ADVERTISEMENT

ಚಾಮರಾಜನಗರ: ಇಂದಿರಾ ಕ್ಯಾಂಟೀನ್‌ ಹೊಸ ಮೆನು ಇನ್ನೂ ತಡ

ಹೈಕೋರ್ಟ್‌ ಮೆಟ್ಟಿಲೇರಿರುವ ಗುತ್ತಿಗೆದಾರ ಸಂಸ್ಥೆ, ಪ್ರಕರಣ ವಾಪಸ್‌ ಪಡೆಯಲು ಸೂಚನೆ–ಅಧಿಕಾರಿಗಳ ಹೇಳಿಕೆ

ಸೂರ್ಯನಾರಾಯಣ ವಿ
Published 28 ಡಿಸೆಂಬರ್ 2023, 5:07 IST
Last Updated 28 ಡಿಸೆಂಬರ್ 2023, 5:07 IST
ಚಾಮರಾಜನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಬುಧವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ಜನರು
ಚಾಮರಾಜನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಬುಧವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ಜನರು   

ಚಾಮರಾಜನಗರ: ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್‌ನಲ್ಲಿ ಜನರಿಗೆ ನೀಡಲಾಗುವ ಆಹಾರದ ಮೆನು ಬದಲಾಯಿಸಿದೆ. ಕೆಲವು ಜಿಲ್ಲೆಗಳಲ್ಲಿ ಹೊಸ ಮೆನುವಿನಂತೆ ಜನರಿಗೆ ಆಹಾರ ಲಭ್ಯವಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಶುರುವಾಗಿಲ್ಲ. ಜನರು ಇನ್ನಷ್ಟು ದಿನ ಕಾಯಬೇಕಾಗಿದೆ. 

ಪ್ರಸ್ತುತ ಟೆಂಡರ್‌ ಪಡೆದಿರುವ ಚೆಫ್‌ಟಾಕ್‌ ಸಂಸ್ಥೆ, ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ತನ್ನನ್ನೇ ಮುಂದುವರಿಸಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಸೂಚಿಸಿದೆ. ಹಾಗಾಗಿ, ಹಳೆಯ ಮೆನುವಿನಂತೆಯೇ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಸಲಾಗುತ್ತಿದೆ. 

ಜಿಲ್ಲೆಯಲ್ಲಿ ಹನೂರು ಬಿಟ್ಟು ಉಳಿದ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ 4,500–5,000 ಜನರು ಈ ಕ್ಯಾಂಟೀನ್‌ಗಳ ಪ್ರಯೋಜನ ಪಡೆಯುತ್ತಿದ್ದಾರೆ.

ADVERTISEMENT

ಏನಿದೆ ಹೊಸ ಮೆನುವಿನಲ್ಲಿ: ಹೊಸ ಮೆನುವಿನ ಪ‍್ರಕಾರ, ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಎರಡು ರೀತಿಯ ಆಹಾರ ಲಭ್ಯವಿರುತ್ತದೆ. ವಾರದ ಏಳು ದಿನಗಳಲ್ಲೂ ಸಿದ್ಧಪಡಿಸಬೇಕಾದ ಆಹಾರದ ಪಟ್ಟಿಯನ್ನು ಪೌರಾಡಳಿತ ನಿರ್ದೇಶನಾಲಯ ಸಿದ್ಧಪಡಿಸಿದೆ. ಟೆಂಡರ್‌ ಪಡೆದ ಸಂಸ್ಥೆ ಅದರಂತೆ ಆಹಾರ ತಯಾರಿಸಿ ಜನರಿಗೆ ಒದಗಿಸಬೇಕು. 

ಬೆಳಿಗ್ಗೆ ಇಡ್ಲಿ– ಸಾಂಬಾರ್‌ ಜೊತೆಗೆ ಕೇಸರಿಬಾತ್‌, ಖಾರಾ ಬಾತ್‌ ಇಲ್ಲವೇ ಪುಳಿಯೊಗರೆ, ಪೊಂಗಲ್‌, ಪಲಾವ್‌, ಚಿತ್ರಾನ್ನ, ವಾಂಗೀಬಾತ್‌ ಇರಲಿದೆ. 

ಮಧ್ಯಾಹ್ನ ಅನ್ನ ಸಂಬಾರ್‌, ಕೀರಿನ ಜೊತೆಗೆ ಚಪಾತಿ, ಸಾಗು, ಮೊಸರನ್ನ ಅಥವಾ ರಾಗಿಮುದ್ದೆ, ಸೊಪ್ಪು ಸಾಂಬಾರ್‌ ಅಂಬಲಿ ಇರಲಿದೆ. ರಾತ್ರಿ ಕೂಡ ಇದೇ ಮೆನು ನಿಗದಿಪಡಿಸಲಾಗಿದೆ. 

ಯಾಕೆ ವಿಳಂಬ?: ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಮೆನು ಪ್ರಕಾರ ಆಹಾರ ಒದಗಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌ ಕರೆದಿತ್ತು. ಆದರೆ, ಇದನ್ನು ಪ್ರಶ್ನಿಸಿ ಗುತ್ತಿಗೆದಾರ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದರಿಂದಾಗಿ ಟೆಂಡರ್‌ ಪ್ರಕ್ರಿಯೆ ಸ್ಥಗಿತವಾಗಿದೆ. 

