
ಚಾಮರಾಜನಗರ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ನೀಡುವುದರ ಜೊತೆಗೆ ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಸಂವಿಧಾನ ರಚಿಸಿ ಕೊಡುಗೆ ನೀಡಿದ್ದು ಎಲ್ಲರೂ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು’ ಎಂದರು.
‘ಸಂವಿಧಾನ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ನೀಡಿದ್ದು ಉಪಾಸನ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಸಮಾನ ಅವಕಾಶಗಳನ್ನು ನೀಡಿದೆ. ಮೂಲಭೂತ ಹಕ್ಕುಗಳನ್ನು ನೀಡಿರುವಂತೆಯೇ ಮೂಲಭೂತ ಕರ್ತವ್ಯಗಳನ್ನೂ ನೀಡಿದೆ. ಏಕತೆ, ಸಮಗ್ರತೆ, ಭ್ರಾತೃತ್ವವನ್ನು ಪ್ರತಿಪಾದಿಸುವ ಸಂವಿಧಾನ ಎಲ್ಲರಿಗೂ ವ್ಯಕ್ತಿಗೌರವ ನೀಡಿದೆ’ ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಸರ್ವರಿಗೂ ಸಮಪಾಲು, ಸಮ ಬಾಳು ಸಂವಿಧಾನದ ಆಶಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲರೂ ಸಮಾನರಾಗಿದ್ದು, ಧರ್ಮ, ಜಾತಿ, ಭಾಷೆ ಬೇರೆಯಾದರೂ ವಿವಿಧತೆಯಲ್ಲಿ ಏಕತೆಯನ್ನು ಸಂವಿಧಾನ ಪ್ರತಿಪಾದಿಸುತ್ತದೆ. ಸಂವಿಧಾನದ ಮಹತ್ವ ಹಾಗೂ ಆಶಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಲಾಗುತ್ತಿದೆ’ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಹಾಗೂ ಬಲಿಷ್ಠ ಸಂವಿಧಾನವಾಗಿದ್ದು ದೇಶದ ಏಕತೆ ಮತ್ತು ಸಮಗ್ರತೆಯನ್ನು ಪ್ರತಿಪಾದಿಸುತ್ತದೆ. ಘನತೆಯ ಜೀವನಕ್ಕೆ ಅವಕಾಶ ಕಲ್ಪಿಸಿದೆ’ ಎಂದರು.
ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲ ಪಿ.ದೇವರಾಜು ಮಾತನಾಡಿ, ‘ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ಸಂವಿಧಾನದ ಮುಖ್ಯ ಆಶಯಗಳಾಗಿದ್ದು ಭಾರತದ ಸಂವಿಧಾನ ವಿಶ್ವದ ಹಲವು ರಾಷ್ಟ್ರಗಳಿಗೆ ಪ್ರೇರಣೆ ಹಾಗೂ ಪ್ರಭಾವ ಬೀರಿದೆ. ಸಂವಿಧಾನದ ಆಶಯಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರುವಲ್ಲಿ ಸಾರ್ಥಕತೆ ಅಡಗಿದೆ’ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಕಾರ್ಯಕ್ರಮದಲ್ಲಿ ಇದ್ದರು.
‘ಸಂವಿಧಾನ ಪೀಠಿಕೆಯ ಮಾದರಿ’
ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಹಾಗೂ ಸಂವಿಧಾನ ಗ್ರಂಥದ ಮಾದರಿ ರಚಿಸಿದ್ದು ಗಮನ ಸೆಳೆಯಿತು. ವಿವಿಧ ರಾಜ್ಯಗಳ ಕಲೆ ಪರಂಪರೆ ಬಿಂಬಿಸುವ ವೇಷ ಭೂಷಣಗಳನ್ನು ತೊಟ್ಟಿದ್ದ ವಿದ್ಯಾರ್ಥಿಗಳು ರಂಜಿಸಿದರು. ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯ ಬೃಹತ್ ಪ್ರತಿಕೃತಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸಂವಿಧಾನ ಜಾಗೃತಿ ಜಾಥಾದಲ್ಲಿ ಅಂಬೇಡ್ಕರ್ ವೇಷ ಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.