ಚಾಮರಾಜನಗರ: ಸರ್ಕಾರ ನೀಡಿರುವ ಭರವಸೆಯಂತೆ 2021ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಕೋವಿಡ್ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಕಿರಿಯ ವೈದ್ಯರು ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ನಗರ ಹೊರವಲ ಯದಯಡಬೆಟ್ಟದಲ್ಲಿರುವ ಹೊಸ ಬೋಧನಾ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರು ಕಪ್ಪು ಪಟ್ಟಿ ಧರಿಸಿ, ಸರ್ಕಾರದ ವಿರುದ್ಧ ಘೋಷಣೆ ಹೊಂದಿದ್ದ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಸಿಮ್ಸ್‌ನಲ್ಲಿ 136 ಮಂದಿ ಸ್ನಾತ ಕೋತ್ತರ ಪದವೀಧರ ಹಾಗೂ ಇಂಟರ್ನಿ ವೈದ್ಯರಿದ್ದು, ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ 10 ಮಂದಿಯನ್ನು ಬಿಟ್ಟು ಉಳಿದವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ವೈದ್ಯರ ಒಕ್ಕೂಟದ ಅಧ್ಯಕ್ಷ ಡಾ.ಧೀಮಂತ್, ‘ರಾಜ್ಯದಾದ್ಯಂತ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಕಿರಿಯ ವೈದ್ಯರು ಆಸ್ಪತ್ರೆಗಳಲ್ಲಿ ಕೋವಿಡ್ ಸೇವೆ ಸಲ್ಲಿಸಿದ್ದಾರೆ. ಈ ವೈದ್ಯರಿಗೆ ಕೋವಿಡ್ ಭತ್ಯೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಆರು ತಿಂಗಳಾದರೂ ಇನ್ನೂ ನೀಡಿಲ್ಲ’ ಎಂದು ಆರೋಪಿಸಿದರು.
‘ಹಲವು ವೈದ್ಯಕೀಯ ಸ್ನಾತಕೋತ್ತರ ಪದವೀಧರರು, ಇಂಟರ್ನಿ ವೈದ್ಯರು ಜೀವದ ಹಂಗು ತೊರೆದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹಲವರು ಮೃತಪಟ್ಟಿದ್ದಾರೆ. ಭತ್ಯೆ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಕಿರಿಯ ವೈದ್ಯರು ಮುಷ್ಕರ ನಡೆಸಿ ದ್ದಾಗ 10 ದಿನಗಳಲ್ಲಿ ಸಮಸ್ಯೆ ಬಗೆಹರಿಸು ವುದಾಗಿ ಸಚಿವ ಡಾ.ಸುಧಾಕರ್ ಭರವಸೆ ನೀಡಿದ್ದರು. ಆದರೆ, ಇನ್ನೂ ನಮಗೆ ಭತ್ಯೆ ನೀಡಿಲ್ಲ. ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ’ ಎಂದು ದೂರಿದರು.
ಅಂದು ಸನ್ಮಾನ, ಇಂದು ಅಪಮಾನ: ‘ಅಂದು ಇದೇ ಸರ್ಕಾರ ನಮ್ಮನ್ನು ಕೋವಿಡ್ ಹೀರೋಗಳು ಎಂದು ಸನ್ಮಾನ ಮಾಡಿತ್ತು. ಈಗ ಭತ್ಯೆ ನೀಡದೆ, ಅವಮಾನ ಮಾಡುತ್ತಿದೆ. ನಾವು ಮುಷ್ಕರ ಹೂಡುವುದು ಅನಿವಾರ್ಯ ವಾಗಿದೆ. ನಮಗೆ ಭತ್ಯೆ ಸಿಗುವವರೆಗೆ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಕೋವಿಡ್ ಮೂರನೇ ಅಲೆ ಬಂದರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸರ್ಕಾರ, ವೈದ್ಯಕೀಯ ಶಿಕ್ಷಣ ಸಚಿವರು ನಮ್ಮ ಬಳಿಗೆ ಬಂದು ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಧ್ರುವನಾರಾಯಣ ಬೆಂಬಲ: ಸೋಮ ವಾರ ಸಂಜೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಯಡಬೆಟ್ಟಕ್ಕೆ ತೆರಳಿ, ಪ್ರತಿಭಟನಾ ನಿರತ ವೈದ್ಯರೊಂದಿಗೆ ಮಾತುಕತೆ ನಡೆಸಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕಿರಿಯ ವೈದ್ಯರ ಒಕ್ಕೂಟದ ಉಪಾಧ್ಯಕ್ಷೆ ಡಾ.ಎಂ.ಸಹನಾ, ಪ್ರಧಾನ ಕಾರ್ಯದರ್ಶಿಗಳಾದ ಡಾ.ಮೋಹನ್, ಡಾ.ತೇಜಸ್ವಿನಿ ಅರುಣ್, ಡಾ.ಎನ್.ಗಣೇಶ್, ಸಹ ಕಾರ್ಯದರ್ಶಿ ಡಾ.ಆಶಾ, ಡಾ.ದೀಲಿಪ್ ಕುಮಾರಿ ಪ್ರತಿಭಟನೆಯಲ್ಲಿದ್ದರು.
‘ಆರೋಗ್ಯ ಸೇವೆಗೆ ಧಕ್ಕೆ ಇಲ್ಲ’
ಕಿರಿಯ ವೈದ್ಯರ ಮುಷ್ಕರದಿಂದಾಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ಮಾಮೂಲಿ ವೈದ್ಯರು ಎಲ್ಲರೂ ಇದ್ದಾರೆ. ಕಿರಿಯ ವೈದ್ಯರು ಒಂದು ವರ್ಷದ ಅವಧಿಗೆ ಇಂಟರ್ನಿಗಳಾಗಿದ್ದು, ಅವರ ಅನುಪಸ್ಥಿತಿಯಿಂದ ಹೆಚ್ಚಿನ ತೊಂದರೆಯಾಗದು. ನಮ್ಮ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು. ಜೂನ್‌ನಿಂದ ಒಂದು ವರ್ಷದ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.