ADVERTISEMENT

ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ಬೈಕ್ ರ‍್ಯಾಲಿ

ನಾಗಮೋಹನದಾಸ್ ವರದಿ ಅವೈಜ್ಞಾನಿಕ: ಸತ್ತೇಗಾಲ ಗ್ರಾಮಸ್ಥರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:04 IST
Last Updated 21 ಫೆಬ್ರುವರಿ 2026, 6:04 IST
ಒಳ ಮೀಸಲಾತಿ ವಿರೋಧಿಸಿ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಂಘ, ವಿವಿಧ ಸಂಘಟನೆಗಳ ಒಕ್ಕೂಟ, ಪರಿಶಿಷ್ಟಜಾತಿ ಬಲಗೈ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು
ಒಳ ಮೀಸಲಾತಿ ವಿರೋಧಿಸಿ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಂಘ, ವಿವಿಧ ಸಂಘಟನೆಗಳ ಒಕ್ಕೂಟ, ಪರಿಶಿಷ್ಟಜಾತಿ ಬಲಗೈ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು   

ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಂಘ, ವಿವಿಧ ಸಂಘಟನೆಗಳ ಒಕ್ಕೂಟ, ಪರಿಶಿಷ್ಟ ಜಾತಿ ಬಲಗೈ ಸಮಾಜದ ವತಿಯಿಂದ ಬೈಕ್ ರ‍್ಯಾಲಿ ನಡೆಯಿತು.

ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಬೈಕ್ ರ‍್ಯಾಲಿಗೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಸೋಮಣ್ಣ ಚಾಲನೆ ನೀಡಿದರು.

ಗ್ರಾಮದಿಂದ ಹೊರಟ ಬೈಕ್ ರ‍್ಯಾಲಿ ಧನಗೆರೆ, ಸರಗೂರು, ನರೀಪುರ, ಹೊಸ ಅಣಗಳ್ಳಿ, ಮೂಲಕ ಸಾಗಿ ಬಂದು ಕೊಳ್ಳೇಗಾಲದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ನಂತರ ಹಿರಿಯ ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ಒಳಮೀಸಲಾತಿಯ ಪ್ರವರ್ಗ ಎ.ಬಿ.ಸಿ ಹಿಂಪಡೆಯದೆ ಹೋದರೆ ಬಲಗೈ ಸಮುದಾಯದವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ನಾಗಮೋಹನದಾಸ್ ಅವರ ವರದಿಯು ಅವೈಜ್ಞಾನಿಕವಾಗಿದ್ದು ಅವರು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೆ ಕೆಲವು ಸಮುದಾಯದವರಿಗೆ ಅನುಕೂಲ ಮಾಡುವ ರೀತಿಯಲ್ಲಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದರು.

ಈ ವರದಿಯನ್ನು ಸರ್ಕಾರ ತಿರಸ್ಕರಿಸ ಬೇಕಾಗಿತ್ತು . ಒಳಮೀಸಲಾತಿಯಲ್ಲಿ ಪ್ರವರ್ಗ- ಎ.ಬಿ.ಸಿ ಮಾಡಿರುವುದರಿಂದ ಸರ್ಕಾರಿ ಉದ್ಯೋಗಕ್ಕೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ದೊಡ್ಡ ಹೊಡೆತ ಬೀಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನ ಸರ್ಕಾರದಲ್ಲಿ ಬಲಗೈ ಸಮುದಾಯದ ಸಚಿವರು ಹಾಗೂ ಶಾಸಕರು ತಡೆಗಟ್ಟುವ ಕೆಲಸವನ್ನು ಮಾಡಬೇಕು. ಇಲ್ಲವಾದರೆ ಇವರ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಆಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಸಮುದಾಯದ ಸಚಿವರಿಗೆ, ಶಾಸಕರಿಗೆ ಎಚ್ಚರಿಕೆ ನೀಡಿದರು.

ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ ಮಾತನಾಡಿ, ಸಮುದಾಯದ ಸಚಿವರು, ಶಾಸಕರು ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸತ್ತೇಗಾಲ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ವಿವಿಧ ಸಂಘಟನೆಗಳ ಒಕ್ಕೂಟದ ಪರಿಶಿಷ್ಟಜಾತಿ ಬಲಗೈ ಸಮಾಜದ ಪುಟ್ಟಸ್ವಾಮಿ, ನಂಜುಂಡಮೂರ್ತಿ, ಸಿದ್ದರಾಜು, ಮಲ್ಲೇಶ್, ಪ್ರಭುಸ್ವಾಮಿ, ಮಹದೇವಯ್ಯ, ನಾರಾಯಣಸ್ವಾಮಿ, ಶಿವಶಂಕರ್, ಬಸವಣ್ಣ, ಭಾಸ್ಕರ್, ಮಹಾಲಿಂಗ, ರಾಜಶೇಖರ್, ಚಿಕ್ಕಮಾಳಿಗೆ, ಸಿದ್ದಪ್ಪಾಜಿ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT