ADVERTISEMENT

‘ಮಾನ, ಮಾನವಹಕ್ಕಿಗೆ ಹೋರಾಡಿದ್ದ ಚನ್ನಮ್ಮ’

ಚಾಮರಾಜನಗರ: ರಾಜ್ಯ ಮಟ್ಟದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 7:02 IST
Last Updated 24 ಅಕ್ಟೋಬರ್ 2022, 7:02 IST
ಸಮಾರಂಭದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮರಿಯಾಲ ಶ್ರೀ, ನಗರದ ವಿರಕ್ತ ಮಠದ ಶ್ರೀಗಳು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಸಮಾರಂಭದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮರಿಯಾಲ ಶ್ರೀ, ನಗರದ ವಿರಕ್ತ ಮಠದ ಶ್ರೀಗಳು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಚಾಮರಾಜನಗರ: ‘ಮಾನ ಹಾಗೂ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದ ಪುಟ್ಟ ಸಂಸ್ಥಾನದ ಕಿತ್ತೂರು ರಾಣಿ ಚನ್ನಮ್ಮ ಆತ್ಮಾಭಿಮಾನ, ಆತ್ಮಗೌರವ, ಸ್ವಾಭಿಮಾನದ ಸಂಕೇತ’ ಎಂದುಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ, ವಿಮರ್ಶಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡ ಭಾನುವಾರ ಅಭಿಪ್ರಾಯಪಟ್ಟರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ರಿಟಿಷರ ವಸಾಹತಿಶಾಹಿ ನೀತಿಯನ್ನು ಒಪ್ಪಿಕೊಳ್ಳದೆ ಅವರಿಗೆ ಸೆಡ್ಡುಹೊಡೆದ ಮೊದಲ ಮಹಿಳೆ ಚನ್ನಮ್ಮ.ಈ ನೆಲಕ್ಕಾಗಿ ಬಹುದೊಡ್ಡ ಸ್ವಾತಂತ್ರ್ಯ ಕಹಳೆ ಮೊಳಗಿಸಿ, ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಇತಿಹಾಸ ಎಂದಿಗೂ ಬತ್ತದ ಸೆಲೆ’ ಎಂದರು.

‘ಇಂದು ನಾವು ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡುತ್ತಿದ್ದೇವೆ. ಚನ್ನಮ್ಮನವರು ಅಂದಿನ ಕಾಲದಲ್ಲೇ ಮಹಿಳಾ ಸಬಲೀಕರಣದ ಪ್ರತೀಕವಾಗಿದ್ದರು. ಬ್ರಿಟಿಷರ ರಾಜತಾಂತ್ರಿಕ ನೀತಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಬ್ರಿಟಿಷರೊಂದಿಗೆ ಕನ್ನಡದಲ್ಲೇ ವ್ಯವಹಾರ ಮಾಡುತ್ತಿದ್ದ ಅವರು ಸ್ವಾಭಿಮಾನಿಯಾಗಿದ್ದರು. ಪಠ್ಯದಲ್ಲಿ ಚನ್ನಮ್ಮ ಬಗ್ಗೆ ಅಂಗೈ ಅಗಲದಷ್ಟೇ ಮಾಹಿತಿ ಇದೆ. ಮುಂದಿನ ಪೀಳಿಗೆಗೆ ಅವರ ಬಗ್ಗೆ ತಿಳಿಸಬೇಕಾಗಿದೆ’ ಎಂದರು.

ADVERTISEMENT

ಸಮಾರಂಭ ಉದ್ಘಾಟಿಸಿ ಮಾತನಾಡಿದಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ‘ಕಿತ್ತೂರು ರಾಣಿ ಚನ್ನಮ್ಮ ಅವರ ಜಯಂತಿ, ಉತ್ಸವ ಬೆಳಗಾವಿಗೆ ಮಾತ್ರ ಸೀಮಿತವಾಗಿತ್ತು. 2017ರಿಂದ ರಾಜ್ಯ ಮಟ್ಟದ ಜಯಂತಿ ಆಚರಿಸಲಾಗುತ್ತಿದೆ. ಜಿಲ್ಲೆಗಳಲ್ಲೂ ಆಚರಿಸಲಾಗುತ್ತಿದೆ. ಮೈಸೂರು ಭಾಗದಲ್ಲಿ ರಾಜ್ಯ ಮಟ್ಟದ ಜಯಂತಿ ಆಚರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಸರ್ಕಾರ ಈ ಬಾರಿ ಚಾಮರಾಜನಗರಲ್ಲಿ ಆಚರಿಸಲು ಅನುಮತಿ ನೀಡಿತ್ತು’ ಎಂದರು.

