ADVERTISEMENT

ಕೊಳ್ಳೇಗಾಲ: ನೀರಾವರಿ ಇಲಾಖೆ ವೈಫಲ್ಯ ಖಂಡಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 5:07 IST
Last Updated 18 ಜುಲೈ 2025, 5:07 IST
ಕೊಳ್ಳೇಗಾಲ ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೀರಾವರಿ ಇಲಾಖೆಯ ವೈಫಲ್ಯಗಳನ್ನು ಖಂಡಿಸಿ ನಗರದ ಹೆದ್ದಾರಿ ರಸ್ತೆ ತಡೆದು ಗುರುವಾರ ಪ್ರತಿಭಟನೆ ಮಾಡಿದರು.
ಕೊಳ್ಳೇಗಾಲ ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೀರಾವರಿ ಇಲಾಖೆಯ ವೈಫಲ್ಯಗಳನ್ನು ಖಂಡಿಸಿ ನಗರದ ಹೆದ್ದಾರಿ ರಸ್ತೆ ತಡೆದು ಗುರುವಾರ ಪ್ರತಿಭಟನೆ ಮಾಡಿದರು.   

ಕೊಳ್ಳೇಗಾಲ: ಇಲ್ಲಿನ ನೀರಾವರಿ ಇಲಾಖೆಯ ವೈಫಲ್ಯಗಳನ್ನು ಖಂಡಿಸಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಕಾರ್ಯಕರ್ತರು ನಗರದ ಹೆದ್ದಾರಿ ರಸ್ತೆ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಐಬಿ ವೃತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು  ಘೋಷಣೆ ಕೂಗಿದರು. ಹೆದ್ದಾರಿ ತಡೆಯಿಂದ 10 ನಿಮಿಷ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಚಾಲಕರು, ಪ್ರಯಾಣಿಕರು ಪರದಾಡುವಂತಾಯಿತು.  ಪ್ರತಿಭಟನಾಕಾರರು  ಕಾವೇರಿ ನೀರಾವರಿ ಇಲಾಖೆ ಕಚೇರಿ ಮುಂದೆ ಧರಣಿ ಕುಳಿತರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಳ್ಳಿ ಸೋಮಣ್ಣ ಮಾತನಾಡಿ, ‘ನೀರಾವರಿ ಇಲಾಖೆ ಅದಿಕಾರಿಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೆ.  ಮಳೆಗಾಲ ಆರಂಭವಾಗಿದ್ದು, ತಾಲ್ಲೂಕಿನ  ಯಾವ ನಾಲೆಯನ್ನೂ ಸ್ವಚ್ಛ ಮಾಡಿಲ್ಲ, ಹೂಳು ತೆಗೆದಿಲ್ಲ. ಗುಂಡಾಲ್ ಜಲಾಶಯದಿಂದ ನೀರು ಬರುವ ಕಾಲುವೆಗಳನ್ನು ಅನೇಕರು  ಒತ್ತುವರಿ ಮಾಡಿದ್ದಾರೆ. ನಾಲೆಯಲ್ಲಿ ನೀರು  ಹರಿಯುತ್ತಿಲ್ಲ . ಅನೇಕ ಕೆರೆಗಳನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ.

ADVERTISEMENT

ಕೆರೆಗಳ ಹೂಳು ತೆಗೆಯದ್ದರಿಂದ ನೀರು ಸಂಗ್ರಹ ಆಗುತ್ತಿಲ್ಲ. ರೈತರಿಗೆ ತೊಂದರೆ ಉಂಟಾಗುತ್ತಿದೆ. ನೀರಾವರಿ ಇಲಾಖೆಗೆ ದೂರು ನೀಡಿದರೂ ಸ್ಪಂದಿಸಿಲ್ಲ. ಹಾಗಾಗಿ ಪ್ರತಿಭಟನೆ  ಅನಿವಾರ್ಯವಾಗಿದೆ.  ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ನೀರಾವರಿ ಇಲಾಖೆಯ ಪ್ರಭಾರ ಇಇ ಈರಣ್ಣ   ಉತ್ತರಿಸಿದ ಬಳಿಕ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.
 
ರೈತ ಸಂಘ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಸವರಾಜು ಕಾಮಗೆರೆ, ಹನೂರು ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕರಾಜು, ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ, ಪವನ್, ಮುಖಂಡ ದಶರಥ, ರಾಮಕೃಷ್ಣ, ವಾಸು ಇದ್ದರು.

‘ಅನುದಾನ ಬಂದಿದೆ; ಶೀಘ್ರ ಕ್ರಮ’

ನೀರಾವರಿ ಇಲಾಖೆಯ ಪ್ರಭಾರ ಇಇ ಈರಣ್ಣ ಮಾತನಾಡಿ ‘ಕಾಲುವೆಗಳನ್ನು ಸ್ವಚ್ಛ ಮಾಡಲು ಅನುದಾನ ದೊರೆತಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿಸಿ  ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು. ಕೆರೆಗಳ ಹೂಳು ತೆಗೆಯಲಾಗುವುದು. ಕೆಲ ಅಧಿಕಾರಿಗಳು ಕಾಲುವೆಗಳನ್ನು ಅಸಮರ್ಪಕವಾಗಿ ಸ್ವಚ್ಛತೆ ಮಾಡಿದ್ದಾರೆ ಎಂಬುದಾಗಿ ಹೇಳುತ್ತಿದ್ದೀರಿ ಅವರನ್ನು ಕರೆಯಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.