ADVERTISEMENT

ಮೇವು: ಪರಿಸ್ಥಿತಿ ಅವಲೋಕಿಸಲು ಸೂಚನೆ

ಜನಪ್ರತಿನಿಧಿಗಳ ಕಡೆಗಣನೆಗೆ ಆಕ್ರೋಶ: ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:24 IST
Last Updated 12 ಫೆಬ್ರುವರಿ 2020, 9:24 IST
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಚಾಮರಾಜನಗರ: ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗುವುದನ್ನು ತಡೆಯುವುದಕ್ಕಾಗಿ ಸದ್ಯದ ಸ್ಥಿತಿಗಳ ಬಗ್ಗೆ ಅವಲೋಕಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಜಿಲ್ಲಾ ಉ‌ಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇವಿನ ಲಭ್ಯತೆ ಬಗ್ಗೆ ಚರ್ಚೆ ನಡೆಯಿತು.

ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ.ವೀರಭದ್ರಯ್ಯ ಅವರು ಮಾತನಾಡಿ, ‘ಮೇವಿನ ಸಮಸ್ಯೆ ಬರುವ ಸಾಧ್ಯತೆ ಕ್ಷೀಣ. ಮುಂದಿನ 18 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿರಬಹುದು’ ಎಂದರು.

ADVERTISEMENT

ಶಾಸಕ ‌ಎನ್‌.ಮಹೇಶ್‌ ಅವರು ಮಾತನಾಡಿ, ‘ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಎಷ್ಟು ಮೇವು ಸಂಗ್ರಹದಲ್ಲಿದೆ’ ಎಂದು ಕೇಳಿದರು.

‘ಅದಕ್ಕಾಗಿ ಇದುವರೆಗೆ ಸಿದ್ಧತೆ ನಡೆಸಿಲ್ಲ. 5–10 ಹಸುಗಳನ್ನು ಸಾಕುತ್ತಿರುವವರು ಸ್ವತಃ ಅವರೇ ಮೇವು ಸಂಗ್ರಹಿಸಿಕೊಂಡಿದ್ದಾರೆ’ ಎಂದು ವೀರಭದ್ರಯ್ಯ ಹೇಳಿದರು.

ಮಹೇಶ್‌ ಅವರು ಮಾತನಾಡಿ, ‘ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡದಿದ್ದರೆ ಹೇಗೆ? ನಮ್ಮಲ್ಲಿನ ಮೇವುಗಳೆಲ್ಲವೂ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಹೋಗುತ್ತಿದೆ’ ಎಂದರು.

ಖರೀದಿ ಕೇಂದ್ರ ವಿಳಂಬಕ್ಕೆ ಅಸಮಾಧಾನ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ವಿಳಂಬ ಮಾಡಿದೆ. ಯೋಜನೆಯ ಪ್ರಯೋಜನ ರೈತರಿಗೆ ಸಿಕ್ಕಿಲ್ಲ ಎಂದು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ನಾಗರಿಕ ವ್ಯವಹಾರ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಉಪ ನಿರ್ದೇಶಕ ಆರ್‌.ರಾಚಪ್ಪ ಅವರು, ‘ಬೆಂಬಲ ಬೆಲೆ ಅಡಿಯಲ್ಲಿ ಜಿಲ್ಲೆಯಲ್ಲಿ 7,848 ಕ್ವಿಂಟಲ್‌ ಭತ್ತವನ್ನು ಖರೀದಿಸಲಾಗುತ್ತಿದೆ’ ಎಂದರು.

‘5000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆ. ಎಕರೆಗೆ 25 ಕ್ಷಿಂಟಲ್‌ ಇಳುವರಿ ಬರುತ್ತದೆ ಇಲ್ಲಿ ನೋಡಿದರೆ 8 ಸಾವಿರ ಕ್ವಿಂಟಲ್‌ ಮಾತ್ರ ಸರ್ಕಾರ ಖರೀದಿಸುತ್ತಿದೆ. ಇದರಿಂದ ರೈತರಿಗೆ ಏನು ಲಾಭವಾಯಿತು’ ಎಂದು ಎನ್‌. ಮಹೇಶ್ ಪ್ರಶ್ನಿಸಿದರು.

ಹನೂರು ಶಾಸಕ ನರೇಂದ್ರ ಅವರು ಮಾತನಾಡಿ, ‘ಜಿಲ್ಲಾಡಳಿತ ಖರೀದಿ ಕೇಂದ್ರ ತೆರೆಯುವ ಹೊತ್ತಿಗೆ, ರೈತರು ತಮ್ಮಲ್ಲಿದ್ದ ಭತ್ತವನ್ನೆಲ್ಲ ಮಾರಿದ್ದರು’ ಎಂದು ದೂರಿದರು.

