ADVERTISEMENT

ಜೀವ ವೈವಿಧ್ಯ ಸಮಿತಿ ಬಲಪಡಿಸಿ: ಅಶೀಸರ

ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ: ಜಾಗೃತಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:42 IST
Last Updated 22 ಜುಲೈ 2021, 16:42 IST
ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಗಿಡ ನೆಟ್ಟು ನೀರೆರೆಯುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು
ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಗಿಡ ನೆಟ್ಟು ನೀರೆರೆಯುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು   

ಚಾಮರಾಜನಗರ: ‌‘ಜಿಲ್ಲೆಯಲ್ಲಿರುವ ಜೀವ ವೈವಿಧ್ಯಗಳ ರಕ್ಷಣೆಗಾಗಿ ತಳ ಮಟ್ಟದಿಂದ ಹಿಡಿದು ಜಿಲ್ಲಾ ಪಂಚಾಯಿತಿ ಮಟ್ಟಗಳವರೆಗಿನ ಜೀವ ವೈವಿಧ್ಯ ಸಮಿತಿಗಳನ್ನು ಬಲಪಡಿಸುವ ಕೆಲಸ ಆಗಬೇಕು’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಗುರುವಾರ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಜೀವವೈವಿಧ್ಯ ದಿನದ ಅಂಗವಾಗಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಶೇ 50ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಯಲ್ಲಿಜೀವ ವೈವಿಧ್ಯ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿ ಅಪರೂಪದ ಸಸ್ಯ ಪ್ರಬೇಧಗಳನ್ನು ಕಾಣಬಹುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜೀವ ವೈವಿಧ್ಯ ದಾಖಲಾತಿ ನಡೆಸಲಾಗಿದೆ. ಜೀವ ವೈವಿಧ್ಯ ಸಮಿತಿಗಳನ್ನು ಬಲಪಡಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದರು.

‘ಪ್ರಾಣಿ ಹಾಗೂ ಸಸ್ಯಸಂಕುಲಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಎಲ್ಲ ಜೀವವೈವಿಧ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂವಿನಾಶದಂಚಿನಲ್ಲಿರುವ ಜೀವಸಂಕುಲಗಳ ವೈಜ್ಞಾನಿಕ ನಿರ್ವಹಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಹಯೋಗದೊಂದಿಗೆ ಜುಲೈ 2ರಿಂದ ಆಗಸ್ಟ್ 15ರವರೆಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಆದಿವಾಸಿಗಳ ಹಿತ ಕಾಯಿರಿ: ‘ಜೀವ ವೈವಿಧ್ಯಗಳ ರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ಹಿರಿದು. ಅವರ ಕಷ್ಟಗಳಿಗೆ ನಾವು ಧ್ವನಿಯಾಗಬೇಕಾಗಿದೆ. ಸರ್ಕಾರ, ಇಲಾಖೆಗಳು ವನವಾಸಿಗಳ ಬಳಿ ಹೋಗಿ, ಅವರಿಗಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಹಿತ ಕಾಪಾಡಬೇಕು. ಡೀಮ್ಡ್‌ ಅರಣ್ಯಗಳ ರಕ್ಷಣೆಗೆ ಹಾಗೂ ಕೆರೆ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು’ ಎಂದು ಅನಂತ ಹೆಗಡೆ ಅಶೀಸರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜೇನು ಕೃಷಿ ಉತ್ತೇಜಿಸಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಜೇನು ಕೃಷಿಯ ಬಗ್ಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜೇನು ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವಂತೆ ಸಲಹೆ ನೀಡಿದರು. ಈ ಭಾಗದ ರೈತರನ್ನು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಕರೆದೊಯ್ದು ಜೇನು ಕೃಷಿ ವಿಧಾನಗಳ ಬಗ್ಗೆ ತರಬೇತಿ ಕೊಡುವಂತೆ ಸಲಹೆ ನೀಡಿದರು. ಹಲಸಿನ ಉತ್ಪನ್ನಗಳ ಮೌಲ್ಯ ವರ್ಧನೆಗೆ ಪ್ರೋತ್ಸಾಹ ನೀಡವಂತೆಯೂ ಸೂಚಿಸಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಿ.ಎಚ್‌.ವೆಂಕಟೇಶ್‌ ಹಾಗೂ ಗಿಡಗಳ ಸಂರಕ್ಷಣೆಯಲ್ಲಿ ತೊಡಗಿರುವ ಬಿಳಿಗಿರಿ ರಂಗನಬೆಟ್ಟದ ಬಂಗ್ಲೆ ಪೋಡಿನ ರಾಮೇಗೌಡ ಅವರನ್ನು ಸನ್ಮಾನಿಸಿದರು.

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹಾಗೂ ಉಡಿಗಾಲ, ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಹಾಗೂ ಲೊಕ್ಕನಹಳ್ಳಿ ಮತ್ತು ಯಳಂದೂರು ತಾಲ್ಲೂಕಿನ ಅಗರ ಗ್ರಾಮ ಪಂಚಾಯಿತಿ ವತಿಯಿಂದ ತಯಾರಿಸಲಾಗಿರುವ ಜೀವವೈವಿಧ್ಯತೆಗಳ ಕುರಿತ ಪಿ.ಬಿ.ಆರ್ ದಾಖಲಾತಿ ಪುಸ್ತಕ ಹಾಗೂ ಸಿಡಿಗಳನ್ನು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಸಂತೋಷ್ ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ.ರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ,ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪ್ರಭು, ಕಾರ್ಯದರ್ಶಿ ಮಹದೇವಸ್ವಾಮಿ ಇತರರು ಇದ್ದರು.

ಇದಕ್ಕೂ ಮೊದಲು ಅನಂತ ಹೆಗಡೆ ಅಶೀಸರ ಅವರು ನಗರದ ಸಾಮಾಜಿಕ ಅರಣ್ಯ ವಿಭಾಗದ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ಜೀವವೈವಿಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.

‘ಅಳಿವಿನಂಚಿನಲ್ಲಿರುವ ಸಸ್ಯ, ಬೆಳೆ ರಕ್ಷಿಸಿ’

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಜೀವವೈವಿಧ್ಯ ಸಮಿತಿಗಳು ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಸೀಮಿತವಾಗದೇ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಿಗೂ ಪ್ರಾಮುಖ್ಯ ನೀಡಬೇಕು. ಕೃಷಿ, ತೋಟಗಾರಿಕೆಯ ಅಪರೂಪದ ತಳಿಗಳನ್ನು ಗುರುತಿಸಿ ರೈತರಿಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಅನಂತ ಹೆಗಡೆ ಅಶೀಸರ ಅವರು ಹೇಳಿದರು.

‘ಜೀವ ವೈವಿಧ್ಯ ಸಮಿತಿಗಳ ಮೂಲಕ ಅರಣ್ಯ ಪ್ರದೇಶದಲ್ಲಿ ಪಾರಂಪರಿಕ ತಾಣಗಳನ್ನು ಗುರುತಿಸಿ ಅಳಿವಿನಂಚಿನಲ್ಲಿರುವ ಸಸ್ಯಪ್ರಬೇಧಗಳಾದ ಶ್ರೀಗಂಧ, ರಕ್ತಚಂದನ, ನೆಲ್ಲಿ ಸೇರಿದಂತೆ ಇತರೆ ಗಿಡಮೂಲಿಕೆ ಸಸ್ಯಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.