ಕೊಳ್ಳೇಗಾಲ: ಇಲ್ಲಿನ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಕೆಲ ಸಿಬ್ಬಂದಿ ನಾಲ್ಕು ದಿನಗಳ ಕಾಲ ಅಮೃತ್ ನಿರ್ಮಲ್ ನಗರ ಯೋಜನೆಯಡಿ ಸೋಮವಾರ ಶೈಕ್ಷಣಿಕ ಪ್ರವಾಸಕ್ಕೆ ಹೊರಟರು.
ನಗರಸಭೆಯ ಪರಿಸರ ಎಂಜಿನಿಯರ್ ಪ್ರಸನ್ನ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅಮೃತ್ ನಿರ್ಮಲ ನಗರ ಯೋಜನೆಯಡಿ ಸುಮಾರು ₹11ಲಕ್ಷ ವೆಚ್ಚದಲ್ಲಿ ನಾಲ್ಕು ದಿನಗಳ ಕಾಲ ಉಡುಪಿ ಹಾಗೂ ಕಾರವಾರ ಸೇರಿದಂತೆ ಸುತ್ತಮುತ್ತಲಿನ ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇದರ ಉದ್ದೇಶ ಎಂದರೆ ಅಲ್ಲಿನ ನಗರಸಭೆಯ ಸ್ಥಿತಿಗತಿ ಎ ಖಾತೆ, ಬಿ ಖಾತೆ, ಯುಜಿಡಿ, ಘನ ತ್ಯಾಜ್ಯ ವಿಲೇವಾರಿ, ಕಂದಾಯ, ನೀರು ಸರಬರಾಜು ಸೇರಿದಂತೆ ಇತರ ಅಧ್ಯಯನಗಳ ವಿಷಯಗಳನ್ನು ತಿಳಿದುಕೊಳ್ಳಲು ಈ ಪ್ರವಾಸವನ್ನು ಕೈಗೊಂಡಿದ್ದಾರೆ. ಪ್ರತಿ ಐದು ವರ್ಷದ ನಗರಸಭಾ ಅವಧಿಯಲ್ಲಿ ಒಂದು ಬಾರಿ ಇಂತಹ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲಿನ ನಗರಸಭೆಯಲ್ಲಿ ಏನೆಲ್ಲ ಮುಂದುವರಿದಿದೆ ಎಂಬುದನ್ನು ತಿಳಿದುಕೊಂಡು ಇಲ್ಲಿಯೂ ಸಹ ಅನುಮೋದನೆ ಮಾಡಬಹುದು ಹಾಗಾಗಿ ಪ್ರತಿ ವರ್ಷ ಇಂತಹ ಯೋಜನೆ ಅಡಿ ಪ್ರವಾಸವನ್ನು ಕೈಗೊಳ್ಳುತ್ತೇವೆ ಹಾಗಾಗಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದು ಈ ಪ್ರವಾಸವನ್ನು ಕೈಗೊಂಡಿದ್ದೇವೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರವಾಸವನ್ನು ಮಾಡಿ ಅಭಿವೃದ್ಧಿಯ ಬಗ್ಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ ಶಂಕರ್ ಸೇರಿದಂತೆ ಎಲ್ಲಾ ಸದಸ್ಯರು ಹಾಗೂ ಕೆಲ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.