ಚಾಮರಾಜನಗರ: ಅಂಗನವಾಡಿ ಕೇಂದ್ರದ ಮುಂದಿರುವ ವಿದ್ಯುತ್ ಕಂಬ ಸ್ಥಳಾಂತರಿಸಿ, ನಗರದಲ್ಲಿರುವ ಸರ್ವೀಸ್ ಸ್ಟೇಷನ್‌ಗೆ ಹೆಚ್ಚುವರಿ ವಾಹನ ಸೌಲಭ್ಯ ಒದಗಿಸಿ, ಗ್ರಾಮದ ಮಧ್ಯೆ ಇರುವ ಅಪಾಯಕಾರಿ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಿ.. ಹೀಗೆ, ಗ್ರಾಹಕರು ದೂರುಗಳ ಪಟ್ಟಿಯನ್ನು ಸೆಸ್ಕ್ ಉಪ ವಿಭಾಗ ಕಚೇರಿಯ ಆವರಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಬಳಿ ಮುಂದಿಟ್ಟರು.
ಭಾರತ್ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಶ್ ಮಾತನಾಡಿ, ‘ಹಂಡ್ರಕಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಇರುವ ವಿದ್ಯುತ್ ಕಂಬ ವಾಲಿಕೊಂಡಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಆಕಸ್ಮಿಕವಾಗಿ ಕಂಬದಲ್ಲಿ ವಿದ್ಯುತ್ ಪ್ರವಹಿಸಿದರೆ ಮಕ್ಕಳ ಜೀವಕ್ಕೆ ಹಾನಿಯಾಗುವ ಅಪಾಯ ಇರುವುದರಿಂದ ತುರ್ತಾಗಿ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.
ಮೂಡ್ಲುಪುರ ಗ್ರಾಮದಲ್ಲಿ ಎಬಿ ಕೇಬಲ್‌ಗೆ ಹೆಚ್ಚುವರಿ ಟಿ.ಸಿ ಅಳವಡಿಕೆ ಮಾಡಬೇಕು ಎಂದು ಗ್ರಾಮಸ್ಥರೊಬ್ಬರು ಮನವಿ ಸಲ್ಲಿಸಿದರು. ಮಾದಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಸೆಕೆಂಡರಿ ರಿಕಂಡಕ್ಟರ್ ಮಾಡಿಕೊಡುವಂತೆ ಅಹವಾಲು ನೀಡಲಾಯಿತು.
ಬೇಡರಪುರ ಗ್ರಾಮದ ನಾಗೇಂದ್ರ ಮಾತನಾಡಿ, ‘ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ತಂತಿ ತುಂಡಾಗುತ್ತಿವೆ. ಅಧಿಕಾರಿಗಳಿಗೆ ಸ್ಪಂದಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ’ ಎಂದು ದೂರಿದರು. ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಅಗತ್ಯ ಸಂಖ್ಯೆಯ ಲೈನ್‌ಮನ್‌ಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮೂಡ್ಲುಪುರ ನಾಗರಾಜ ಮಾತನಾಡಿ, ‘ಕರೆಂಟ್ ಹೋದರೆ ತಕ್ಷಣ ಬರುವುದಿಲ್ಲ. ಲೈನ್‌ಮನ್‌ಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಜಂಗಲ್ ಕಟಿಂಗ್ ನಡೆದಿಲ್ಲ. ಮೂಡ್ಲುಪುರ ಗ್ರಾಮಕ್ಕೆ ಹೆಚ್ಚುವರಿ ಟಿಸಿ ಅಳವಡಿಸಬೇಕು’ ಎಂದು ಮನವಿ ಮಾಡಿದರು.
ರಾಮಸಮುದ್ರ ನಾಗರಾಜು ಮಾತನಾಡಿ, ‘ನಗರದ ಟಾಟಾ ಶೋರೂಂ ಬಳಿ ಟಿಸಿ ಅಳವಡಿಕೆಗೆ ಹಣ ಪಡೆಯಲಾಗಿದ್ದು ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಗ್ರಾಹಕರ ದೂರುಗಳಿಗೆ ಸ್ಪಂದಿಸಿದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್ ‘ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು’ ಎಂದರು.
ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ, ಸಹಾಯಕ ಎಂಜಿನಿಯರ್ ಪ್ರವೀಣ್ ಸಿ.ಎಸ್, ನಾಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ಮಂಗಳಗೌರಿ, ಮಹದೇವಸ್ವಾಮಿ, ಚಂದ್ರನಾಯಕ ಇದ್ದರು.
‘ಹೆಚ್ಚುವರಿ ವಾಹನ ವ್ಯವಸ್ಥೆ ಮಾಡಿ’
ಚಾಮರಾಜನಗರದಲ್ಲಿರುವ ಸರ್ವೀಸ್ ಸ್ಟೇಷನ್‌ನಲ್ಲಿ ಕೇವಲ ಒಂದು ಸೇವಾ ವಾಹನ ಇರುವುದರಿಂದ ಮಳೆಗಾಲದಲ್ಲಿ ಗಾಳಿ ಮಳೆಗೆ ವಿದ್ಯುತ್ ವ್ಯತ್ಯಯ ಉಂಟಾದಾಗ ತುರ್ತು ಸ್ಪಂದನೆ ದೊರೆಯುತ್ತಿಲ್ಲ. ಸಾರ್ವಜನಿಕರು ಸುದೀರ್ಘ ಅವಧಿಯವರೆಗೂ ಕತ್ತಲಿನಲ್ಲಿ ಕಾಲ ಕಳೆಯಬೇಕು. ರಾಮಸಮುದ್ರದಲ್ಲಿ ಸಮಸ್ಯೆ ಗಂಭೀರವಾಗಿದೆ. ಹೆಚ್ಚುವರಿ ವಾಹನದ ವ್ಯವಸ್ಥೆ ಮಾಡಿದರೆ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬಹುದು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.