ADVERTISEMENT

ಬೆಲ್ಲ ಹರಾಜು ವಿಳಂಬ; ಎಪಿಎಂಸಿ ಅಧಿಕಾರಿಗಳು ನೆರವಿಗೆ ಧಾವಿಸಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:29 IST
Last Updated 10 ನವೆಂಬರ್ 2025, 2:29 IST
ಚಾಮರಾಜನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲ್ಲ ಮಾರಾಟ ಮಾಡಲು ಬಂದಿರುವ ರೈತರು
ಚಾಮರಾಜನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲ್ಲ ಮಾರಾಟ ಮಾಡಲು ಬಂದಿರುವ ರೈತರು   

ಚಾಮರಾಜನಗರ: ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಹಾಗೂ ಶನಿವಾರ ನಡೆಯುವ ಬೆಲ್ಲ ಹರಾಜು ಪ್ರಕ್ರಿಯೆಯಲ್ಲಿ ವರ್ತಕರು ಸಮಯಕ್ಕೆ ಸರಿಯಾಗಿ ಭಾಗವಹಿಸದೆ ಮಾರಾಟಗಾರರಿಗೆ ತೊಂದರೆಯಾಗುತ್ತಿದ್ದರೂ, ಎಪಿಎಂಸಿ ಅಧಿಕಾರಿಗಳು ನೆರವಿಗೆ ಧಾವಿಸುತ್ತಿಲ್ಲ ಎಂದು ಬೆಲ್ಲ ಮಾರಾಟಗಾರರು ದೂರಿದ್ದಾರೆ.

ಹಿಂದೆ ಚಾಮರಾಜನಗರ ಎಪಿಎಂಸಿ ಬೆಲ್ಲ ಮಾರುಕಟ್ಟೆಗೆ ಪ್ರಸಿದ್ಧಿಯಾಗಿದ್ದು ತಮಿಳುನಾಡು, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಿಂದ ವರ್ತಕರು ಭಾಗವಹಿಸಿ ಬೆಲ್ಲ ಖರೀದಿ ಮಾಡುತ್ತಿದ್ದರು. ಕನಿಷ್ಠ 15 ರಿಂದ 20 ಲಕ್ಷ ಬೆಲ್ಲದ ಅಚ್ಚು ಮಾರಾಟವಾಗುತ್ತಿತ್ತು. ಈಚೆಗೆ ಎಪಿಎಂಸಿಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬೆಲ್ಲದ ಅವಕ ಕಡಿಮೆಯಾಗುತ್ತಿದೆ. 2 ಲಕ್ಷ ಬೆಲ್ಲದ ಅಚ್ಚು ಎಪಿಎಂಸಿಗೆ ಬರುವುದೇ ಕಷ್ಟವಾಗಿದೆ ಎಂದು ಮಾರಾಟಗಾರರು ದೂರಿದ್ದಾರೆ.

‘ಬೆಲ್ಲ ಖರೀದಿ ಮಾಡಲು ವರ್ತಕರು ಬರುತ್ತಿಲ್ಲ. ಬೆರಳೆಣಿಕೆ ರೈತರು ಬೆಲ್ಲ ತಂದು ಕಾದರೂ ಮಧ್ಯಾಹ್ನವಾದರೂ ವರ್ತಕರ ಸುಳಿವು ಇರುವುದಿಲ್ಲ. ಬೆಲ್ಲ ಮಾರಾಟಕ್ಕಾಗಿ ಕಾದು ರೈತರು ಬಸವಳಿಯುತ್ತಿದ್ದಾರೆ. ಕೃಷಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬೆಲ್ಲವನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ರೈತರಾದ ಉಮ್ಮತ್ತೂರು ಮಹದೇವಸ್ವಾಮಿ  ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಂತೆಗೆ ಬೆಲ್ಲ ಮಾರಾಟ ಮಾಡಲು ಬರುವ ರೈತರು 6 ತಿಂಗಳ ಹಿಂದೆಯೇ ಎಪಿಎಂಸಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ವರ್ತಕರ ವಿಳಂಬ ಧೋರಣೆಯಿಂದ ಬೆಲ್ಲಕ್ಕೆ ಉತ್ತಮ ದರವೂ ಸಿಗುತ್ತಿಲ್ಲ, ಮಾರಾಟವೂ ತಡವಾಗುತ್ತಿದೆ’ ಎಂದು ರೈತರು ದೂರಿದ್ದಾರೆ.

ಎಪಿಎಂಸಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಬೆಳಗ್ಗೆ 9 ಗಂಟೆಯೊಳಗೆ ಬೆಲ್ಲ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ರೈತರಿಗೆ ಉತ್ತಮ ದರ ದೊರೆಯುವಂತೆ ನೋಡಿಕೊಳ್ಳಬೇಕು, ಇಲ್ಲವಾದರೆ ಹರಾಜಿನಲ್ಲಿ ಭಾಗವಹಿಸದೆ ಎಪಿಎಂಸಿ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಬೆಲ್ಲದ ಹರಾಜು ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು ವರ್ತಕರು ಹಾಗೂ ರೈತರ ಸಭೆ ಕರೆದು ಹರಾಜಿಗೆ ಸೂಕ್ತ ಸಮಯ ನಿಗದಿ ಮಾಡುವುದಾಗಿ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.