ವೈದ್ಯರ ಕೊರತೆ: ಆರೋಗ್ಯಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಜಿಲ್ಲೆಯಲ್ಲಿ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 10 ಕಡೆಗಳಲ್ಲಿ ಆಯುಷ್‌ ವೈದ್ಯರು ಹಾಗೂ 9 ಕಡೆ ಗುತ್ತಿಗೆ ಆಧಾರದಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹನೂರು ತಾಲ್ಲೂಕಿನ ಮೀಣ್ಯಂ ಹಾಗೂ ಚಾಮರಾಜನಗರ ತಾಲ್ಲೂಕಿನ ತೆಳ್ಳನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ’ ಎಂದರು.

‘ನೇರ ಸಂದರ್ಶನಕ್ಕಾಗಿ ಮೂರು ತಿಂಗಳಲ್ಲಿ ಎರಡು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೇವೆ. ಯಾರೂ ಬಂದಿರಲಿಲ್ಲ. ಈಗ ಮೂವರು ಬಂದಿದ್ದಾರೆ. ಶೀಘ್ರದಲ್ಲಿ ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಡಾ.ರವಿ ಹೇಳಿದರು.

ಹನೂರು ಪ್ರಾಥಮಿಕ ಕೇಂದ್ರವನ್ನು ಯಾವಾಗ ಮೇಲ್ದರ್ಜೆಗೆ ಏರಿಸುತ್ತೀರಿ ಎಂದು ನರೇಂದ್ರ ಅವರು ಕೇಳಿದಾಗ, ‘ಮುಂದಿನ ಹಣಕಾಸು ವರ್ಷದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದರು.

ಆನೆ ಕಂದಕ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ–ಆನೆ ಸಂಘರ್ಷ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ 23 ಕಿ.ಮೀ ಉದ್ದದ ಆನೆ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು 0.8 ಕಿ.ಮೀ ಉದ್ದದ ಕಾಮಗಾರಿ ಬಾಕಿ ಇದೆ. ಅಲ್ಲಿ ನೀರಿನ ಹರಿವು ಇರುವುದರಿಂದ ರೈಲ್ವೆ ಕಂಬಿ ತಡೆ ಗೋಡೆ ನಿರ್ಮಿಸಬೇಕಿದೆ. ಇದರ ಜೊತೆಗೆ 14.3 ಕಿ.ಮೀ ಉದ್ದದ ರೈಲ್ವೆ ಕಂಬಿ ತಡೆ ಬೇಲಿ ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ₹8.5 ಕೋಟಿ ರೈಲ್ವೆ ಇಲಾಖೆಗೆ ಪಾವತಿಸಲಾಗಿದೆ’ ಎಂದರು.

ಒತ್ತುವರಿ‌ ತೆರವುಗೊಳಿಸಿ: ‘ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‌ವರೆಗಿನ ರಸ್ತೆಯಲ್ಲಿ ಮೊದಲ 6 ಕಿ.ಮೀ ಉದ್ದರ ರಸ್ತೆಯನ್ನು ₹22.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 6 ಕಿ.ಮೀನಿಂದ 8.40ರವರೆಗೆ ಚತುಷ್ಪಥ ರಸ್ತೆ ಮಾಡಲು ₹4 ಕೋಟಿಯ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಕಾಮಗಾರಿ ನಡೆಸಲು ಕಷ್ಟ. ಹಾಗಾಗಿ ಒತ್ತುವರಿ ತೆರವುಗೊಳಿಸುವಂತೆ ಪಿಡಿಒಗೆ ಪತ್ರ ಬರೆಯಲಾಗಿದೆ’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಇದ್ದರು.

ಕೆರೆಗಳ ಸ್ಥಿತಿಗತಿ: ವರದಿಗೆ ಸೂಚನೆ
ಜಿಲ್ಲೆಯಲ್ಲಿರುವ ಒಟ್ಟು ಕೆರೆಗಳು ಹಾಗೂ ಅವುಗಳಲ್ಲಿ ಎಷ್ಟರಲ್ಲಿ ನೀರಿದೆ? ಎಷ್ಟು ಬತ್ತಿವೆ? ಎಷ್ಟು ಒತ್ತುವರಿಯಾಗಿವೆ ಎಂಬುದರ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸಚಿವ ಸುರೇಶ್‌ ಕುಮಾರ್‌ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೆರೆಗಳ ಒತ್ತುವರಿ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಭೂ ಮಾಪಕ ಇಲಾಖೆಯ ಉಪ ನಿರ್ದೇಶಕಿ ವಿದ್ಯಾಯಿನಿ ಅವರು ‘2016ರವರೆಗೆ ಜಿಲ್ಲೆಯಲ್ಲಿ ಎಲ್ಲ ಕೆರೆಗಳ ಮಾಪನ ಮಾಡಿ ಒತ್ತುವರಿಯಾಗಿರುವ ಬಗ್ಗೆ ಸಂಪೂರ್ಣ ವಿವರ ಕಲೆ ಹಾಕಲಾಗಿದೆ. ಆ ಬಳಿಕ ಕೆರೆ ಒತ್ತುವರಿ ಆಗಿರುವ ಬಗ್ಗೆ ದೂರುಗಳು ಬಂದಿವೆ’ ಎಂದರು.

