ಚಾಮರಾಜನಗರ: ಕ್ರೀಡೆ ಜೀವನದಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಆರೋಗ್ಯ ಹಾಗೂ ಮನಃಶಾಂತಿ ನೀಡುತ್ತದೆ ಎಂದು ಅಂತರರಾಷ್ಟ್ರೀಯ ಹಾಕಿಪಟು ಎಂ.ಎನ್.ನೀಲನ್ ಸಲಹೆ ನೀಡಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಓದಿನ ನಡುವೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯ ಹವ್ಯಾಸ ರೂಢಿಸಿಕೊಂಡರೆ ಅಧ್ಯಯನದತ್ತ ಆಸಕ್ತಿ ಹೆಚ್ಚಾಗುತ್ತದೆ, ಬದಲಾದ ಜೀವನಶೈಲಿಯಿಂದ ಬರುತ್ತಿರುವ ಮಧುಮೇಹ, ಬೊಜ್ಜಿನಂತಹ ಕಾಯಿಲೆಗಳಿಂದ ದೂರವಿರಲಿ ಕ್ರೀಡೆ ಸಹಕಾರಿಯಾಗಲಿದೆ’ ಎಂದರು.
‘ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಖೇಲೋ ಇಂಡಿಯಾ ಸುವರ್ಣಾವಕಾಶವಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಊಟ, ವಸತಿ, ತರಬೇತಿ ಸಹಿತ ಕ್ರೀಡಾಪರಿಗಳನ್ನು ಕೇಂದ್ರ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡುವ ಹೆಬ್ಬಯಕೆ ಹೊಂದಿರುವವರಿಗೆ ಖೇಲೋ ಇಂಡಿಯಾ ಸೂಕ್ತ ವೇದಿಕೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮಾತನಾಡಿ, ‘ಓದಿದ ಶಾಲೆ, ಶಿಕ್ಷಣಕ್ಕೆ ಜಗತ್ತನ್ನು ಬದಲಿಸುವ ಶಕ್ತಿ ಇದ್ದು ವಿದ್ಯಾರ್ಥಿಗಳು ಯಾವುದೇ ಪ್ರಲೋಭನೆಗಳಿಗೆ ಸಿಲುಕದೆ ಓದಿನತ್ತ ಗಮನ ಹರಿಸಬೇಕು’ ಎಂದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಬಿ.ವಿನೋದಮ್ಮ ಮಾತನಾಡಿ, ‘ಡಿಜಿಟಲ್ ಶಿಕ್ಷಣ, ಗ್ರಂಥಾಲಯ, ಆನ್‌ಲೈನ್ ಕೋಚಿಂಗ್ ವ್ಯವಸ್ಥೆ ಇದ್ದರೂ ವಿದ್ಯಾರ್ಥಿಗಳು ಓದಿನತ್ತ ಆಸಕ್ತಿ ತೋರುತ್ತಿಲ್ಲ. ಅನಗತ್ಯ ವಿಚಾರಗಳ ಬಗ್ಗೆ ಮಕ್ಕಳು ವಾಲುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದರು.
ಜಿಲ್ಲಾ ಉದ್ಯೋಗ ಅಧಿಕಾರಿ ಎ.ಮಹಮ್ಮದ್ ಅಕ್ಬರ್, ಕಾಲೇಜಿನ ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜಮುನಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅನುಶ್ರೀ, ಸಂಚಾಲಕ ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.