ADVERTISEMENT

ಸ್ತ್ರೀಯರೇ ಸ್ವತಂತ್ರವಾಗಿ ಕೆಲಸ ಮಾಡಿದರೆ ಅಭಿವೃದ್ಧಿ: ಸುತ್ತೂರು ಶ್ರೀ

ಡಾ.ಡಿ.ಶೀಲಾನಂಜಪ್ಪಗೆ ಕದಳಿ ಸಿರಿ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 16:22 IST
Last Updated 17 ಏಪ್ರಿಲ್ 2022, 16:22 IST
ಚಾಮರಾಜನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಡಿ.ಶೀಲಾನಂಜಪ್ಪ ಅವರಿಗೆ ‘ಕದಳಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ದೇಶಿಕೇಂದ್ರ ಸ್ವಾಮೀಜಿ, ಅರುಣಾದೇವಿ ಯಡಿಯೂರಪ್ಪ, ಎಂ.ಸಿ.ಮೋಹನಕುಮಾರಿ, ಪರಿಮಳಾನಾಗಪ್ಪ, ಸುಶೀಲಾ ಸೋಮಶೇಖರ್‌ ಇತರರು ಇದ್ದರು
ಚಾಮರಾಜನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಡಿ.ಶೀಲಾನಂಜಪ್ಪ ಅವರಿಗೆ ‘ಕದಳಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ದೇಶಿಕೇಂದ್ರ ಸ್ವಾಮೀಜಿ, ಅರುಣಾದೇವಿ ಯಡಿಯೂರಪ್ಪ, ಎಂ.ಸಿ.ಮೋಹನಕುಮಾರಿ, ಪರಿಮಳಾನಾಗಪ್ಪ, ಸುಶೀಲಾ ಸೋಮಶೇಖರ್‌ ಇತರರು ಇದ್ದರು   

ಚಾಮರಾಜನಗರ: ಅಧಿಕಾರದಲ್ಲಿರುವ ಮಹಿಳೆಯರು, ತಮ್ಮ ಪತಿಯರಿಗೆ ಅಧಿಕಾರ ಚಲಾಯಿಸಲು ಬಿಡದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಭಾನುವಾರ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವೇದಿಕೆಯ 19ನೇ ವಾರ್ಷಿಕೋತ್ಸವ, ಕದಳಿಸಿರಿ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಕದಳಿ ಮಹಿಳಾ ವೇದಿಕೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಭಾಗ. ಮಹಿಳೆಯರೇ ಸ್ವತಂತ್ರವಾಗಿ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಕದಳಿ ಮಹಿಳಾ ವೇದಿಕೆಯನ್ನು ಆರಂಭಿಸಲಾಗಿದೆ. ರಾಜಕೀಯದಲ್ಲಿ ಮಹಿಳೆ ಅಧಿಕಾರದಿಂದಲ್ಲೂ ಆಕೆಯ ಗಂಡ ಅಧಿಕಾರ ನಡೆಸುತ್ತಿರುತ್ತಾನೆ. ಇದು ಆಗಬಾರದು’ ಎಂದರು

ADVERTISEMENT

ಸಂಸ್ಕಾರ ಕೊಡಿ: ಈ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ, ಮಕ್ಕಳು ಏನು ತಪ್ಪು ಮಾಡಿದರೂ ಸಹಿಸಬೇಕು ಎಂಬ ಭಾವನೆ ಪೋಷಕರಲ್ಲಿ ಬಂದಿದೆ. ಮಕ್ಕಳನ್ನು ‘ನೀವು’ ಎಂದು ಬಹುವಚನದಲ್ಲಿ ಸಂಬೋಧಿಸುವ ಪರಿಪಾಠ ಬೆಳೆಯುತ್ತಿದೆ. ತಂದೆ ತಾಯಿ ಮಕ್ಕಳಿಗೆ ಸಂಸ್ಕಾರ ಕಲಿಸದೆ ಅತಿಯಾದ ಮಮತೆ ತೋರಿಸುತ್ತಿರುವ ಕಾರಣ ಜಗತ್ತಿನಲ್ಲಿ ಅನೇಕ ದುರ್ಘಟನೆಗಳು ನಡೆಸುತ್ತಿವೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರ ಕಲಿಸುವ, ತಿದ್ದಿ ಬುದ್ಧಿ ಹೇಳುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಯಡಿಯೂರಪ್ಪ ಅವರು ಮಾತನಾಡಿ, ‘ಆಧುನಿಕತೆಯ ಸೋಗಿನಲ್ಲಿ ಧರ್ಮದ ಆಚರಣೆಯಲ್ಲಿ ಬೇಜವಾಬ್ದಾರಿ ಪ್ರದರ್ಶಿಸಲಾಗುತ್ತಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ನಮ್ಮ ಧಾರ್ಮಿಕ ಆಚರಣೆ, ಸಂಸ್ಕಾರವನ್ನು ಕಲಿಸಲಾಗದೇ ಕುಟುಂಬದ ಭದ್ರಬುನಾದಿ ಕ್ಷೀಣವಾಗುತ್ತಿದೆ. ಹಾಗಾಗಿ,ಧರ್ಮ ಉಳಿಸುವ ಕೆಲಸ ಆಂದೋಲನದ ರೂಪದಲ್ಲಿ ನಡೆಯಬೇಕಿದೆ. ಮಹಿಳೆಯರು ಇದರ ಬಗ್ಗೆ ಕ್ರಾಂತಿಕಾರಿಯಾಗಿ ನಿಲ್ಲುವ ಮೂಲಕ ಗಟ್ಟಿತನ ಪ್ರದರ್ಶಿಸಬೇಕು‘ ಎಂದರು.

