ADVERTISEMENT

ಉದ್ಯೋಗ ಮೇಳ; 729 ಯುವಜನರು ಭಾಗಿ

ಜಿಲ್ಲಾಡಳಿತದಿಂದ ಆಯೋಜನೆ; 25 ಕಂಪೆನಿಗಳ ಮಳಿಗೆ, 57 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 16:24 IST
Last Updated 30 ನವೆಂಬರ್ 2022, 16:24 IST
ಉದ್ಯೋಗ ಮೇಳದಲ್ಲಿ ಮಳಿಗೆಯೊಂದರ ಮುಂದೆ ಕಂಡು ಬಂದ ಉದ್ಯೋಗಾಕಾಂಕ್ಷಿಗಳು
ಉದ್ಯೋಗ ಮೇಳದಲ್ಲಿ ಮಳಿಗೆಯೊಂದರ ಮುಂದೆ ಕಂಡು ಬಂದ ಉದ್ಯೋಗಾಕಾಂಕ್ಷಿಗಳು   

ಚಾಮರಾಜನಗರ:ಜಿಲ್ಲಾಡಳಿತ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (ಎನ್‌ಸಿಎಸ್‌ಪಿ) ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬೃಹತ್‌ ಉದ್ಯೋಗ ಮೇಳದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 729 ಮಂದಿ ಯುವಕ ಯುವತಿಯರು ಭಾಗವಹಿಸಿದರು. ಈ ಪೈಕಿ 57 ಮಂದಿಯನ್ನು ವಿವಿಧ ಕಂಪನಿಗಳು ಉದ್ಯೋಗಕ್ಕೆ ಆಯ್ಕೆಮಾಡಿವೆ.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಕಲರ್‌ಟೋನ್‌, ಏರ್‌ಟೆಲ್‌, ಎನ್‌ಎನ್‌ವಿ ಅಡ್ವಾನ್ಸ್‌, ವಿಜಿಪಿ ಎಂಟರ್‌ಪ್ರೈಸಸ್‌, ಸ್ವಾತಂತ್ರ ಮೈಕ್ರೊ ಫೈನಾನ್ಸ್‌ ಸೇರಿದಂತೆ 25 ಕಂಪನಿಗಳು ಭಾಗವಹಿಸಿದ್ದವು.

ಉದ್ಯೋಗ ಮೇಳದಲ್ಲಿ 417 ಪುರುಷರು ಹಾಗೂ 312 ಮಹಿಳಾ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಯುವಕ ಯುವತಿಯರು ಎಲ್ಲ ಮಳಿಗೆಗಳಿಗೆ ತೆರಳಿ ಉದ್ಯೋಗದ ಬಗ್ಗೆ ಮಾಹಿತಿ ಪಡೆದು, ತಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ಅರ್ಹತೆಗಳ ವಿವರಗಳನ್ನು ಸಲ್ಲಿಸಿದರು. ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಲರ್‌ಟೋನ್‌ ಟೆಕ್ಸ್‌ಟೈಲ್ಸ್‌ ಕಂಪನಿ ತೆರೆದಿದ್ದ ಮಳಿಗೆಯ ಮುಂದೆ ಜನಸಂದಣಿ ಹೆಚ್ಚು ಕಂಡು ಬಂತು.

ADVERTISEMENT

ಸದುಪಯೋಗ ಪಡಿಸಿಕೊಳ್ಳಿ: ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅವರು, ‘ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ಇಲ್ಲಿಯೇ ಉದ್ಯೋಗ ಮೇಳ ಆಯೋಜಿಸಲಾಗಿದೆ.ಜಿಲ್ಲೆಯಲ್ಲಿ ಕಾರ್ಖಾನೆಗಳು, ಕಂಪನಿಗಳು ಕಡಿಮೆ ಇರುವುದರಿಂದ ಎಲ್ಲರಿಗೂ ಇಲ್ಲಿಯೇ ಉದ್ಯೋಗ ಸಿಗಲು ಸಾಧ್ಯವಿಲ್ಲ. ಹೊರಗಡೆಯೂ ಕೆಲಸ ಮಾಡುವುದಕ್ಕೆ ಸಿದ್ಧರಿರಬೇಕಾಗುತ್ತದೆ. ಸರ್ಕಾರಿ ಉದ್ಯೋಗವೇ ಬೇಕು ಎನ್ನುವುದು ಸರಿಯಲ್ಲ. ರಾಜ್ಯದಲ್ಲಿರುವ ಎಲ್ಲರಿಗೂ ಸರ್ಕಾರಿ ಹುದ್ದೆಯನ್ನು ಕೊಡಲು ಸಾಧ್ಯವಿಲ್ಲ’ ಎಂದರು.

‘ನಿರುದ್ಯೋಗಿಗಳಾಗಿ ಕೂರುವ ಬದಲು ಸಿಗುವ ಕೆಲಸದಲ್ಲಿ ಉತ್ತಮ ಅನುಭವ ಹಾಗೂ ತರಬೇತಿ ಪಡೆದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಕೌಶಲ ತರಬೇತಿಗಳನ್ನು ಪಡೆದಾಗ ಉತ್ತಮ ಉದ್ಯೋಗವನ್ನು ಪಡೆಯಬಹುದು’ ಎಂದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ‘ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಇರಬೇಕು. ಉದ್ಯೋಗ ಸಿಕ್ಕಾಗ ಹಿಂಜರಿಯದೇ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅಲ್ಲದೇ ಒಂದು ಉದ್ಯೋಗದಲ್ಲಿ ಪಡೆದುಕೊಂಡ ಕೌಶಲ ತರಬೇತಿ ಮುಂದಿನ ಉದ್ಯೋಗಗಳಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ವಿವಿಧ ಕಂಪನಿಗಳಿಗೆ ಆಯ್ಕೆಯಾದ ಉದ್ಯೋಗಕಾಂಕ್ಷಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕಿ ಸಾಧನಾ ಅಶ್ವಥ್ ಕೋಟೆ, ಜಿಲ್ಲಾ ಉದ್ಯೋಗ ಅಧಿಕಾರಿ ಮಹಮ್ಮದ್ ಅಕ್ಬರ್, ಕೈಗಾರಿಕಾ ಇಲಾಖೆಯ ರಾಜೇಂದ್ರ ಪ್ರಸಾದ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಯೋಗೇಶ್, ನಗರಸಭಾ ಆಯುಕ್ತ ರಾಮದಾಸ್, ಕಲರ್‌ಟೋಲ್‌ ಟೆಕ್ಸ್‌ಟೈಲ್ಸ್‌ನ ಪ್ರಶಾಂತ್ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.