ADVERTISEMENT

ಕಾರ್ಯಕರ್ತರೊಂದಿಗೆ ಗೋಪ್ಯ ಸಭೆ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಬಿಜೆಪಿಗೆ ಶೀಘ್ರ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 15:00 IST
Last Updated 17 ಜುಲೈ 2021, 15:00 IST
ಎನ್‌.ಮಹೇಶ್‌
ಎನ್‌.ಮಹೇಶ್‌   

ಚಾಮರಾಜನಗರ/ಕೊಳ್ಳೇಗಾಲ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರಲು ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಭೆ ಕಾರ್ಯಕರ್ತರ ಗೋಪ್ಯ ಸಭೆಗಳನ್ನು ನಡೆಸುತ್ತಿದ್ದಾರೆ.

ಶನಿವಾರ ಕೊಳ್ಳೇಗಾಲ ತಾಲ್ಲೂಕಿನ ಕುರುಬನ ಕಟ್ಟೆ ದೇವಸ್ಥಾನದ ಆವರಣದಲ್ಲಿ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದ್ದು, 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಶಾಸಕರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಬೆಂಬಲಿಗರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ, ಬಿಎಸ್‌ಪಿಯಿಂದ ದೂರವಾದ ನಂತರ ಎನ್‌.ಮಹೇಶ್‌ ಅವರು ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಅಂದಿನಿಂದಲೇ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಇದನ್ನು ಅವರು ನಿರಾಕರಿಸುತ್ತಲೇ ಬಂದಿದ್ದಾರೆ.

ADVERTISEMENT

ಅಂತಿಮ ಹಂತದಲ್ಲಿ: ವಾರದಿಂದೀಚೆಗೆ ಕಾರ್ಯಕರ್ತರ ಹಾಗೂ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲು ಮಹೇಶ್‌ ಅವರು ಸರಣಿ ಸಭೆ ನಡೆಸುತ್ತಿದ್ದಾರೆ. ಇದೇ 15ರಂದು ಚಾಮರಾಜನಗರ ಮತ್ತು ಗುಂಡ್ಲುಪೇಟೆಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ. ಶನಿವಾರ ಕೊಳ್ಳೇಗಾಲದಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ. ಭಾನುವಾರ ಮೈಸೂರು ಹಾಗೂ ಸೋಮವಾರ ಬೆಂಗಳೂರಿನಲ್ಲಿ ಸಭೆಗಳನ್ನು ಕರೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಶಾಸಕರು ಯಡಿಯೂರಪ್ಪ ಅವರ ಜೊತೆ ಮಾತನಾಡಿದ್ದಾರೆ. ಆಷಾಢ ಕಳೆದ ಬಳಿಕ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಇದು ಅಂತಿಮ ಹಂತದ ಅಭಿಪ್ರಾಯ ಸಂಗ್ರಹ. ‘ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಸೇರಲು ಬಯಸಿದ್ದೇನೆ. ಆದರೆ, ನೀವು ಹೇಳಿದರೆ ಮಾತ್ರ ಸೇರುತ್ತೇನೆ. ಇಲ್ಲದಿದ್ದರೆ, ಇಲ್ಲ’ ಎಂದು ಮಹೇಶ್‌ ಅವರು ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕಾರ್ಯಕರ್ತರು ಎಲ್ಲ ಸಭೆಗಳಲ್ಲಿ ಮಹೇಶಣ್ಣಗೆ ತಿಳಿಸಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

ಶನಿವಾರದ ಸಭೆಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎನ್‌.ಮಹೇಶ್‌ ಅವರು, ‘ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಬಗ್ಗೆ ಚರ್ಚೆ ನಡೆಸಲು ಕಾರ್ಯಕರ್ತರ ಸಭೆ ಕರೆದಿದ್ದೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.