ADVERTISEMENT

ಬಂಡಿಜಾತ್ರೆ ಸರಳ: ಗ್ರಾಮಗಳಲ್ಲಿ ಬಂಡಿ ಕಟ್ಟಿ ಪೂಜೆ

ಪೊಲೀಸರ ಸರ್ಪಗಾವಲು, ಬಿಕೋ ಎಂದ ದೊಡ್ಡಮ್ಮ ತಾಯಿ ದೇವಸ್ಥಾನ, ಭಕ್ತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 14:19 IST
Last Updated 24 ಜನವರಿ 2021, 14:19 IST
ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತೆರಳುತ್ತಿದ್ದ ರಸ್ತೆಗಳನ್ನು ಪೊಲೀಸರು‌ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರಿಂದ ಭಕ್ತರು ವಾಪಸ್‌ ತೆರಳಬೇಕಾಯಿತು
ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತೆರಳುತ್ತಿದ್ದ ರಸ್ತೆಗಳನ್ನು ಪೊಲೀಸರು‌ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರಿಂದ ಭಕ್ತರು ವಾಪಸ್‌ ತೆರಳಬೇಕಾಯಿತು   

ಸಂತೇಮರಹಳ್ಳಿ: ಪ್ರತಿ ವರ್ಷ ಅದ್ಧೂರಿಯಿಂದ ನಡೆಯುತ್ತಿದ್ದ ಕಸ್ತೂರು ದೊಡ್ಡಮ್ಮ ತಾಯಿ ಬಂಡಿಜಾತ್ರೆ ಭಾನುವಾರ ಕೋವಿಡ್‌ ಕಾರಣದಿಂದ ಸರಳ ಮತ್ತು ಸಂಪ್ರದಾಯಿಕ ಆಚರಣೆಗೆ ಸೀಮಿತವಾಯಿತು.

16 ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಬಂಡಿಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಮಟ್ಟಿಗೆ ಉತ್ಸವ ನಡೆಸಿದರು.

ಕೋವಿಡ್‌ ಕಾರಣದಿಂದಾಗಿ ದೊಡ್ಡಮ್ಮ ತಾಯಿ ದೇವಸ್ಥಾನದವರೆಗೆ ಬಂಡಿಗಳ ಮೆರವಣಿಗೆ ನಡೆಸಲು, ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಹಾಗಿದ್ದರೂ, ದೊಡ್ಡಮ್ಮ ತಾಯಿ ದರ್ಶನಕ್ಕಾಗಿ ನೂರಾರು ಭಕ್ತರು ದೇವಸ್ಥಾನದತ್ತ ಹೊರಟಿದ್ದರು.

ADVERTISEMENT

ದೇವಸ್ಥಾನ ಸಂಪರ್ಕಿಸುವ ಮುಖ್ಯರಸ್ತೆಗಳು ಹಾಗೂ ಸುತ್ತಲಿನ ಕಿರುದಾರಿಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್‌ ಮಾಡಿದ್ದರು.ಕಾರು, ದ್ವಿಚಕ್ರ ವಾಹನ ಹಾಗೂ ಕಾಲ್ನಡಿಗೆಯಲ್ಲಿ ಬಂದ ಭಕ್ತಾದಿಗಳನ್ನು ತಡೆದ ಪೊಲೀಸರು ವಾಪಸ್‌ ಕಳುಹಿಸಿದರು.

ಜಾತ್ರೆ ರದ್ದುಗೊಂಡಿರುವುದು ತಿಳಿಯದ ಅನೇಕರು, ‘ದೂರದೂರುಗಳಿಂದ ಬಂದಿದ್ದೇವೆ. ಪೂಜೆಗೆ ಅವಕಾಶ ಮಾಡಿಕೊಡಿ’ ಎಂದು ವಿನಂತಿಸುತ್ತಿದ್ದುದು ಕಂಡು ಬಂತು. ದೇವಸ್ಥಾನದ ಸುತ್ತ ಸರ್ಪಗಾವಲು ಹಾಕಿದ್ದ ಪೊಲೀಸರು, ಅಲ್ಲಲ್ಲಿ ನುಸುಳುತ್ತಿದ್ದವರನ್ನು ಚದುರಿಸಿದರು.