‘ಗುತ್ತಿಗೆ ಪಡೆದಿರುವ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಟೆಂಡರ್‌ ಅವಧಿ ಮುಗಿದ ನಂತರವೂ ಒಂದು ವರ್ಷ ಸೇವೆಯನ್ನು ವಿಸ್ತರಿಸಬಹುದು ಎಂದು ಹಿಂದೆ ಇದ್ದ ಅಧಿಕಾರಿ ಕಾರ್ಯಾದೇಶದಲ್ಲಿ ಬರೆದಿದ್ದರು. ಇದರ ಆಧಾರದಲ್ಲಿ ಚೆಫ್‌ಟಾಕ್‌ ಸಂಸ್ಥೆಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ಸಂಸ್ಥೆಯ ಮನವಿ ಪುರಸ್ಕರಿಸಿದ್ದ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಈ ಕಾರಣದಿಂದ ಜಿಲ್ಲೆಯಲ್ಲಿ ಹೊಸ ಮೆನುವಿನ ಅನುಷ್ಠಾನ ವಿಳಂಬವಾಗಿದೆ. ಸಂಸ್ಥೆ ಹೈಕೋರ್ಟ್‌ನಲ್ಲಿ ಹೂಡಿರುವ ದಾವೆಯನ್ನು ವಾಪಸ್‌ ಪಡೆದರೆ ಮಾತ್ರ ಹೊಸ ಟೆಂಡರ್‌ ಕರೆದು, ಕ್ಯಾಂಟೀನ್‌ಗಳಲ್ಲಿ ಹೊಸ ಮೆನುವಿನಂತೆ ಜನರಿಗೆ ತಿಂಡಿ, ಊಟ ಸಿಗಲಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ‘ಹೊಸ ಮೆನು ಅನುಷ್ಠಾನಕ್ಕೆ ನಾವು ಸಿದ್ಧತೆಯನ್ನು ಮಾಡಿಕೊಂಡಿದ್ದೆವು. ನ್ಯಾಯಾಲಯದ ಸೂಚನೆ ಕಾರಣಕ್ಕೆ ಅದು ಸ್ಥಗಿತವಾಗಿದೆ. ಹೈಕೋರ್ಟ್‌ನಲ್ಲಿ ಹೂಡಿರುವ ಪ್ರಕರಣವನ್ನು ವಾಪಸ್‌ ಪಡೆಯಿರಿ ಎಂದು ಸಂಸ್ಥೆಗೆ ತಿಳಿಸಿದ್ದೇವೆ. ಸಂಸ್ಥೆಯವರು ಅದಕ್ಕೆ ಒಪ್ಪಿದ್ದಾರೆ’ ಎಂದು ಹೇಳಿದರು. 

ಹನೂರಿನಲ್ಲಿ ಕ್ಯಾಂಟೀನ್‌ ಶೀಘ್ರ

ಈ ಮಧ್ಯೆ ಹನೂರಿನಲ್ಲಿ ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಲಿದೆ.  ರಾಜ್ಯ ಸಚಿವ ಸಂಪುಟವು ಇತ್ತೀಚೆಗೆ ರಾಜ್ಯದ ಮಹಾನಗರನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಅಡುಗೆ ಕೋಣೆ ಸಹಿತ 155 ಇಂದಿರಾ ಕ್ಯಾಂಟೀನ್‌ ಹಾಗೂ ಅಡುಗೆ ಕೋಣೆ ರಹಿತ 20 ಕ್ಯಾಂಟೀನ್‌ ಆರಂಭಿಸಲು ಅನುಮತಿ ನೀಡಿದ್ದು ಆ ಪಟ್ಟಿಯಲ್ಲಿ ಹನೂರು ಕೂಡ ಇದೆ.  ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದಾಗ ಹನೂರು ತಾಲ್ಲೂಕು ಕೇಂದ್ರವಾಗಿರಲಿಲ್ಲ. ಹೀಗಾಗಿ ಕ್ಯಾಂಟೀನ್‌ ಸೌಲಭ್ಯ ಸಿಕ್ಕಿರಲಿಲ್ಲ. ಆ ಬಳಿಕ ಬಂದ ಸರ್ಕಾರ ಹೊಸ ಕ್ಯಾಂಟೀನ್‌ ಆರಂಭಿಸಿರಲಿಲ್ಲ. ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಲೇ ಇತ್ತು.  ‘ಸರ್ಕಾರ ಹನೂರಿಗೂ ಕ್ಯಾಂಟೀನ್‌ ಮಂಜೂರು ಮಾಡಿದೆ. ಕ್ಯಾಂಟೀನ್‌ ನಿರ್ಮಾಣದ ಗುತ್ತಿಗೆಯನ್ನು ರಾಜ್ಯ ಮಟ್ಟದಲ್ಲಿ ನೀಡಲಾಗಿದೆ. ಎಂ.ಎಸ್‌ ಎಕ್ಸೆಲ್‌ ಪ್ರಿಕಾಸ್ಟ್‌ ಸೊಲ್ಯೂಷನ್ಸ್‌ ಸಂಸ್ಥೆಯು ₹84.35 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌ ನಿರ್ಮಿಸಲಿದೆ’ ಎಂದು ಸುಧಾ ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.