ADVERTISEMENT

ಬಿಳಿಗಿರಿ ರಂಗನಾಥನ ಬೆಟ್ಟದ ಗುಹೆಯಲ್ಲಿ ಕನಕ ದಾಸರ ಹೆಜ್ಜೆಗುರುತು...

ಬಿಳಿಗಿರಿ ರಂಗನಾಥನ ಬೆಟ್ಟದ ತುಂಟಾನೆ ಕನಕದಾಸರಿಗೆ ಶರಣಾದ ಕಥೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 3:09 IST
Last Updated 8 ನವೆಂಬರ್ 2025, 3:09 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಕನಕಗುಹೆ ಕನಕದಾಸರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. (ಸಂಗ್ರಹ ಚಿತ್ರ)
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಕನಕಗುಹೆ ಕನಕದಾಸರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. (ಸಂಗ್ರಹ ಚಿತ್ರ)   

ಯಳಂದೂರು: ಕನಕದಾಸರು ಬಿಳಿಗಿರಿರಂಗನಬೆಟ್ಟದ ಗುಹೆಯಲ್ಲಿ ಶಂಖನಾದ ಮೊಳಗಿಸುತ್ತಿದ್ದರು, ತಂಬೂರಿ, ತಾಳಗಳೊಂದಿಗೆ ಹರಿನಾಮ ಸ್ಮರಣೆ ಮಾಡುತ್ತಿದ್ದರು, ಮೂಡಣದ ದಿಕ್ಕಿನಿಂದ ದೇಗುಲಕ್ಕೆ ಆಗಮಿಸಿ ರಂಗನಾಥನ ಆಲಯದಲ್ಲಿ ಧ್ಯಾನಾಸಕ್ತರಾಗಿ ಕೂರುತ್ತಿದ್ದರು, ಹೀಗೆ ಸಾಗುತ್ತದೆ ಕನಕದಾಸರ ಕಾಲದ ಭಕ್ತಿ ಪರಂಪರೆಯ ಕುರುಹುಗಳು.

ತಾಲ್ಲೂಕಿನ ಬಿಳಿಗಿರಿಬೆಟ್ಟದ ಕಮರಿಯ ತಳಭಾಗದಲ್ಲಿ ಹುಲಿ ಚಿರತೆಗಳ ಆಶ್ರಯ ತಾಣವಾಗಿದ್ದ ಕಲ್ಲಿನ ಗುಹೆಗೆ 16ನೇ ಶತಮಾನದಲ್ಲಿ ಕನಕದಾಸರು ಭೇಟಿ ನೀಡಿದ್ದರು ಎಂಬ ಬಗ್ಗೆ ಜನಪದ ಹಾಡುಗಳಲ್ಲಿ ಉಲ್ಲೇಖವಿದೆ. ಇಲ್ಲಿನ ಬಂಡೆಯೊಂದು ಈಗಲೂ ಕನಕ ಗುಹೆ ಅಭಿದಾನದಿಂದಲೇ ಪ್ರಸಿದ್ಧವಾಗಿದೆ.  ಬಂಡೆಯ ಮೇಲೆ ಕುಳಿತ ಕನಕರು ನೂರಾರು ಕೀರ್ತನೆ ಹಾಗೂ ಮಂಡಿಗೆಗಳನ್ನು ರಚಿಸಿ ಉಪದೇಶಗಳನ್ನು ಬೋಧಿಸುತ್ತ ಊರೂರು ಸುತ್ತುತ್ತಿದ್ದ ಬಗ್ಗೆ ಕಥೆಗಳಲ್ಲಿ ಉಲ್ಲೇಖವಿದೆ.

