ADVERTISEMENT

ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 16:00 IST
Last Updated 25 ನವೆಂಬರ್ 2022, 16:00 IST
ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ: ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಮುಖಂಡ ಎಂ.ರಾಮಚಂದ್ರ ಶುಕ್ರವಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಪುಣಜನೂರು ಗ್ರಾಮಸ್ಥರು ಹಾಗೂ ಯುವಕರ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದರೆ ಮೊಟ್ಟಮೊದಲು ಹೋರಾಟ ಶುರುವಾಗುವುದು ಜಿಲ್ಲೆಯಲ್ಲೇ. ಕರ್ನಾಟಕ ಸಂಘಟನೆಗಳ ಹೋರಾಟದ ಫಲವಾಗಿ ಗಡಿಜಿಲ್ಲೆಯಲ್ಲಿ ಕನ್ನಡಪ್ರೇಮ ಹೆಚ್ಚಾಗಿದ್ದು ಕನ್ನಡ ಶಕ್ತಿಯುತವಾಗಿದೆ’ ಎಂದರು.

‘ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಕಲಿಯುವುದರ ಜತೆಗೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ವಿಶೇಷವಾಗಿ ಒತ್ತುಕೊಟ್ಟು ಕಲಿಯುವ ಮೂಲಕ ಕನ್ನಡವನ್ನು ಉಳಿಸಿ _ ಬೆಳಸುವುದು ಪ್ರತಿಯೊಬ್ಬ ಕನ್ನಡಿಗರ ಕೆಲಸ ಆಗಬೇಕು. ಗಡಿಭಾಗವಾದ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಕನ್ನಡ ಕಂಪನ್ನು ಪಸರಿಸುವ ಕೆಲಸ ಅಗುತ್ತಿರುವುದು ತುಂಬಾ ಸಂತಸ ತಂದಿದೆ. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವ ಆಗಬೇಕಿದೆ’ ಎಂದರು.

ADVERTISEMENT

ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ‘ಕನ್ನಡ ನೆಲ, ಜಲ, ಭಾಷೆ ಗಡಿ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕನ್ನಡಕ್ಕಾಗಿ ಸಾಹಿತಿಗಳು, ಬರಹಗಾರರು ಹೋರಾಟ ಮಾಡಿದ್ದಾರೆ.‌ ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಗಡಿ ಗುರುತಿಸುವ ಕೆಲಸ ಮಾಡುತ್ತಿಲ್ಲ. ಅರಣ್ಯ ಪ್ರದೇಶ ಗ್ರಾಮದ ಕೂಡಿರುವ ಪುಣಜನೂರಿನಲ್ಲಿ ದಲಿತರ ಕಾಲೊನಿ, ಗಿರಿಜನರ ಕಾಲೊನಿ, ಲಂಬಾಣಿ ಕಾಲೊನಿ ಮಾಡಿಲ್ಲ. ಕಾನೂನು ತೊಡಕು ಬಹಳಷ್ಟು ಇದೆ. ತಮಿಳರು ಕನ್ನಡದ ಬಗ್ಗೆ ಅವಹೇಳನ ಮಾಡುವುದು ನಡೆಯುತ್ತಿದೆ. ಅದರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ಗ್ರಾಮದ ಯುವಕರು ಮಾಡಬೇಕಾಗುತ್ತದೆ. ಇಲ್ಲಿ ಕನ್ನಡ ಕಂಪನ್ನು ಸೂಸುವ ಕೆಲಸಗಳು ಹೆಚ್ಚು ಆಗಬೇಕಿದೆ’ ಎಂದರು.

ಅಖಲ ಭಾರತ ವಿರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೀತಾ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮುತ್ತುನಾಯಕ್, ನಿರ್ದೇಶಕರಾದ ಪಿ.ಕುಮಾರ್ ನಾಯಕ್, ಗುರುನಾಯಕ್, ಯ.ನಾಗನಾಯಕ್, ವಲಯ ಅರಣ್ಯಾಧಿಕಾರಿ ನಿಸಾರ್ ಅಹಮದ್, ಮುನಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗನಾಯಕ, ಚಂದ್ರಶೇಖರ್, ರಾಚಪ್ಪಾಜಿ, ಪೋಲೀಸ್ ರಂಗೇಗೌಡ, ಮಹೇಂದ್ರ, ನಾಗನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.