿಲ್ಲೆ ಚಾಮರಾಜನಗರದ ಸರ್ವತೋಮುಖ ಅಭಿವೃದ್ಧಿಗೂ ಒತ್ತು ನೀಡಿದೆ’ ಎಂದು ಸಚಿವರು ಹೇಳಿದರು.

‘ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 2,78,080 ಮಹಿಳೆಯರು ಪ್ರತಿ ತಿಂಗಳು ₹2000 ಸಹಾಯಧನ ಪಡೆದಿದ್ದು , ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಮೊತ್ತವು  ಜಿಲ್ಲೆಯ 1,041 ಕೋಟಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ 2,73,190 ಗ್ರಾಹಕರು ನೋಂದಾಯಿಸಿಕೊಂಡಿದ್ದು , ಶೇ 99.82ರಷ್ಟು ನೋಂದಣಿಯಾಗಿದೆ. ₹ 204 ಕೋಟಿ ವೆಚ್ಚವಾಗಿದೆ’ ಎಂದು ಅವರು ತಿಳಿಸಿದರು.

‘ಅನ್ನಭಾಗ್ಯ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 5 ಕೆ.ಜಿ. ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಡಿಬಿಟಿ ಮೂಲಕ 5 ಕೆ.ಜಿ. ಅಕ್ಕಿ ವಿತರಣೆ ಮಾಡುತ್ತಿದೆ. ಜಿಲ್ಲೆಯಲ್ಲಿ 2,83,760 ಪಡಿತರ ಚೀಟಿಗಳಿದ್ದು , ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 42,000 ಕ್ವಿಂಟಲ್‌ ಅಕ್ಕಿ ಬಳಕೆಯಾಗುತ್ತಿದೆ. 8,65,861 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದರು.

‘ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ₹10.28 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಿದ್ದಾರೆ. ಯುವನಿಧಿ ಯೋಜನೆಯಡಿ 3,897 ಮಂದಿ ನೋಂದಣಿ ಮಾಡಿಕೊಂಡಿದ್ದು ₹6.79 ಕೋಟಿ ಜಮೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರ ನೀಡಿದರು.

‘ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಏ. 24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಯಶಸ್ವಿಯಾಗಿ ಸಚಿವ ಸಂಪುಟ ಸಭೆ ನಡೆದಿದ್ದು, ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು, ಮಾನವ ಪ್ರಾಣಿ ಸಂಘರ್ಷ ತಡೆಯಲು, ₹13 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ,  ಉಪನಾಲೆಗಳ ಆಧುನೀಕರಣ, ಮಾಲಂಗಿ ಕುಡಿಯುವ ನೀರಿನ ಯೋಜನೆ, ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಂಪುಟಸಭೆ ಅನುಮೋದನೆ ನೀಡಿದೆ’ ಎಂದರು.

‘ಬೆಳಕು ಕಾಣದ 31 ಹಾಡಿಗಳಿಗೆ ₹42 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಪಶುಸಂಗೋಪನಾ ಇಲಾಖೆಯಿಂದ ಜಿಲ್ಲೆಗೆ ₹6.90 ಕೋಟಿ ಅನುದಾನ ನೀಡಲಾಗಿದ್ದು, ಸಂತೇಮರಹಳ್ಳಿ, ಮಲಿಯೂರು, ಕೊತ್ತಲವಾಡಿ, ಹೊನ್ನಗೌಡನಹಳ್ಳಿ, ತೆರಕಣಾಂಬಿ, ಕಬ್ಬಳ್ಳಿ, ರಾಮಾಪುರ, ಮಲೆ ಮಹದೇಶ್ವರ ಬೆಟ್ಟ, ಯಳಂದೂರು, ಮಳವಳ್ಳಿ, ಕೊಡಸೋಗೆ, ಕಾಮಗೆರೆ, ಆಲೂರು ಗ್ರಾಮಗಳಲ್ಲಿ ಪಶುವೈದ್ಯ ಇಲಾಖೆಯ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.

‘ಸೋಮನಹಳ್ಳಿ ಗೂಳಿಪುರ, ಗೌಡಹಳ್ಳಿ, ಪಾಳ್ಯ, ಕೊಡಸೋಗೆ, ಕುದೇರಿನಲ್ಲಿ ಪಶುವೈದ್ಯ ಸಂಸ್ಥೆ, ಕೊಳ್ಳೇಗಾಲದಲ್ಲಿ ಪಶು ಆಸ್ಪತ್ರೆಯನ್ನು ಪಾಲಿ ಕ್ಲಿನಿಕ್ ಆಗಿ ಬದಲಾವಣೆ, ಜಾನುವಾರುಗೆ ಲಸಿಕೆ, 400 ಪಶುವೈದ್ಯಾಧಿಕಾರಿಗಳು, 285 ಕಿರಿಯ ಪಶುವೈದ್ಯಕೀಯ ಪರೀಕ್ಷಕರ ನೇಮಕಾತಿಯಾಗಿದೆ. ಮೃತ ಜಾನುವಾರು ಪರಿಹಾರ ಹೆಚ್ಚಳ, ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿ 1164 ಫಲಾನುಭವಿಗಳಿಗೆ ಮಿಶ್ರತಳಿ ಹಸು ವಿತರಿಸಲಾಗಿದೆ. ಸಂತೇಮರಹಳ್ಳಿ ಸರ್ಕಾರಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ ₹3 ಕೋಟಿ ಅನುದಾನ ನೀಡಲಾಗಿದೆ’ ಎಂದರು.