‘ಚನ್ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ. ಆದರೆ, ಕೇಂದ್ರ ಸರ್ಕಾರ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಿಲ್ಲ. ಸಿಪಾಯಿ ದಂಗೆ, ಸಿಖ್‌ ದಂಗೆ ನಡೆಯುವುದಕ್ಕೂ ಮೊದಲೇ ಪುಟ್ಟ ಸಂಸ್ಥಾನದ ರಾಣಿಯಾಗಿದ್ದ ಚನ್ನಮ್ಮ ಬ್ರಿಟಿಷರನ್ನು ಸೋಲಿಸಿದ್ದರು’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ಉಣಿಸಿದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮನವರ ಸಮಗ್ರ ಚರಿತ್ರೆಯನ್ನು ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಇನ್ನಷ್ಟು ವಿಸ್ತಾರವಾಗಿ ತಿಳಿಸುವ ಅವಶ್ಯವಿದೆ’ ಎಂದರು.

ಮರಿಯಾಲದ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮರದ ಚನ್ನಬಸವಸ್ವಾಮೀಜಿ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ,ಸದಸ್ಯೆ ಮಮತಾ ಬಾಲಸುಬ್ರಮಣ್ಯಂ,ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ನಿರ್ದೇಶಕ ಸದಾಶಿವಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ತಹಶೀಲ್ದಾರ್ ಬಸವರಾಜು, ಸಮಾಜದ ಮುಖಂಡರಾದ ಅಮ್ಮನಪುರ ಮಲ್ಲೇಶ್, ಮೋಹನ್, ಪುಟ್ಟಸ್ವಾಮಿ, ಇತರರು ಇದ್ದರು.

ಕಾರ್ಯಕ್ರಮದಲ್ಲಿ ಗದಗಿನ ಶಂಕರಪ್ಪ, ರಾಮಪ್ಪ, ಸಂಕಣ್ಣನವರ ತಂಡ ನಡೆಸಿಕೊಟ್ಟ ಗೀತ ಗಾಯನ ಗಮನ ಸೆಳೆಯಿತು.

ಮೆರವಣಿಗೆ:ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದಿಂದ ರಂಗಮಂದಿರದವರೆಗೂ ಜಾನಪದ ಕಲಾತಂಡಗಳೊಡನೆ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಸಚಿವ ಸೋಮಣ್ಣ ಗೈರು
ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗೈರು ಆಗಿದ್ದರು. ಶನಿವಾರ ರಾತ್ರಿ ಗುಂಡ್ಲುಪೇಟೆಯ ಹಂಗಳದಲ್ಲಿ ವಾಸ್ತವ್ಯ ಹೂಡಿದ್ದ ಅವರು ಅಲ್ಲಿಂದ ನೇರವಾಗಿ ಕೊಳ್ಳೇಗಾಲಕ್ಕೆ ತೆರಳಿದರು.

ಸಚಿವರ ಪರಿಷ್ಕೃತ ವೇಳಾಪಟ್ಟಿಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಉಲ್ಲೇಖ ಇತ್ತು.

‘ಉಪ ಸಭಾಧ್ಯಕ್ಷರ ನಿಧನದಿಂದಾಗಿ ಅವರ ಅಂತಿಮ ದರ್ಶನ ಪಡೆಯಲು ಹೋಗಬೇಕಿರುವುದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಸಚಿವರು ಕಳುಹಿಸಿರುವ ಸಂದೇಶವನ್ನು ಸಂಘಟಕರು ಓದಿದರು.

ಮೌನಾಚರಣೆ:ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಅವರ ನಿಧನ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.