ADVERTISEMENT

ಕೊಳ್ಳೇಗಾಲ: ಸದಸ್ಯರ ಅನರ್ಹತೆ ತಂದ ರಾಜಕೀಯ ಸಂಚಲನ

ಕೊಳ್ಳೇಗಾಲದಲ್ಲಿ ಬಿಸಿ ಬಿಸಿ ಚರ್ಚೆ, ಕಾನೂನು ಹೋರಾಟಕ್ಕೆ ತಯಾರಿ

ಅವಿನ್ ಪ್ರಕಾಶ್
Published 8 ಸೆಪ್ಟೆಂಬರ್ 2021, 4:34 IST
Last Updated 8 ಸೆಪ್ಟೆಂಬರ್ 2021, 4:34 IST
ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪಕ್ಷದ ಪರವಾಗಿ ಆದೇಶ ಬಂದಿದ್ದಕ್ಕೆ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಹಾಗೂ ಮುಖಂಡರು ಪಕ್ಷದ ಇಬ್ಬರು ಸದಸ್ಯರಾದ ಜಯಮರಿ ಹಾಗೂ ಜಯರಾಜು ಅವರಿಗೆ ಸಿಹಿ ತಿನ್ನಿಸಿದರು
ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪಕ್ಷದ ಪರವಾಗಿ ಆದೇಶ ಬಂದಿದ್ದಕ್ಕೆ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಹಾಗೂ ಮುಖಂಡರು ಪಕ್ಷದ ಇಬ್ಬರು ಸದಸ್ಯರಾದ ಜಯಮರಿ ಹಾಗೂ ಜಯರಾಜು ಅವರಿಗೆ ಸಿಹಿ ತಿನ್ನಿಸಿದರು   

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಏಳು ಬಿಎಸ್‌ಪಿ ಸದಸ್ಯರನ್ನು ಪಕ್ಷದ ವಿಪ್‌ ಉಲ್ಲಂಘನೆ ಪ್ರಕರಣದಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯ ಅನರ್ಹಗೊಳಿಸಿರುವುದು, ನಗರದ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.

ಅನರ್ಹಗೊಂಡ ಏಳು ಮಂದಿಯೂ ಶಾಸಕ ಎನ್‌.ಮಹೇಶ್‌ ಬೆಂಬಲಿಗರಾಗಿದ್ದು, ಈ ಬೆಳವಣಿಗೆಯಿಂದ ಶಾಸಕರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲು ಸದಸ್ಯರು ನಿರ್ಧರಿಸಿದ್ದು, ಈ ಸಂಬಂಧ ಚರ್ಚಿಸುವುದಕ್ಕಾಗಿ ಶಾಸಕ ಎನ್‌.ಮಹೇಶ್‌ ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ಹೋರಾಟದಲ್ಲೂ ಸೋಲಾಗಿ ಚುನಾವಣೆ ನಡೆಯುವುದು ಖಚಿತವಾದರೆ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆಯೂ ಅವರು ಚರ್ಚಿಸಲಿದ್ದಾರೆ.

ADVERTISEMENT

ಇತ್ತ ಬಿಎಸ್‌ಪಿ ಜಿಲ್ಲಾ ಘಟಕ ಕೂಡ ಕಾನೂನು ಹೋರಾಟಕ್ಕೆ ತಯಾರಿ ನಡೆಸಿದ್ದು, ಮಂಗಳವಾರ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದೆ.

ಮಹೇಶ್‌ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟನೆಗೊಳಿಸಿದ ಬಳಿಕ ನಗರಸಭೆಯ ಒಂಬತ್ತು ಬಿಎಸ್‌ಪಿ ಸದಸ್ಯರ ಪೈಕಿಪ್ರಕಾಶ್ ಶಂಕನಪುರ, ರಾಮಕೃಷ್ಣ, ನಾಶೀರ್ ಶರೀಫ್, ನಾಗಸುಂದ್ರಮ್ಮ, ನಾಗಮಣಿ, ಗಂಗಮ್ಮ, ಪವಿತ್ರಾ ಶಾಸಕರೊಂದಿಗೆ ಗುರುತಿಸಿಕೊಂಡಿದ್ದರು.

ಪಕ್ಷದಿಂದ ದೂರ ಉಳಿದಿದ್ದ ಇವರು, ನಗರಸಭೆ ಅಧ್ಯಕ್ಷ–ಉಪಾ‌ಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಬಿಎಸ್‌ಪಿಯಿಂದ 23ನೇ ವಾರ್ಡ್‌ ಸದಸ್ಯೆ ಜಯಮರಿ ಸ್ಪರ್ಧಿಸಿದ್ದರು. ಅವರಿಗೆ ಮತ ಚಲಾಯಿಸಬೇಕು ಎಂದು ಪಕ್ಷವು ವಿಪ್‌ ನೀಡಿತ್ತು. ಇದನ್ನು ಉಲ್ಲಂಘಿಸಿದ ಆರೋಪದಲ್ಲಿ ಜಯಮರಿ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರು.