‘ಯಳಂದೂರು ತಾಲ್ಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣ, 18 ಆಯುಷ್ಮಾನ್ ಕೇಂದ್ರಗಳ ನಿರ್ಮಾಣ, ಯಳಂದೂರು, ರಾಮಾಪುರ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಘಟಕ, 64,263 ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅತಿಥಿ ಶಿಕ್ಷಕರ ನೇಮಕ, ಜೆಜೆಎಂ ಯೋಜನೆಯಡಿ 856 ಜನವಸತಿಗಳಲ್ಲಿ 1,021 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪರಿಶಿಷ್ಟ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ’ ಎಂದರು.

ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್‌.ಕೃಷ್ಣಮೂರ್ತಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ವಿ.ಚಂದ್ರು,  ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಎಸ್‌ಪಿ ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಇದ್ದರು. 

ರಾಷ್ಟ್ರಧ್ವಜಾರೋಹಣದ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಮನ ಸೆಳೆದ ಹೋರಾಟಗಾರರು
ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ  
ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಆಕರ್ಷಕ ಪಥ ಸಂಚಲನ ಡಿಎಆರ್‌ ಕೇಂದ್ರ ಸ್ಥಾನ

ಚಾಮರಾಜನಗರ ಸಿವಿಲ್ ಪೊಲೀಸ್ ತುಕಡಿ ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕರು ಅಬಕಾರಿ ಇಲಾಖೆ ಗೃಹ ರಕ್ಷಕ ದಳ–2 ನವೋದಯ ಎನ್‌ಸಿಸಿ ಹಾಗೂ ಶಾಲಾ ವಿದ್ಯಾರ್ಥಿಗಳು ಬಂಜಾರ ಇಂಡಿಯನ್ ಪ್ರೌಢಶಾಲೆ ಸಂತ ಜೋಸೆಫ್ ಶಾಲೆಯ ಗೈಡ್ಸ್ ಸೇವಾ ಭಾರತಿ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮ ಶಾಲೆ ಸಂತ ಪೌಲ್ ಶಾಲೆ ಎಂಸಿಎಸ್ ಪ್ರೌಢಶಾಲೆ ಬಾಲಕರ ಹಾಗೂ ಬಾಲಕಿಯರ ಸ್ಕೌಟ್ಸ್ ಜೆಎಸ್‌ಎಸ್‌ ಪ್ರೌಢಶಾಲೆಯ ಬಾಲಕ ಬಾಲಕಿಯರ ತಂಡ ಸಂತ ಫ್ರಾನ್ಸಿಸ್‌ ಪ್ರೌಢಶಾಲೆ ಶ್ರೀರಾಮಚಂದ್ರ ಪ್ರೌಢಶಾಲೆ ಆದರ್ಶ ವಿದ್ಯಾಲಯ ಎಂಇಟಿ ಪ್ರೌಢಶಾಲೆ ಸರ್ಕಾರಿ ಜ್ಯೂನಿಯರ್ ಕಾಲೇಜು ಪೊಲೀಸ್ ವಾದ್ಯವೃಂದ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು. 

ಫಲಿತಾಂಶ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಜೆಎಸ್‌ಎಸ್‌ ಪ್ರೌಢಶಾಲೆ ಪ್ರಥಮ ಸರ್ಕಾರಿ ಬಾಲಕಿಯರ ಶಾಲೆ ದ್ವಿತೀಯ ಆದರ್ಶ ವಿದ್ಯಾಲಯ ತೃತೀಯ ಸ್ಥಾನ ಪಡೆದವು. ಕವಾಯತು ತುಕಡಿಗಳು ಸಶಸ್ತ್ರ ವಿಭಾಗದಲ್ಲಿ ಜಿಲ್ಲಾ ಸಶಸ್ತ್ರ ಪಡೆ ಪ್ರಥಮ ಸಿವಿಲ್ ಪೊಲೀಸ್ ತುಕಡಿ ದ್ವಿತೀಯ ಮಹಿಳಾ ತುಕಡಿ ತೃತೀಯ ಸ್ಥಾನ ಪಡೆದವು ಶಸ್ತ್ರ ರಹಿತ ವಿಭಾಗದಲ್ಲಿ ಅರಣ್ಯ ಇಲಾಖೆ ಪ್ರಥಮ ಅಬಕಾರಿ ದ್ವಿತೀಯ ಗೃಹ ರಕ್ಷಕದಳ ತೃತೀಯ ಸ್ಥಾನ ಪಡೆದವು.

ಗೌರವ ಸಮರ್ಪಣೆ

ಅಪಘಾತದಲ್ಲಿ ಮೃತಪಟ್ಟು ಅಂಗಾಂಗ ದಾನ ಮಾಡಿದ ಮಹದೇವಯ್ಯ ಹಾಗೂ ಸುಬ್ರಹ್ಮಣ್ಯ ಕುಟುಂಬ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂತೇಮರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಶ್ರೇಯಾ ಯರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಉಮಾ ಮಹೇಶ್ವರಿ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಜೇಶ್ವರಿ ಜಿ ಕೊಳ್ಳೇಗಾಲ ತಾಲ್ಲೂಕಿನ ಸುರಪುರ ಸರ್ಕಾರಿ ಪ್ರೌಢಶಾಲೆಯ ಮಹದೇವಸ್ವಾಮಿ ಎನ್‌ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರಿನ  ಮಹೇಶ್ವರಿ ತೆರಕಣಾಂಬಿಯ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆಯ ಸಂಧ್ಯಾ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.