ಜಿಲ್ಲಾಧಿಕಾರಿ ರವಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ 585 ಕೆರೆಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸಂಖ್ಯೆಗೂ ನಮ್ಮಲ್ಲಿರುವ ಮಾಹಿತಿಗೂ ವ್ಯತ್ಯಾಸವಿದೆ. ಕೆರೆ ಒತ್ತುವರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒತ್ತುವರಿ ತೆರವಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ’ ಎಂದರು.

‘ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ’
ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಉಪ‍ ನಿರ್ದೇಶಕ ಮುತ್ತುರಾಜ್‌ ಅವರು, ‘ಜಲಾಮೃತ ಯೋಜನೆಯ ಅಡಿಯಲ್ಲಿ ₹ 60.80 ಕೋಟಿ ವೆಚ್ಚದಲ್ಲಿ ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಚೆಕ್‌ ಡ್ಯಾಂ, ಬದು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್‌.ಕೆ.ಮಹೇಶ್‌ ಅವರು, ‘ಈ ಯೋಜನೆ‌ಗಳ ಬಗ್ಗೆ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರ ಜೊತೆ ಚರ್ಚಿಸಿಲ್ಲ. ಜನಪ್ರತಿನಿಧಿಗಳ ಗಮನಕ್ಕೆ ತಾರದೆ, ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರ ಕೊಟ್ಟವರು ಯಾರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್ ಕೂಡ ಇದಕ್ಕೆ ಧ್ವನಿಯಾದರು. ಮಧ್ಯಪ್ರವೇಶಿಸಿದ ಸಚಿವ ಸುರೇಶ್‌ ಕುಮಾರ್‌, ‘ಜನಪ್ರತಿಧಿಗಳಿಗೆ ಮಾಹಿತಿ ಕೊಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದರು.

ಬೆಳೆ ವಿಮೆ ಪರಿಹಾರ ಇನ್ನೂ ರೈತರಿಗೆ ಸಿಗದಿರುವ ಬಗ್ಗೆಯೂ ಶಾಸಕರು ಮುತ್ತುರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಭತ್ತ ಇಳುವರಿ ಎಷ್ಟು ಬಂದಿದೆ ಎಂದು ಕೇಳಿದಾಗಲೂ ಉಪನಿರ್ದೇಶಕರ ಬಳಿ ಉತ್ತರ ಇರಲಿಲ್ಲ.

‘ಮುಂದಿನ ಸಭೆಗೆ ಮೊಬೈಲ್ ತರಬೇಡಿ’
ಸಭೆಯಲ್ಲಿ ಕೆಲವು ಅಧಿಕಾರಿಗಳು ಮೊಬೈಲ್‌ ನೋಡುತ್ತಿದ್ದುದು, ನಿದ್ದೆ ಮಾಡುತ್ತಿದ್ದ ದೃಶ್ಯಗಳನ್ನು ಚಾನೆಲ್‌ಗಳ ಛಾಯಾಗ್ರಾಹಕರು ಚಿತ್ರೀಕರಿಸಿದ್ದರು.

ಇದು ಗಮನಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುರೇಶ್‌ ಕುಮಾರ್‌ ಅವರು, ‘ಸಭೆಯಲ್ಲಿ ಗಂಭೀರವಾಗಿ ಇರಬೇಕು. ಹಿಂದಿನ ಸಭೆಯಲ್ಲೂ ಅಧಿಕಾರಿಯೊಬ್ಬರು ಮೊಬೈಲ್‌ ಗೇಮ್‌ ಆಡುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. ಇದು ಸರಿಯಲ್ಲ. ಮುಂದಿನ ಸಭೆಗೆ ಯಾರೂ ಮೊಬೈಲ್‌ ತರಬೇಡಿ. ತಂದರೂ ಎಲ್ಲರೂ ಒಂದು ಪೆಟ್ಟಿಗೆಯಲ್ಲಿ ಹಾಕಬೇಕು’ ಎಂದ ಅವರು, ನಿದ್ದೆ ಮಾಡಿದ, ಮೊಬೈಲ್‌ ನೋಡುತ್ತಿದ್ದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.