ಕಸ್ತೂರು ಗ್ರಾಮದಲ್ಲಿ ಪ್ರತಿ ವರ್ಷ ಪುಸ್ಯ ಮಾಸದ ಎರಡನೇ ಭಾನುವಾರದಂದು ದೊಡ್ಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಬಂಡಿ ಜಾತ್ರೋತ್ಸವ ನಡೆಯುತ್ತದೆ. ಚಾಮರಾಜನಗರ ಹಾಗೂ ನಂಜನಗೂಡು ತಾಲ್ಲೂಕುಗಳ 16 ಗ್ರಾಮಗಳ 23 ಹಳ್ಳಿಗಳ ಜನರು ಸಂಭ್ರಮದಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕಸ್ತೂರು, ಆನಹಳ್ಳಿ, ಮೂಕಹಳ್ಳಿ, ಸಪ್ಪಯ್ಯನಪುರ, ಭೋಗಾಪುರ, ತೊರವಳ್ಳಿ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ದಾಸನೂರು ಪುಟ್ಟೇಗೌಡನಹುಂಡಿ, ಹೆಗ್ಗವಾಡಿ, ಕಿರಗಸೂರು, ಕೆಲ್ಲಬಂಳ್ಳಿ, ಮರಿಯಾಲ, ಬಸವನಪುರ, ಹೊನ್ನೇಗೌಡನಹುಂಡಿಗಳ ಗ್ರಾಮಸ್ಥರು ಬಂಡಿಕಟ್ಟಿ ಪೂಜೆ ನಡೆಸಿ ಮಂಗಳವಾದ್ಯಗಳೊಂದಿಗೆ ದೊಡ್ಡಮ್ಮತಾಯಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿ ಪೂಜೆ ನಡೆಸುತ್ತಾರೆ.

ಗ್ರಾಮಕ್ಕಷ್ಟೆ ಸೀಮಿತ: ಬಂಡಿ ಜಾತ್ರೆ ಹಾಗೂ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶ ನೀಡಲಿಲ್ಲ ಎಂಬುದು ಬಿಟ್ಟರೆ, ಜನರು ತಮ್ಮ ತಮ್ಮ ಗ್ರಾಮಗಳಲ್ಲಿ ಬಂಡಿಗಳನ್ನು ಕಟ್ಟಿ, ಸಾಂಪ್ರದಾಯಿಕವಾಗಿ ಜಾತ್ರೆಯ ಪೂಜೆ ಪುನಸ್ಕಾರ ನಡೆಸಿದರು. ನೆಂಟರಿಷ್ಟು, ಸ್ನೇಹಿತರನ್ನು ಆಮಂತ್ರಿಸಿ ಹಬ್ಬದ ಊಟವನ್ನು ಬಡಿಸಿದರು.

ಸಾಂಪ್ರದಾಯಿಕ ಪೂಜೆ

ದೊಡ್ಡಮ್ಮ ತಾಯಿ ಹಾಗೂ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಸಾಂಪ್ರದಾಯಿಕವಾಗಿ ಪೂಜೆ ಪುನಸ್ಕಾರಗಳು ಸರಳವಾಗಿ ನಡೆಯಿತು.

ಅರ್ಚಕರು ಪುಷ್ಬಲಂಕಾರ ಮಾಡಿ, ಪಂಚಾಮೃತ ಸೇರಿದಂತೆ ಅಭಿಷೇಕ ನಡೆಸಿ ಮುಂಜಾನೆಯೇ ಮಹಾಮಂಗಳಾರತಿ ನಡೆಸಿದರು. ದೇವಸ್ಥಾನಕ್ಕೆ ಬಂಡಿ ಕಟ್ಟುವ 16 ಗ್ರಾಮಗಳ ಅರ್ಚಕರು ಮಾತ್ರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ತಮ್ಮ ಗ್ರಾಮಗಳ ಬಂಡಿಗೆ ತೀರ್ಥ ಪ್ರಸಾದ ಕೊಂಡ್ಯೂಯ್ದರು. ಪ್ರತಿವರ್ಷ ಬಂಡಿ ಹಾಗೂ ಜನರಿಂದ ತುಂಬಿ ತುಳುಕುತ್ತಿದ್ದ ದೇವಸ್ಥಾನದ ಆವರಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.