ಚಾಮರಾಜನಗರ: ‘ನಿರುದ್ಯೋಗ ಸಮಸ್ಯೆ ನಿವಾರಣೆಗೆ, ಯುವಜನತೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಉದ್ಯೋಗಮೇಳಗಳು ಸಹಕಾರಿ’ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಉದ್ಯೋಗ ವಿನಿಮಯ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಉದ್ಯೋಗ ಉತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲು ಹೆಚ್ಚೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಉದ್ಯೋಗ ಸೃಷ್ಟಿಗೆ ಪೂರಕವಾಗಿ ಆಯೋಜಿಸುತ್ತಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ. ದುಡಿಯುವ ಛಲ ಇರುವವವರಿಗೆ ಸರ್ಕಾರಿ ಉದ್ಯೋಗವೇ ಬೇಕು ಎಂದಿಲ್ಲ. ಯಾವುದೇ ಕ್ಷೇತ್ರದಲ್ಲಿಯಾದರೂ ಉದ್ಯೋಗ ಮಾಡಲು ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.
‘ಪಿಯುಸಿ, ಪದವಿ ಮುಗಿಸಿದ ಬಳಿಕ ಭವಿಷ್ಯದ ಪ್ರಶ್ನೆ ಕಾಡುವುದು ಸಹಜ. ಹೀಗೆ ಎದುರಾಗುವ ಸವಾಲುಗಳಿಗೆ ಉದ್ಯೋಗ ಮೇಳಗಳು ಪರಿಹಾರ ಒದಗಿಸಲಿವೆ. ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು. ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಅನ್ಯ ರಾಜ್ಯಗಳಿಂದ ಹಲವು ಕಂಪನಿಗಳು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು. ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವರ್ಷಕ್ಕೆ ಎರಡು ಬಾರಿ ಉದ್ಯೋಗ ಮೇಳ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ಇಲ್ಲದೆ ನಡೆಯುವ ಉದ್ಯೋಗ ಮೇಳಗಳು ಕಂಪನಿಗಳು ಹಾಗೂ ನಿರುದ್ಯೋಗಿಗಳ ಮಧ್ಯೆ ನೇರ ಸಂವಹನ ನಡೆಯುವ ವೇದಿಕೆಯಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕು.ಮಹಮ್ಮದ್ ಅಕ್ಬರ್, ಜಿಲ್ಲಾ ಕೌಶಲಾಭಿವೃದ್ಧಿ ಉದ್ಯೋಗಾಧಿಕಾರಿ
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಮಾತನಾಡಿ, ‘ನಿರುದ್ಯೋಗ ಸಮಸ್ಯೆ ನಿವಾರಣೆಯೇ ಉದ್ಯೋಗ ಮೇಳ ಆಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕಾದ ಅನಿವಾರ್ಯತೆ ಇದೆ’ ಎಂದರು.
‘ಭಾರತೀಯ ಸ್ಟೇಟ್ ಬ್ಯಾಂಕ್‌ನ ಮೈಸೂರು ವಿಭಾಗದ ವ್ಯವಸ್ಥಾಪಕ ಕೆ.ಎಂ.ನಾಗರಾಜು ಮಾತನಾಡಿ, ಯಾವ ಕಂಪೆನಿಗಳಲ್ಲಿ ಎಷ್ಟು ಉದ್ಯೋಗಗಳು ಖಾಲಿ ಇವೆ ಎಂಬ ಮಾಹಿತಿ ನಿರುದ್ಯೋಗಿಗಳಿಗೆ ತಲುಪಿಸುವ ಅಗತ್ಯವಿದೆ. ಉದ್ಯೋಗಾಕಾಂಕ್ಷಿಗಳು ವೇತನವನ್ನೇ ಪ್ರಮುಖ ಆದ್ಯತೆಯನ್ನಾಗಿ ಮಾಡಿಕೊಳ್ಳದೆ ಕೌಶಲ ಆಧಾರಿತ ಉದ್ಯೋಗಗಳಿಗೆ ಒತ್ತು ನೀಡಬೇಕು’ ಎಂದರು.
ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಆರ್.ಲೋಕನಾಥ್, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಜಿ.ವಿ.ವೆಂಕಟರಮಣ, ಉದ್ಯೋಗ ಮೇಳದ ಸಂಯೋಜಕ ಡಾ.ಮಹದೇವಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು.
ಹಲವು ಕಂಪನಿಗಳು ಭಾಗಿ
ಉದ್ಯೋಗ ಮೇಳದಲ್ಲಿ ಟೊಯೋಟ ರಿಲಯನ್ಸ್ ಮಣಿಪಾಲ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಪ್ಲಾಂಟೆಕ್ ಟೆಕ್ನೋಟಾಸ್ಕ್ ಭಾರತೀಯ ಜೀವ ವಿಮಾ ಕಂಪನಿ ನ್ಯೂ ಆಪಾರ್ಚುನಿಟಿ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಜೆ.ಕೆ ಟೈರ್ ಆಕ್ಸಿಸ್ ಬ್ಯಾಂಕ್ ಆರ್.ಬಿ ಟೆಕ್ ಮುತ್ತೂಟ್ ಮೈಕ್ರೋ ಫಿನ್ ಮೆಡ್ ಪ್ಲಸ್ ಬಿಎಸ್‌ಎಸ್ ಮೈಕ್ರೋ ಫಿನ್ ಸೇರಿದಂತೆ 17 ಕಂಪನಿಗಳು ಭಾಗವಹಿಸಿದ್ದವು. ಮೇಳಕ್ಕೆ ನೋಂದಣಿ ಮಾಡಿಕೊಂಡಿದ್ದ 746 ಅಭ್ಯರ್ಥಿಗಳ ಪೈಕಿ 83 ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾದರು. ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ 147 ಮಂದಿ ಉದ್ಯೋಗ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.