ADVERTISEMENT

ಎಂಎಸ್‌ಪಿ ಕಾಯ್ದೆ: ನಾಳೆ ಕಾಯಕ ದಿನ ಆಚರಣೆ

ಪ್ರಧಾನಿ ಗಮನ ಸೆಳೆಯಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಯತ್ನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 4:59 IST
Last Updated 19 ಜೂನ್ 2022, 4:59 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಚಾಮರಾಜನಗರ: ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಜಾರಿಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವುದಕ್ಕಾಗಿ ರಾಜ್ಯ ರೈತ ಸಂಘಟನೆಗಳು ಸೋಮವಾರ (ಜೂನ್‌ 20) ರಾಜ್ಯದಾದ್ಯಂತ ‘ಕರ್ಮಯೋಗಿ ರೈತನ ಕಾಯಕ ದಿನ’ ಆಚರಿಸಲಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ಗಾಂಧಿ ಪ್ರತಿಮೆಯ ಮುಂಭಾಗದ ರಸ್ತೆಯಲ್ಲಿ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರುವ ಮೂಲಕ ರೈತರನ್ನು ರಕ್ಷಿಸಿ ಖಾತರಿ ಬೆಲೆ ನೀಡಿ ಎಂದು ಆಗ್ರಹಿಸಲಾಗುವುದು.ರೈತ ಸಂಘಟನೆಗಳು ರಾಜ್ಯದಾದ್ಯಂತ ಕಾಯಕ ದಿನ ಆಚರಿಸಲಿವೆ’ ಎಂದು ತಿಳಿಸಿದರು

‘ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿದ್ದರು. 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು. ಇವೆರಡೂ ಹುಸಿಯಾಗಿದೆ. ರೈತರ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಇನ್ನಾದರೂ ರೈತರಿಗೆ ಖಾತರಿ ಬೆಲೆ ಸಿಗುವಂತಹ ಕಾನೂನು ರಚಿಸಲಿ’ ಎಂದು ಆಗ್ರಹಿಸಿದರು.

ADVERTISEMENT

ಕೃಷಿ ಸಾಲ ನೀಡಲು ಬ್ಯಾಂಕುಗಳು ರೈತರ ಸಿಬಿಲ್ ಸ್ಕೋರ್ ಕೇಳುತ್ತಿವೆ. ಅತಿವೃಷ್ಟಿ-ಅನಾವೃಷ್ಟಿ ಬೆಳೆ ಹಾನಿಯಾದ ರೈತರು ಸಕಾಲಕ್ಕೆ ಸಾಲ ತುಂಬಲು ಹೇಗೆ ಸಾಧ್ಯ? ಇದನ್ನು ಅರಿಯದೆ ರೈತರಿಗೆ ಮಾರಕವಾಗುವ ನೀತಿಗಳನ್ನು ರೂಪಿಸಿದ್ದಾರೆ. ದೇಶ ಬಿಟ್ಟು ಓಡಿ ಹೋಗುವ ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿ ಸಾಲ ನೀಡುವ ಬ್ಯಾಂಕುಗಳು ರೈತರನ್ನು ಗುಲಾಮರಂತೆ ನೋಡುತ್ತಿವೆ. ಈ ನೀತಿಯನ್ನು ರದ್ದುಗೊಳಿಸದಿದ್ದರೆ, ಇದೇ 28 ರಂದು ಬೆಂಗಳೂರು ಆರ್‌ಬಿಐ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಬೆಳೆ ವಿಮಾ ಕಂಪನಿಗಳು ರೈತರಿಗೆ ಟೋಪಿ ಹಾಕುತ್ತಿವೆ. ಕಳೆದ ವರ್ಷದ ವಿಮಾ ಪರಿಹಾರ ₹200 ಕೋಟಿ ಬಾಕಿ ಉಳಿಸಿಕೊಂಡು ಬೆಳೆ ವಿಮೆ ಹಣ ತುಂಬುವಂತೆ ರೈತರಿಗೆ ಕರೆ ಕೊಟ್ಟಿವೆ. ಬೆಳೆ ವಿಮೆಯ ನೀತಿ ಸರಿಪಡಿಸಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು’ ಎಂದು ಶಾಂತಕುಮಾರ್‌ ಆಗ್ರಹಿಸಿದರು.

ರಾಜಕೀಯ ಬೇಡ: ತಾಲ್ಲೂಕಿನಉಡಿಗಾಲ ಆನೆ ಮಡುವಿನ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಯಾರೂ ರಾಜಕಾರಣ ಮಾಡಬಾರದರು. ಹೋರಾಟ ನಡೆಸುತ್ತಿರುವ ರೈತರ ಬೇಡಿಕೆ ಈಡೇರಿಸಬೇಕು. ನಿರ್ಲಕ್ಷ ಮಾಡಿದರೆ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ನಿರಂತರ ಹೋರಾಟ ನಡೆಸಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕಬ್ಬುಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪಟೇಲ್ ಶಿವಮೂರ್ತಿ, ಬರಡನಪುರ ನಾಗರಾಜ್, ಮೂಕಳ್ಳಿ ಮಾದೇವಸ್ವಾಮಿ ಉಡಿಗಾಲ ಮಾದೇವಸ್ವಾಮಿ, ಬಾಬು, ಹಾಲು ನಾಗರಾಜು, ಶಿವಸ್ವಾಮಿ, ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.