‘ಗುರುಗಳಾದ ಶ್ರೀನಿವಾಸಚಾರ್ಯರ ಅನುಗ್ರಹದಿಂದ ಪ್ರಾಥಮಿಕ ಕಲಿಕೆ ಸಿದ್ಧಿಸಿಕೊಂಡ ಕನಕರು, ತಾತ್ವಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರು. ವ್ಯಾಸಕೂಟ ಮತ್ತು ದಾಸಕೂಟಗಳೆಂಬ ಚರ್ಚಾಕೂಟಗಳಲ್ಲಿ ಕನಕದಾಸರ ಮುನ್ನೋಟಗಳು ಅರಿವಿನ ಲೋಕಕಕ್ಕೆ ಕೋಲ್ಮಿಂಚಾಯಿತು. ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ದಿಕ್ಕನ್ನು ತೋರಿಸಿದ ಕನಕದಾಸರ ಕೀರ್ತನೆಗಳು, ಸುಳಾದಿ, ಉಗಾ ಭೋಗಗಳು  ಕರ್ನಾಟಕ ಸಂಗೀತ ಮತ್ತು ಸಾಹಿತ್ಯದಲ್ಲಿ ಉನ್ನತ ಸ್ಥಾನಗಳಿಸಿವೆ.  ಹರಿನಾಮ ಸ್ಮರಣೆಗಳಲ್ಲಿ ಕನಕರ ಸಂಕೀರ್ತನೆಗಳು ಮನಸ್ಸಿಗೆ ಶಾಂತಿ-ನೆಮ್ಮದಿ ತುಂಬುತ್ತವೆ’ ಎನ್ನುತ್ತಾರೆ ಚಿಂತಕ ಅಂಬಳೆ ನಾಗೇಶ್.

ADVERTISEMENT

ಕನಕರಿಗೆ ಶರಣಾದ ಬಿಳಿಗಿರಿ ಬೆಟ್ಟದ ಆನೆ:

‘ತಿಮ್ಮಪ್ಪನಾಯಕ ಕನಕದಾಸರಾಗಿ ಬದಲಾಗುತ್ತಿದ್ದಂತೆ ಬದುಕಿನ ನಶ್ವರತೆಯನ್ನು ಮನಗಂಡವರು. ಮುಕ್ತಿ ಪಡೆಯಲು ಹರಿಗೆ ಶರಣಾಗತಿಯೊಂದೇ ಮಾರ್ಗ ಎಂದು ಬೋಧಿಸುತ್ತ ದಕ್ಷಿಣದ ತಿರುಮಕೂಡಲು ನರಸೀಪುರ, ಬಿಳಿಗಿರಿಬೆಟ್ಟಗಳತ್ತಲೂ ಹೆಜ್ಜೆ ಹಾಕಿದ್ದರು. ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗ ಜನರಿಗೆ ತೊಂದರೆ ಕೊಡುತ್ತಿದ್ದ ಆನೆಗೆ ಕಡಿವಾಣ ಹಾಕಲು ಸ್ಥಳೀಯರು ನಿವೇದಿಸಿಕೊಂಡಾಗ ಕನಕರು ಆನೆಯ ಕಿವಿಯಲ್ಲಿ ಪಿಸುಗುಟ್ಟಿದಾಗ ತಕ್ಷಣ ಆನೆ ಕನಕರ ಪಾದಕ್ಕೆ ಶರಣಾಯಿತು. ಪ್ರಾಣಿ-ಮನುಷ್ಯನ ಸಾಂಗತ್ಯವನ್ನು ಬುಡಕಟ್ಟು ಜನರು ನೆನೆಯುತ್ತಾರೆ. ಕಾಗಿನೆಲೆಯ ಪರಿಸರ ಥೀಮ್ ಪಾರ್ಕ್‌ನಲ್ಲೂ ಕನಕದಾಸರು ಹಾಗೂ ಆನೆ ನಡುವಿನ ಸಂಧಾನದ ದೃಶ್ಯವನ್ನು ಸುಂದರವಾಗಿ ಚಿತ್ರಿಸಲಾಗಿದೆ’ ಎನ್ನುತ್ತಾರೆ ಪಾರುಪತ್ತೆಗಾರ ರಾಜು.

ಇಂದು ಕನಕ ಜಯಂತಿ

‘ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನ್ನು ಸಲಹುವನು ಇದಕೆ ಸಂಶಯವಿಲ್ಲ’ ಎನ್ನುವ ಭರವಸೆಯ ಮಾತುಗಳನ್ನು ಹಾಡಿದ ಕನಕದಾಸರ ಜಯಂತಿಯನ್ನು ನ.8ರಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದಾಸರು ಸಂಚರಿಸಿದ ಸ್ಥಳಗಳಲ್ಲಿ ದೈವಮೂಲಗಳ ಜತೆಗೆ ಸಾಮಾಜಿಕ ಚಿಂತನೆಗಳನ್ನು ತಿಳಿಸುವ ಪ್ರಯತ್ನ ನಡೆದಿದೆ. ಶಾಲಾ-ಕಾಲೇಜು ಸರ್ಕಾರಿ ಕಚೇರಿಗಳಲ್ಲಿ ಕನಕರ ಹಾಡು ಭಜನೆಗಳ ಸಾಂಗತ್ಯವೂ ಜೊತೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.