ಚಾಮರಾಜನಗರ: ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ವಿಜ್ಞಾನ ಹಾಗೂ ಉಪಗ್ರಹಗಳ ಪಾತ್ರ ಮಹತ್ವದ್ದಾಗಿದೆ ಎಂದು ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ಸಹ ನಿರ್ದೇಶಕ ರಾಮನಗೌಡ ವಿ.ನಾಡಗೌಡ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಯು.ಆರ್.ರಾವ್ ಉಪಗ್ರಹ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ, ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ ಇಸ್ರೋದ ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ತಂತ್ರಜ್ಞಾನ ಆಧಾರಿತ ಉಪಗ್ರಹಗಳನ್ನು ಉತ್ಪಾದಿಸುವ ಕಾರ್ಯದಲ್ಲಿ ನಿರತವಾಗಿದೆ. ಉಪಗ್ರಹಗಳು ಭೂವೀಕ್ಷಣೆ, ಸಂಪರ್ಕ ಸೇವೆ, ಬೆಳೆ ಸಮೀಕ್ಷೆ ಸೇರಿದಂತೆ ದೇಶದ ಗಡಿಯಲ್ಲಿ ನಡೆಯುವ ಗೂಢಾಚಾರದಂತಹ ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ಸಹಾಯ ಮಾಡುತ್ತವೆ.
ಪ್ರಕೃತಿ ವಿಕೋಪಗಳ ಗುರುತಿಸುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ದುಷ್ಪರಿಣಾಮಗಳ ಪ್ರಮಾಣವನ್ನು ತಗ್ಗಿಸಲು ಉಪಗ್ರಹಗಳು ನೆರವಾಗಿವೆ. ಭೂಮಿಯಲ್ಲಿ ನೀರಿನ ಸಂಶೋಧನೆ, ಅರಣ್ಯ ಸಮೀಕ್ಷೆಗಳಿಗೂ ಉಪಗ್ರಹಗಳು ಅಗತ್ಯವಾಗಿ ಬೇಕಾಗಿದೆ ಎಂದರು.
ಮೊದಲ ಉಪಗ್ರಹ ಸ್ಪುತ್ನಿಕ್ ಉಡಾವಣೆಯ ಸ್ಮರಣಾರ್ಥ ಹಾಗೂ ವಿಶ್ವ ಅಂತರಿಕ್ಷ ಒಪ್ಪಂದದ ಸ್ಮರಣಾರ್ಥ ವಿಶ್ವಸಂಸ್ಥೆಯು ವಿಜ್ಞಾನಿಗಳಿಗೆ, ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನದ ಮೇಲಿನ ಆಸಕ್ತಿ ಹೆಚ್ಚಿಸಲು ಹಾಗೂ ಅರಿವು ಮೂಡಿಸಲು ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಆಯೋಜಿಸುತ್ತಾ ಬಂದಿದೆ. ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಇಸ್ರೋ ಸಂಸ್ಥೆಯು ವಿಶ್ವದ 5 ಬಲಿಷ್ಠ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿರುವುದು ದೇಶದ ಹೆಮ್ಮೆಯಾಗಿದೆ. ವಿಕ್ರಂ ಸಾರಾಬಾಯಿ ವಿಜ್ಞಾನ ಕ್ಷೇತ್ರ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಹಾಕಿಕೊಟ್ಟ ಬುನಾದಿ ಅವಿಸ್ಮರಣೀಯವಾಗಿದ್ದು ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಛಾಪು ಮೂಡಿಸಲು ಕಾರಣವಾಗಿದೆ. ಸ್ಪಷ್ವವಾದ ಯೋಜನೆ ಮತ್ತು ಯೋಚಿಸಿ ಮಾಡುವ ಕೆಲಸ ಯಶಸ್ವಿಯಾಗುತ್ತದೆ. ವಿದ್ಯಾರ್ಥಿಗಳು ಆಸಕ್ತ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿ, ವಿಷಯವನ್ನು ಗ್ರಹಿಸಿ ಮುನ್ನಡೆಯಬೇಕು, ಅಧ್ಯಯನ ಅವಧಿಯಲ್ಲಿ ಸಾಮೂಹಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಹ್ಯಾಕಾಶ ಕ್ಷೇತ್ರಕ್ಕೆ ಯು.ಆರ್.ರಾವ್ ಅವರ ಕೊಡುಗೆ ಅಪಾರವಾಗಿದ್ದು ಅಮೆರಿಕಾದ ಸ್ಪೇಸ್ ಎಕ್ಸ್‌ನಲ್ಲೂ ರಾವ್ ಅವರಿಗೆ ಗೌರವ ಸಲ್ಲಿಸಲಾಗುತ್ತಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ರಾಮನಗೌಡ ವಿ.ನಾಡಗೌಡ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ ‘ಪ್ರಸ್ತುತ ವಿಜ್ಞಾನ ಬದುಕಿನ ಭಾಗವಾಗಿದೆ. ಶಾಲಾ ಹಂತದಲ್ಲಿ ವಿಜ್ಞಾನ ವಿಚಾರಗಳತ್ತ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು, ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಶೋಧನೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹೆಚ್.ಎನ್.ಪುಟ್ಟಗೌರಮ್ಮ, ಡಿಡಿಪಿಐ ಎಸ್.ಚಂದ್ರ ಪಾಟೀಲ್, ಗ್ರಾವಿಟಿ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಎ.ಎಸ್.ಅಭಿಷೇಕ್, ವಿಜ್ಞಾನಿಗಳಾದ ಸಂಜೀವ್ ಕುಮಾರ್, ಪ್ರಿಯಾಂಕ, ರಾಜೇಶ್ವರಿ, ವಿಷ್ಣು ಕಿಶೋರ್ ಪೈ, ಪ್ರಸಾದ್ ಮಂಜುನಾಥ್, ವೈಜ್ಞಾನಿಕ ಅಧಿಕಾರಿಗಳಾದ ರಚನಾ ಕಾರ್ಯಕ್ರಮದಲ್ಲಿ ಇದ್ದರು.
ಹಲವು ಉಪಗ್ರಹಗಳ ಮಾದರಿ ಪ್ರದರ್ಶನ ಬಾಹ್ಯಾಕಾಶ ಕ್ಷೇತ್ರದ ಸಮಗ್ರ ಮಾಹಿತಿ ವಿಜ್ಞಾನದತ್ತ ಆಸಕ್ತಿ ಕೆರಳಿಸಲು ಬಾಹ್ಯಾಕಾಶ ಸಪ್ತಾಹ
‘ಹೆಣ್ಣು ಮಕ್ಕಳಲ್ಲಿ ಹಿಂಜರಿಕೆ ಬೇಡ’
‘ವಿದ್ಯಾರ್ಥಿಗಳು ವಿಷಯಗಳ ಕಲಿಕೆಗೆ ಸದಾ ಕುತೂಹಲಿಗಳಾಗಿರಬೇಕು ವಿಜ್ಞಾನದಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆಯೂ ಮಾಹಿತಿ ಪಡೆಯಬೇಕು ಅಧ್ಯಯನಾಸಕ್ತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಸಾಧನೆ ಮಾಡಬಹುದು. ಜಿಲ್ಲೆಯಲ್ಲಿ ಹೆಣ್ಣುಮಕ್ಕಳು ಉನ್ನತ ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ತೋರದಿರುವುದು ಬೇಸರದ ಸಂಗತಿ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಸಾಧನೆ ಮಾಡುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಹಿಂಜರಿಕೆ ತೋರಬಾರದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಬದ್ಧತೆಯಿಂದ ತೊಡಗಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.