ADVERTISEMENT

ಬಸವ ಭವನ ಕೋರಿ ಗ್ರಾಮಸ್ಥರು ಬರೆದ ಮನವಿ ಪತ್ರದಲ್ಲಿ ಅಂಬೇಡ್ಕರ್‌ಗೆ ಅವಮಾನ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 4:58 IST
Last Updated 7 ಮಾರ್ಚ್ 2023, 4:58 IST
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪತ್ರ
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪತ್ರ    

ಚಾಮರಾಜನಗರ: ತಾಲ್ಲೂಕಿನ ಚನ್ನಪ್ಪನಪುರ ಗ್ರಾಮದಲ್ಲಿ ಬಸವ ಭವನ ಮತ್ತು ಮುಖ್ಯದ್ವಾರ ನಿರ್ಮಿಸಲು ಅನುದಾನ ನೀಡಬೇಕು ಎಂದು ಕೋರಿ ಗ್ರಾಮಸ್ಥರು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಸಲ್ಲಿಸಿರುವ ಮನವಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪತ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಫೆಬ್ರುವರಿ 12ರಂದು ಮನವಿ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಏನಿದೆ?: 'ಚನ್ನಪ್ಪನಪುರದ ಗ್ರಾಮಸ್ಥರು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮ ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಹಾಗೂ ನಮ್ಮ ಗ್ರಾಮಕ್ಕೆ ಬೇರೆ ಗ್ರಾಮದವರು ಬಂದಾಗ ಅವರು ದಲಿತರ ಬೀದಿ ಕಡೆಗೆ ಹೋಗಿ, ಅಲ್ಲಿನ ಅಂಬೇಡ್ಕರ್ ಆರ್ಚ್ ನೋಡಿ ನಮ್ಮ ವೀರಶೈವ ಲಿಂಗಾಯತ ಬೀದಿಗೆ ಬರುತ್ತಿದ್ದಾರೆ. ಆದುದರಿಂದ ತಾವು ನಮ್ಮ ಗ್ರಾಮಕ್ಕೆ ಬಸವ ಭವನ ಮತ್ತು ಬಸವ ಆರ್ಚ್ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಈ ಮೂಲಕ ತಮ್ಮಲ್ಲಿ ಕೇಳುತ್ರಿದ್ದೇವೆ‌' ಎಂದು ಪತ್ರದಲ್ಲಿ ಬರೆಯಲಾಗಿದೆ.

ADVERTISEMENT

'ಬೇರೆ ಗ್ರಾಮದವರು ದಲಿತರ ಬೀದಿ ಕಡೆಗೆ ಹೋಗಿ, ಅಂಬೇಡ್ಕರ್ ಆರ್ಚ್ ನೋಡಿ ವೀರಶೈವ ಲಿಂಗಾಯತರ ಬೀದಿಗೆ ಬರುತ್ತಿದ್ದಾರೆ' ಎಂಬ ಒಕ್ಕಣೆ ಬಗ್ಗೆ ದಲಿತ ಸಂಘಟನೆಗಳು, ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಷಮೆ ಕೋರಲು ಆಗ್ರಹ: ಬಸವ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಚನ್ನಪ್ಪನಪುರ ಗ್ರಾಮಸ್ಥರು ಅಂಬೇಡ್ಕರ್ ಅವರಿಗೆ ಅಪಮಾನವೆಸಗಿದ್ದಾರೆ ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಆರೋಪಿಸಿದ್ದಾರೆ.

'ಈ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಖ್ಯದ್ವಾರವನ್ನು ನೋಡಲಾರದ ಮನಃಸ್ಥಿತಿ ಮೇಲ್ವರ್ಗಗಳಿಗೆ ಇಂದಿಗೂ ಇರುವುದನ್ನು ನೋಡಿದರೆ ದುಃಖವಾಗುತ್ತದೆ. ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರಾದರೂ ಇದನ್ನು ಗಮನಿಸಬೇಕಿತ್ತು. ಚನ್ನಪ್ಪನಪುರ ಗ್ರಾಮದ ವೀರಶೈವ ಲಿಂಗಾಯತ ಸಮುದಾಯದವರು ಹಾಗೂ ಎಂ.ರುದ್ರೇಶ್ ಈ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಈ ಕುರಿತು ದೂರು ದಾಖಲು ಮಾಡಿ, ಪ್ರತಿಭಟನೆ ನಡೆಸಲಾಗುವುದು' ಎಂದು ಹೇಳಿದ್ದಾರೆ.

'ಫೆ.12ರಂದು ಪತ್ರ ಬರೆಯಲಾಗಿದೆ. ನಮಗೆ ಈಗ ಸಿಕ್ಕಿದೆ. ಕ್ಷಮೆ ಕೋರಬೇಕು ಎಂಬುದು ನಮ್ಮ ಆಗ್ರಹ. ಇಲ್ಲದಿದ್ದರೆ ಬುಧವಾರದಿಂದ ಹೋರಾಟ ಮಾಡಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.