ಇತ್ತೀಚಿನ ದಿನಗಳಲ್ಲಿ ಪೂಜೆ ಕಾಯಕವಾಗುತ್ತಿದೆಯೇ ವಿನಾ, ಕಾಯಕ ಪೂಜೆಯಾಗುತ್ತಿಲ್ಲ. ನಮ್ಮ ಧರ್ಮ ಸಂಸ್ಕೃತಿ ಉಳಿಯಬೇಕು. ಜತೆಗೆ ನಮ್ಮ ಯುವಜನಾಂಗವನ್ನು ಗಟ್ಟಿಯಾಗಿ ಉಳಿಸುವ ಕೆಲಸವನ್ನು ಕದಳಿ ಮಹಿಳಾ ವೇದಿಕೆ ಮಾಡಬೇಕು’ ಎಂದರು.

ಸಮಾರಂಭದಲ್ಲಿ ನಿವೃತ್ತ ಸಹಾಯಕ ಪ್ರಾಧ್ಯಾಪಕಿ ಡಾ.ಡಿ.ಶೀಲಾನಂಜಪ್ಪ ಅವರಿಗೆ ‘ಕದಳಿ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸನ್ಮಾನ: ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಶಿಕಲಾ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೋಡಿಮೋಳೆ ರಾಜಶೇಖರ್‌,ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಅವರನ್ನು ಸನ್ಮಾನಿಸಲಾಯಿತು.

ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಅಗರಕಲ್ಮಠದ ಸ್ವಾಮೀಜಿ, ಕಾಂಗ್ರೆಸ್‌ ನಾಯಕಿ ಎಂ.ಸಿ.ಮೋಹನಕುಮಾರಿ, ಬಿಜೆಪಿ ನಾಯಕಿ ಪರಿಮಳಾ ನಾಗಪ್ಪ,ಕದಳಿ ಮಹಿಳಾ ವೇದಿಕೆ ರಾಜ್ಯ ಘಟಕದ ಸಂಚಾಲಕಿ ಸುಶೀಲಾ ಸೋಮಶೇಖರ್‌, ಜಿಲ್ಲಾಧ್ಯಕ್ಷೆ ವಸಂತಮ್ಮ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ಇದ್ದರು.

ಪರಿಷತ್‌ ಲಿಂಗಾಯತರಿಗೆ ಸೀಮಿತ ಅಲ್ಲ

ಸಾಹಿತಿ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ರಾಜ್ಯ ಅಧ್ಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಅವರು ಮಾತನಾಡಿ, ‘ಈ ಸಾಹಿತ್ಯ ಪರಿಷತ್‌ ವೀರಶೈವ–ಲಿಂಗಾಯತರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ತಾಲ್ಲೂಕು ಘಟಕಗಳಲ್ಲಿ ಮುಸ್ಲಿಮರು, ದಲಿತರು ಅಧ್ಯಕ್ಷರಾಗಿದ್ದಾರೆ’ ಎಂದರು.

‘ಪರಿಷತ್‌ 35 ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. 16 ಸಾವಿರ ಮಂದಿ ಸದಸ್ಯರು ಮಾತ್ರ ಇದ್ದಾರೆ. ಕನಿಷ್ಠ ಒಂದು ಲಕ್ಷ ಸದಸ್ಯರು ಇರಬೇಕು. ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕ ₹500 ಮಾತ್ರ ಇದೆ‘ ಎಂದರು.

‘ಪರಿಷತ್ತಿನಲ್ಲಿ 800 ದತ್ತಿ ನಿಧಿಗಳಿವೆ. ಹಿಂದೆ ₹10 ಸಾವಿರ ಮೊತ್ತವನ್ನು ದತ್ತಿಯಾಗಿ ನೀಡುತ್ತಿದ್ದರು. ಅದರ ಬಡ್ಡಿಯಲ್ಲಿ ಏನೂ ಮಾಡಲು ಆಗುತ್ತಿಲ್ಲ. ಹಾಗಾಗಿ, ದತ್ತಿ ನೀಡುವವರು ಕನಿಷ್ಠ ₹25 ಸಾವಿರ ಕೊಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.