ಕೊಳ್ಳೇಗಾಲ: ಇಲ್ಲಿನ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣ ಮಳೆ ನೀರಿನಿಂದ ಜಲಾವೃತವಾಗಿದೆ.
ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕ್ರೀಡಾಂಗಣ ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ಕ್ರೀಡಾಪಟುಗಳಿಗೆ ಹಾಗೂ ವಾಯು ವಿಹಾರಿಗಳಿಗೆ ತೊಂದರೆ ಉಂಟಾಗಿದೆ. ಮೈದಾನದಲ್ಲಿ ನೀರು ತುಂಬಿಕೊಂಡರೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಸ್ಥಳವಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ಸಹ ಕ್ರೀಡಾಂಗಣ ಇದೇ ಪರಿಸ್ಥಿತಿಯಲ್ಲಿ ಇದ್ದು, ಕ್ರೀಡಾಪಟುಗಳಿಗೆ ಮಳೆ ಬಂದರೆ ಕ್ರೀಡಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ.
ಪ್ರತಿನಿತ್ಯ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಮೈದಾನದಲ್ಲಿ ವ್ಯಾಯಾಮ ಮಾಡುತ್ತಾರೆ, ಮಳೆ ಬಂದಾಗ ಅವರಿಗೆ ತೊಂದರೆ ಆಗುತ್ತದೆ.
ಕ್ರೀಡಾಂಗಣ ಜಲಾವೃತವಾದರೆ ಕ್ರೀಡಾಂಗಣ ಒಣಗುವುದಕ್ಕೆ ಕನಿಷ್ಠ ಮೂರು ದಿನಗಳು ಬೇಕು, ಹಾಗಾಗಿ ಇದರ ಮಧ್ಯೆ ಯಾವ ಅಭ್ಯಾಸವನ್ನು ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ್ದ ಈ ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಒಟ್ಟಾರೆ ಹೇಳಬೇಕಾದರೆ ಕಾಟಾಚಾರಕ್ಕೆ ಯುವಜನ ಸೇವಾ ಕ್ರೀಡಾ ಇಲಾಖೆಯವರು ಕ್ರೀಡಾಂಗಣವನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕ್ರೀಡಾಪಟು ಸುನಿಲ್, ನಿತಿನ್, ಮನೋರಂಜನ್, ಜೀವನ್ ಎಚ್ಚರಿಕೆ ನೀಡಿದರು.
ಯುವಜನ ಸೇವಾ ಕ್ರೀಡಾ ಇಲಾಖೆಯವರು ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಮಳೆ ಬಂದರೆ ಮೈದಾನ ನೀರಿನಿಂದ ಜಲಾವೃತವಾಗುತ್ತದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು.–ರಾಜಶೇಖರ್, ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.