ADVERTISEMENT

ರೈತರ ಸಮಸ್ಯೆ; ರಾಜ್ಯಪಾಲರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 10 ಮೇ 2024, 4:57 IST
Last Updated 10 ಮೇ 2024, 4:57 IST
ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ನೇತೃತ್ವದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿತು
ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ನೇತೃತ್ವದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿತು   

ಚಾಮರಾಜನಗರ: ರೈತರಿಗೆ ವೈಜ್ಞಾನಿಕ ಬೆಳೆ ನಷ್ಟದ ಪರಿಹಾರ ನೀಡಬೇಕು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು‌‌‌‌ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಒತ್ತಾಯಿಸಿದೆ.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿಭಾಗ್ಯರಾಜ್‌ ನೇತೃತ್ವದ ನಿಯೋಗ ಗುರುವಾರ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾಗ್ಯರಾಜ್‌, ‘ರೈತರಿಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ವೈಜ್ಞಾನಿಕ ವಿಧಾನ ಅನುಸರಿಸಿಲ್ಲ. ಮೂರು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ನೂರಾರು  ಹೆಕ್ಟರ್ ಪ್ರದೇಶದ ಬಾಳೆ, ಕಬ್ಬು, ತೆಂಗು, ಮೆಕ್ಕೆಜೋಳ ನಾಶವಾಗಿದ್ದು ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರವನ್ನು ಘೋಷಿಸಬೇಕು. ಭೀಕರ ಬಿರುಗಾಳಿಯಿಂದ ನೊಂದಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿ ಎಕರೆ ಬಾಳೆ ಬೆಳೆ ನಷ್ಟಕ್ಕೆ ₹1 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರ 10 ಗಂಟೆ ವಿದ್ಯುತ್ ಕೊಡಬೇಕು. ಕೃಷಿ ಪಂಪ್‌ ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಮೊದಲು ಇದ್ದಂತಹ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಳೆದ ಸಾಲಿನ ಪ್ರತಿ ಟನ್‌ಗೆ ಹೆಚ್ಚುವರಿ ₹150 ನಂತೆ  ಸರ್ಕಾರ ಆದೇಶದ ಪ್ರಕಾರ ರಾಜ್ಯದಲ್ಲಿ ₹950 ಕೋಟಿ ರೂಪಾಯಿ ರೈತರಿಗೆ ಬರಬೇಕು. ಕಳೆದ ಸಾಲಿನ ಕಾರ್ಖಾನೆಗಳಿಂದ ಲಾಭಾಂಶವನ್ನು ಹಂಚಿಕೆ ಮಾಡಿಸಬೇಕು ಹಾಗೂ ಖಾಸಗಿ ಮತ್ತು ಸಾಲ ಪಡೆದ ರೈತರಿಗೆ ಟ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಬೇರೆ ರಾಜ್ಯಗಳಿಗೆ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿವೆ. ಬ್ಯಾಂಕುಗಳು ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ  ₹10 ಕೊಡಿಸಲು ಕ್ರಮ ವಹಿಸಬೇಕು’ ಎಂದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠಲ್ ಬಿ ಗಣಾಚಾರಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಸಾಲಿನ ನಾಗರಾಜ್, ಹನುಮಯ್ಯ, ವಕೀಲರಾದ ಕಿಶನ್, ಹರ್ಷಕುಮಾರ, ಮಲೆಯೂರು ಮಹೇಂದ್ರ, ಅರಳಿಕಟ್ಟೆ ಕುಮಾರ್, ಮುದ್ದಹಳ್ಳಿ ಚಿಕ್ಕ ಸ್ವಾಮಿ, ಗಣೇಶ್, ಅಂಬಳೆ ಮಹದೇವಸ್ವಾಮಿ, ಸೋಮೇಶ್ ಪಟೇಲ್, ನೆಲಮಂಗಲ ತಾಲ್ಲೂಕು ಅಧ್ಯಕ್ಷ ರಾಜೇಶ್ ಅಪ್ಪಾಜಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.