ಬಿಎಸ್‌ಪಿ ನೈತಿಕ ಬಲ ಹೆಚ್ಚಳ: ಈ ಪ್ರಕರಣದಲ್ಲಿ ಬಿಎಸ್‌ಪಿ ಪರವಾಗಿ ಆದೇಶ ಬಂದಿರುವುದು ಪಕ್ಷದ ಹಾಗೂ ಕಾರ್ಯಕರ್ತರ ನೈತಿಕ ಬಲ ಹೆಚ್ಚುವಂತೆ ಮಾಡಿದೆ. ಕೊಳ್ಳೇಗಾಲದಲ್ಲಿ ಎನ್‌.ಮಹೇಶ್‌ ಅವರೊಂದಿಗೆ ಹೆಚ್ಚಿನ ಕಾರ್ಯಕರ್ತರು ಗುರುತಿಸಿಕೊಂಡಿದ್ದರಿಂದ ಪಕ್ಷವು ಸ್ವಲ್ಪ ಸೊರಗಿದಂತೆ ಕಾಣುತ್ತಿತ್ತು. ಕಾರ್ಯಕರ್ತರಲ್ಲೂ ಹೆಚ್ಚು ಉತ್ಸಾಹ ಇರಲಿಲ್ಲ. ನಗರಸಭೆಯಲ್ಲಿ ಅಧಿಕಾರ ಕೈತಪ್ಪಿದ ಬಳಿಕ ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಉಪಸ್ಥಿತಿಯೇ ಇಲ್ಲದಂತೆ ಭಾಸವಾಗುತ್ತಿತ್ತು.

ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶವು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಬಿಸಿ ಬಿಸಿ ಚರ್ಚೆ: ಏಳು ಸದಸ್ಯರ ಅನರ್ಹತೆ ಸುದ್ದಿ ನಗರದಲ್ಲಿ ಮಂಗಳವಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಮತ್ತೊಮ್ಮೆ ಚುನಾವಣೆ ನಡೆಯಲಿದೆಯೇ ಅಥವಾ ಕಾನೂನು ಹೋರಾಟದಲ್ಲಿ ಅನರ್ಹ ಸದಸ್ಯರಿಗೆ ಗೆಲುವು ಸಿಗಬಹುದೇ ಎಂಬ ಚರ್ಚೆಯನ್ನು ಜನರು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದರು.

ಅನರ್ಹ ಸದಸ್ಯರಿಗೆ ಕಾನೂನು ಹೋರಾಟದ ಹಾದಿ ಮುಕ್ತವಾಗಿದ್ದರೂ, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ. ಒಂದು ವೇಳೆ ಕಾನೂನು ಹೋರಾಟದಲ್ಲಿ ಸೋಲಾದರೂ, ನಡೆಯಲಿರುವ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಶಾಸಕ ಎನ್‌.ಮಹೇಶ್‌ ಬೆಂಬಲಿಗರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹೇಶ್‌ ಪತ್ನಿ ನಿಧನರಾಗಿರುವ ಕಾರಣಕ್ಕೆ ಇನ್ನೂ ಬೆಂಗಳೂರಿನಲ್ಲಿರುವ ಶಾಸಕರೊಂದಿಗೆ ಅನರ್ಹಗೊಂಡ ಸದಸ್ಯರು ಮಾತನಾಡಿಲ್ಲ ಎಂಬುದು ಗೊತ್ತಾಗಿದೆ.

ಸತ್ಯಕ್ಕೆ ಜಯ ಸಿಕ್ಕಿದೆ: ಜಯಮರಿ
ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೂರುದಾರರಾದ ಬಿಎಸ್‌ಪಿ ಸದಸ್ಯೆ ಜಯಮರಿ, ‘ನಾವು ಪಕ್ಷಕ್ಕಾಗಿ ದುಡಿದು ಪಕ್ಷವನ್ನೇ ನಂಬಿ ರಾಜಕಾರಣ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮೋಸ ಮಾಡುವುದಿಲ್ಲ. ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಾವು ಏಳು ಮಂದಿ ಸದಸ್ಯರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದ್ದೆವು’ ಎಂದರು.

‘ಪಕ್ಷದ ಚಿಹ್ನೆಯಿಂದ ಚುನಾವಣೆಯಲ್ಲಿ ಗೆದ್ದು ನಗರಸಭೆ ಸದಸ್ಯರಾಗಿದ್ದೀರಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ ನೀಡಿ’ ಎಂದು ಕೈಮುಗಿದು ಕೇಳಿದ್ದೆ. ಆದರೆ, ಅವರು ನನ್ನ ಮಾತಿಗೆ ಬೆಲೆ ಕೊಡಲಿಲ್ಲ.

‘ನಮ್ಮ ಹಿಂದೆ ಶಾಸಕರು–ಸಂಸದರಿದ್ದಾರೆ. ನಾವು ಯಾರ ಮಾತನ್ನು ಸಹ ಕೇಳುವುದಿಲ್ಲ’ ಎಂದು ಕೆಲವು ಸದಸ್ಯರು ನನ್ನ ಬಳಿ ಹೇಳಿದ್ದರು. ಆದರೆ, ತಾವು ಮಾಡಿರುವ ತಪ್ಪು ಈಗ ಅವರಿಗೆ ಅರಿವಾಗಿದೆ. ಶಾಸಕರು ಮಾಡಿರುವ ರಾಜಕಾರಣಕ್ಕೆ ಏಳು ಮಂದಿ ಸದಸ್ಯರು ಅನರ್ಹರಾಗಿದ್ದಾರೆ. ಈ ಸಮಾಜದಲ್ಲಿ ನ್ಯಾಯ ಮತ್ತು ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದರು.

*
ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ. ಕಾನೂನಿನ ಮೇಲೆ ನಂಬಿಕೆ ಇದೆ. ಶಾಸಕರ ತೀರ್ಮಾನಕ್ಕೆ ಬದ್ಧರಾಗುತ್ತೇವೆ
-ಗಂಗಮ್ಮ, ಅನರ್ಹಗೊಂಡ ಸದಸ್ಯೆ

*
ಜಯ ಲಭಿಸಿದೆ. ಕಾನೂನು ಹೋರಾಟದ ಭಾಗವಾಗಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಕೇವಿಯೆಟ್‌ ಸಲ್ಲಿಸಿದ್ದೇವೆ
-ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.