ADVERTISEMENT

ಡೇರಿ ಹಿತ ಕಾಯಲು ಶ್ರಮಿಸಿ

ಚೆಕ್ ವಿತರಣೆ: ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:50 IST
Last Updated 11 ಜುಲೈ 2025, 6:50 IST
ಗುಂಡ್ಲುಪೇಟೆಯಲ್ಲಿ ಡೇರಿ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಚಾಮುಲ್‌ನ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡುವ ನಿವೃತ್ತಿ ಪರಿಹಾರ ಚೆಕ್ ಅನ್ನು ನಿರ್ದೇಶಕ ಎಂ.ಪಿ.ಸುನೀಲ್ ವಿತರಿಸಿದರು
ಗುಂಡ್ಲುಪೇಟೆಯಲ್ಲಿ ಡೇರಿ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಚಾಮುಲ್‌ನ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡುವ ನಿವೃತ್ತಿ ಪರಿಹಾರ ಚೆಕ್ ಅನ್ನು ನಿರ್ದೇಶಕ ಎಂ.ಪಿ.ಸುನೀಲ್ ವಿತರಿಸಿದರು   

ಗುಂಡ್ಲುಪೇಟೆ: ಹಾಲು ಉತ್ಪಾದಕರ ಹಿತ ಕಾಯುವ ನಿಟ್ಟಿನಲ್ಲಿ ಡೇರಿ ಅಧಿಕಾರಿ ಮತ್ತು ನೌಕರರು ಶ್ರಮಿಸಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ತಿಳಿಸಿದರು.

ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೇರಿ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಚಾಮುಲ್‌ನ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡುವ ನಿವೃತ್ತಿ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮತ್ತು ನೌಕರರ ನಿವೃತ್ತಿ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂದು ನಿವೃತ್ತಿ ಪರಿಹಾರ ಚೆಕ್ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಹಾಲು ಉತ್ಪಾದಕರು ಮತ್ತು ಒಕ್ಕೂಟದ ನಡುವೆ ಸಂಪರ್ಕ ಸೇತುವಾಗಿ ಕೆಲಸ ನಿರ್ವಹಿಸುವ ಅಧಿಕಾರಿ ಮತ್ತು ನೌಕರರು ನಿವೃತ್ತಿ ಸಮಯದಲ್ಲಿ ಬರಿಗೈನಲ್ಲಿ ಮನೆಗೆ ಹೋಗಬೇಕಾಗಿತ್ತು. ಇದರಿಂದ ಗಳಿಕೆ ಇಲ್ಲದೇ ಅಧಿಕಾರಿ ಮತ್ತು ನೌಕರರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ವಿಷಯ ತಿಳಿಯಿತು. ಹೀಗಾಗಿ ಆಡಳಿತ ಮಂಡಳಿಯವರು, ಅಧಿಕಾರಿಗಳು, ನೌಕರರು ಒಗ್ಗೂಡಿ ನಿವೃತ್ತಿ ಪರಿಹಾರ ನೀಡುವ ಸಂಬಂಧ ತೀರ್ಮಾನಕ್ಕೆ ಬಂದೆವು. ನಾನು ಅಧ್ಯಕ್ಷನಾಗಿದ್ದಾಗ ಆಡಳಿತ ಮಂಡಳಿ ಮೊದಲ ಸಭೆಯಲ್ಲಿ ಅನುಮೋದನೆ ಕೊಡಿಸುವ ವ್ಯವಸ್ಥೆ ಮಾಡಿದೆ. ಈಗ ತಾಲ್ಲೂಕಿನಲ್ಲೇ ನೂರಕ್ಕೂ ಹೆಚ್ಚು ಮಂದಿ ₹2 ರಿಂದ ₹3 ಕೋಟಿ ನಿವೃತ್ತಿ ಪರಿಹಾರದ ಚೆಕ್‍ನ ಹಣ ಪಡೆದಿದ್ದಾರೆ. ಈಗ ಕೆಲಸ ನಿರ್ವಹಿಸುವ ಮಂದಿಯೂ ಶ್ರಮ ವಹಿಸಿ ಕೆಲಸ ಮಾಡಲೆಂದು ಇಂತಹ ಪ್ರೋತ್ಸಾಹ ಯೋಜನೆ ಜಾರಿ ಮಾಡಲಾಗಿದೆ. ಆದ್ದರಿಂದ ನೌಕರರು ಗುಣಮಟ್ಟ ಹಾಲು ಶೇಖರಣೆ ಮೂಲಕ ಸಂಘದ ಏಳಿಗೆಗೆ ಶ್ರಮಿಸುವ ಪ್ರಯತ್ನ ಮಾಡಬೇಕು ಎಂದರು.

ADVERTISEMENT

ಹಾಲು ಉತ್ಪಾದಕ ಸಹಕಾರ ಸಂಘಗಳ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸೋಮಹಳ್ಳಿ ಶಿವನಾಗಪ್ಪ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಪೂರೈಕೆಯಾಗುವ 13 ಒಕ್ಕೂಟಗಳಲ್ಲಿ ಇಂದಿಗೂ ನಿವೃತ್ತಿ ಪರಿಹಾರ ಕೊಡುತ್ತಿಲ್ಲ. ಆದರೆ ನಮ್ಮಲ್ಲಿ ಲಾಭ ಕಡಿಮೆ ಇದ್ದರೂ ನೌಕರರು ಬರಿಗೈನಲ್ಲಿ ಮನೆಗೆ ಹೋಗಬಾರದೆಂದು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಜಾರಿಗೆ ತಂದ ಯೋಜನೆ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.

ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗೆ ₹5 ಲಕ್ಷ, ಹಾಲು ಪರೀಕ್ಷಕರಿಗೆ ₹3 ಲಕ್ಷ ಮತ್ತು ಇತರೆ ನೌಕರರಿಗೆ ₹2 ಲಕ್ಷ ನಿವೃತ್ತಿ ಪರಿಹಾರ ಕೊಡುವ ಕಾರಣ ಅವರು ಬದುಕು ಹಸನಾಗುತ್ತಿದೆ. ವಿಸ್ತರಣಾಧಿಕಾರಿಗಳು ಎಲ್ಲಾ ಡೇರಿಗಳಲ್ಲೂ ನೌಕರರ ಭವಿಷ್ಯ ನಿಧಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡೇರಿ ನಿವೃತ್ತ ಸಿಇಒಗಳಾದ ಶಿವನಾಗಪ್ಪ, ಕೊಂಗಳ್ಳಶೆಟ್ಟಿ ಮತ್ತು ಸಿದ್ದೇಗೌಡ ರಿಗೆ ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ನಿವೃತ್ತಿ ಪರಿಹಾರದ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿಗಳಾದ ಎಚ್.ಪ್ರಕಾಶ್, ಸಿದ್ದಲಿಂಗೇಶ್ವರಕೋಟಿ, ಮಂಜೇಶ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.