ADVERTISEMENT

ಚಾಮರಾಜನಗರ: ಕಿಸಾನ್ -ಮಜ್ದೂರ್‌ ಬಚಾವೋ ದಿವಸ ಆಚರಣೆ

ರೈತ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳಿಗೆ ಕಾಂಗ್ರೆಸ್‌ ವಿರೋಧ, ಬಿಜೆಪಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 14:33 IST
Last Updated 2 ಅಕ್ಟೋಬರ್ 2020, 14:33 IST
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್‌ ಮುಖಂಡರು ಕಿಸಾನ್‌ –ಮಜ್ದೂರ್‌ ಬಚಾವೋ ದಿವಸವಾಗಿ ಆಚರಿಸಿದರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್‌ ಮುಖಂಡರು ಕಿಸಾನ್‌ –ಮಜ್ದೂರ್‌ ಬಚಾವೋ ದಿವಸವಾಗಿ ಆಚರಿಸಿದರು   

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ರೈತ ಹಾಗೂ ಕಾರ್ಮಿಕ ವಿರೋಧ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾ ಕಾಂಗ್ರೆಸ್‌ ಸಮಿತಿಯುರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ’ಕಿಸಾನ್ -ಮಜ್ದೂರ್‌ ಬಚಾವೋ ದಿವಸ’ವಾಗಿ ಆಚರಿಸಿತು.

ನಗರದ ಚಾಮರಾಜೇಶ್ವರ ಉದ್ಯಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.

ನಂತರ ಬಿಜೆಪಿ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು. ಉಪ ತಹಶೀಲ್ದಾರ್ ಮಹದೇವಶೆಟ್ಟಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸರ್ವಾಧಿಕಾರಿ ಧೋರಣೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೇಂದ್ರವು ಬಂಡವಾಳಶಾಹಿಗಳ ಪರವಾದ ಶಾಸನಗಳನ್ನು ಮಾಡಿ, ರೈತರು ಹಾಗು ಕಾರ್ಮಿಕರನ್ನು ಬೀದಿಪಾಲು ಮಾಡಲು ಮುಂದಾಗಿದೆ. ಈಗ ಜಾರಿ ಮಾಡಲು ಮುಂದಾಗಿರುವ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಪ್ಪಿಗೆ ಇಲ್ಲ. ಅದರೂ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಕಾಯ್ದೆ ರೂಪುಗೊಳ್ಳುತ್ತಿದೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರು ಹಾಗು ಬಡವರ ವಿರೋಧಿಯಾಗಿದೆ. ಕಾರ್ಮಿಕರ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕ. ಪಕ್ಷವು ಈ ಕಾಯ್ದೆ ವಿರುದ್ದ ನಿರಂತರ ಹೋರಾಟ ಮಾಡಲಿದೆ’ ಎಂದರು.

ಮುಖಂಡರಾದ ಎಸ್. ಬಾಲರಾಜು ಮಾತನಾಡಿದರು.ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ರಮೇಶ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ತೋಟೇಶ್, ಗುರುಸ್ವಾಮಿ, ಮುಖಂಡ ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಸದಸ್ಯರಾದ ಮಹದೇವಶೆಟ್ಟಿ, ಮುಖಂಡರಾಧ ಕಾಗಲವಾಡಿ ಚಂದ್ರು, ನಾಗಯ್ಯ, ಅರುಣ್, ನಾಗಾರ್ಜನ ಪ್ರಥ್ವಿ, ಎನ್.ಎಂ. ಶಿವಸ್ವಾಮಿ, ಜಯಸಿಂಹ, ಶೇಖರ್, ರಾಜೇಂದ್ರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಭಾಗ್ಯ, ಉಮ್ಮತ್ತೂರು ಭಾಗ್ಯ, ನಾಗಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.