
ಚಾಮರಾಜನಗರ: ಕನ್ನಡಿಗರ ಹಿತರಕ್ಷಣೆಗೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾದಾದರೆ ಕರ್ನಾಟಕ ರಕ್ಷಣಾ ವೇದಿಕೆ ಎಂತಹ ಹೋರಾಟಕ್ಕೂ ಸಿದ್ಧ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ದೀಕ್ಷೆ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 27 ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ರಕ್ಷಣಾ ವೇದಿಕೆ ನಾಡು ನುಡಿಗೆ ರಕ್ಷಣೆಗೆ ಹೋರಾಟ ಮಾಡಿಕೊಂಡು ಬಂದಿದೆ ಎಂದರು.
ರಾಜಕೀಯ ಪಕ್ಷಗಳೊಂದಿಗೆ ರಾಜಿ ಮಾಡಿಕೊಳ್ಳದೆ ಕನ್ನಡಿಗರ ಶಕ್ತಿಯಾಗಿ ಹೋರಾಟ ಮಾಡಿಕೊಂಡಿರುವ ಹೆಮ್ಮೆ ಕಾರ್ಯಕರ್ತರಿಗಿದೆ. ಹೋರಾಟದ ಇಚ್ಚಾಶಕ್ತಿ ಹಾಗೂ ಬದ್ದತೆ ಸಂಘಟನೆಯ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿಯು ಕರವೇ ಕಾರ್ಯಕರ್ತರು ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು ವರನಟ ಡಾ.ರಾಜಕುಮಾರ್ ಅವರಂತಹ ಅದ್ಭುತ ನಟನನ್ನು ನಾಡಿಗೆ ಕೊಟ್ಟ ಜಿಲ್ಲೆಯಾಗಿದೆ. ತಮಿಳುನಾಡು, ಕೇರಳದ ಜೊತೆಗೆ ಗಡಿ ಹಂಚಿಕೊಂಡಿದ್ದರೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿಲ್ಲ. ಪರ ಭಾಷಿಕರ ಹಾವಳಿ ಇದ್ದರೂ ಯಾರೂ ಕನ್ನಡತನ ಬಿಟ್ಟುಕೊಟ್ಟಿಲ್ಲ. ಕನ್ನಡದ ಬಗ್ಗೆ ಅಭಿಮಾನವನ್ನು ಹೊಂದಿರುವ ನೆಲ ಇದಾಗಿದೆ ಎಂದರು.
ರಾಜಕಾರಣಿಗಳಲ್ಲಿ ಕನ್ನಡದ ಬಗ್ಗೆ ಇಚ್ಚಾಶಕ್ತಿ ಇಲ್ಲವಾಗಿದ್ದು, ಮತ ಬ್ಯಾಂಕ್ ರಾಜಕಾರಣ ನಡೆಯತ್ತಿದೆ. ಕನ್ನಡಿಗರ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿದೆ. ನಮ್ಮದೇ ನೆಲದಲ್ಲಿ ಕನ್ನಡರಿಗರಿ ಉದ್ಯೋಗ ಸಿಗುತ್ತಿಲ್ಲ, ಸರೋಜಿನಿ ಮಹಿಷಿ ವರದಿ ಮಂಡನೆಯಾಗಿ 48 ವರ್ಷ ಕಳೆದರೂ ಜಾರಿಯಾಗಿಲ್ಲ. ವರದಿ ಜಾರಿಯಾದರೆ ಕನ್ನಡರಿಗೆ ಹೆಚ್ಚಿನ ಉದ್ಯೋಗಗಳು ಲಭಿಸುತ್ತವೆ ಎಂದರು.
ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಕರವೇ ನಾರಾಯಣ ಗೌಡರ ಹೋರಾಟದ ಫಲವಾಗಿ ಬೆಂಗಳೂರಿನಲ್ಲಿ ಪರ ಭಾಷಿಗರ ಹಾವಳಿಗೆ ಕಡಿವಾಣ ಬಿದ್ದಿದೆ. ಕರವೇ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು.
ಚಳವಳಿ ಮೂಲಕ ನಾಡು, ನುಡಿ, ಜಲ ರಕ್ಷಣೆಯಲ್ಲಿ ತೊಡಗಿರುವ ಕರವೇ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ ಅವರನ್ನು 3 ಬಾರಿ ಶಾಸಕರನ್ನಾಗಿ ಮಾಡಿದ ಕ್ಷೇತ್ರವಾಗಿರುವ ಚಾಮರಾಜನಗರದಿಂದ ನಾರಾಯಣಗೌಡರು ರಾಜಕೀಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಸೊಮನಾಯಕ, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ ಅಬ್ಬಿಗೆರೆ, ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕರವೇ ಮೈಸೂರು ಜಿಲ್ಲಾಧ್ಯಕ್ಷ ಪ್ರವೀಣ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ಸುಜಾತಾ ಷಣ್ಮುಖಂ, ಚಾಮರಾಜನಗರ ಜಿಲ್ಲಾಧ್ಯಕ್ಷ ಮಂಜೇಶ, ಪ್ರಧಾನ ಕಾರ್ಯದರ್ಶಿ ರೂಪೇಶ್, ಜಿಲ್ಲಾ ಸಹಕಾರ್ಯದರ್ಶಿ ಅರ್ಜುನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್, ಮಹಿಳಾ ಜಿಲ್ಲಾಧ್ಯಕ್ಷೆ ಲಕ್ಷಿ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಸುಮಾ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ರಾಜೇಶ್ವರಿ, ನಗರ ಅಧ್ಯಕ್ಷ ಸಂತೋಷ, ಗುಂಡ್ಲುಪೇಟೆ ಅಧ್ಯಕ್ಷ ರಮೇಶ್ ನಾಯಕ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ನಾಯಕ, ಕೊಳ್ಳೇಗಾಲ ಅಧ್ಯಕ್ಷ ಅಯಾಜ್ ಕನ್ನಡಿಗ, ಮಂಡ್ಯ ಅಧ್ಯಕ್ಷ ಮನು, ಕರವೇ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.