ADVERTISEMENT

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಸೋಮಣ್ಣ

ಕೊಳ್ಳೇಗಾಲ: ಪ್ರತಿಭಟನೆಯ ನಡುವೆ ಅತ್ಯಾಧುನಿಕ ಬಸ್‌ ನಿಲ್ದಾಣ ಉದ್ಘಾಟನೆ, ಮಹೇಶ್‌ಗೆ ಶಹಬ್ಬಾಸ್‌ಗಿರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:18 IST
Last Updated 21 ಮಾರ್ಚ್ 2023, 4:18 IST
ಕೊಳ್ಳೇಗಾಲದ ಹೊಸ ಬಸ್‌ ನಿಲ್ದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಟೇಪ್‌ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಶಾಸಕರಾದ ಎನ್‌.ಮಹೇಶ್‌, ಸಿ.ಎಸ್‌.ನಿರಂಜನಕುಮಾರ್ ಇತರರು ಇದ್ದರು
ಕೊಳ್ಳೇಗಾಲದ ಹೊಸ ಬಸ್‌ ನಿಲ್ದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಟೇಪ್‌ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಶಾಸಕರಾದ ಎನ್‌.ಮಹೇಶ್‌, ಸಿ.ಎಸ್‌.ನಿರಂಜನಕುಮಾರ್ ಇತರರು ಇದ್ದರು   

ಕೊಳ್ಳೇಗಾಲ: ನಗರಸಭೆಯ ಬಹುಪಾಲು ಸದಸ್ಯರ ವಿರೋಧದ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ, ₹23.58 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ಉದ್ಘಾಟಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ‘ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೆಎಸ್‌ಆರ್‌ಟಿಸಿ ನಿಲ್ದಾಣದ ಉಳಿದ ಕೆಲಸ, ಖಾಸಗಿ ಬಸ್‌ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದರು.

‘ಕೊಳ್ಳೇಗಾಲ ಜಿಲ್ಲೆಯ ಪ್ರಮುಖ ಕೇಂದ್ರ, ಇಲ್ಲಿ ನಿಲ್ದಾಣ ಅಗತ್ಯವಾಗಿತ್ತು. ನಗರಸಭೆ ಮತ್ತು ಕೆಎಸ್‌ಆರ್‌ಟಿಸಿ ಒಟ್ಟಾಗಿ 1 ಎಕರೆ 12 ಗುಂಟೆ ಜಾಗದಲ್ಲಿ ನಿಲ್ದಾಣ ನಿರ್ಮಿಸಿವೆ. ಹಳೆ ನಿಲ್ದಾಣದಿಂದ ಅಂಗಡಿಗಳನ್ನು ತೆರವುಗೊಳಿಸಬೇಕಾಗಿದೆ. ಅಂಗಡಿಗಳನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ, ನಿಲ್ದಾಣ ನಿರ್ಮಿಸುವುದಕ್ಕೆ ಆಗುವುದಿಲ್ಲ. ಎಲ್ಲ ಅಂಗಡಿಗಳನ್ನು ತೆರವುಗೊಳಿಸಿ, ಅಲ್ಲಿಯ ಮಾಲೀಕರಿಗೆ ಬೇರೆ ವ್ಯವಸ್ಥೆ ಮಾಡಿ, ಈ ನಿಲ್ದಾಣವನ್ನು ವಿಸ್ತರಿಸಲಾಗುವುದು. ಆ ಕೆಲಸವನ್ನು ತಕ್ಷಣದಿಂದಲೇ ಆರಂಭಿಸಲಾಗುವುದು’ ಎಂದರು.

ADVERTISEMENT

ಅಭಿವೃದ್ಧಿಗೆ ಬದ್ಧ: ‘ಕೊಳ್ಳೇಗಾಲ ಬೆಳೆಯುತ್ತಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಉದ್ಘಾಟನೆಗೆ ನಗರಸಭೆ ಸದಸ್ಯರು ವಿರೋಧ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಪಕ್ಷ, ರಾಜಕೀಯ ಮುಖ್ಯ ಅಲ್ಲ. ನ್ಯೂನತೆಗಳು ಇರುತ್ತವೆ. ನಾವು ಹೊಸ ಮನೆಯ ಗೃಹಪ್ರವೇಶ ಮಾಡಿದ ನಂತರವೂ ಸಣ್ಣ ಪುಟ್ಟ ಕೆಲಸಗಳು ಇರುತ್ತವೆ. ಹಾಗೆ ಇಲ್ಲಿಯೂ ಕೆಲಸಗಳಿವೆ. ಅದನ್ನು ಮಾಡಲಾಗುವುದು’ ಎಂದರು.

‘ಈ ಜಿಲ್ಲೆಯ ಕಾಡಂಚಿನ ಗ್ರಾಮಗಳು ಅಭಿವೃದ್ಧಿಯಾಗಬೇಕಾಗಿದೆ. ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಪ್ರಗತಿ ಕಾಣಬೇಕಾಗಿದೆ. ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಎಲ್ಲದರ ಅರಿವೂ ನನಗಿದೆ. 50 ವರ್ಷಗಳಿಂದ ಈ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ’ ಎಂದರು.

ಜನರ ದುಡ್ಡಿಂದ ಕಟ್ಟಿದ್ದು: ಶಾಸಕ ಎನ್‌.ಮಹೇಶ್‌ ಅವರು ತಮ್ಮ ಭಾಷಣದಲ್ಲಿ ನಗರಸಭೆ ಸದಸ್ಯರ ವಿರೋಧದ ನಡುವೆಯೂ ನಿಲ್ದಾಣದ ಉದ್ಘಾಟನೆ ಮಾಡಿದ್ದನ್ನು ಸಮರ್ಥಿಸಿಕೊಂಡರು.

‘ಈ ನಿಲ್ದಾಣದ ನಿರ್ಮಾಣದ ಲಾಭವನ್ನು ಯಾರೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರಜೆಗಳ ದುಡ್ಡಿನಿಂದ ಈ ನಿಲ್ದಾಣವನ್ನು ಕಟ್ಟಲಾಗಿದೆ. ಇಲ್ಲಿ ಜನರೇ ಮುಖ್ಯ. ಕೆಎಸ್‌ಆರ್‌ಟಿಸಿಯಾಗಲಿ, ಶಾಸಕ ಮಹೇಶ್‌ ಆಗಲಿ ನಿಮಿತ್ತ ಮಾತ್ರ. ನಮ್ಮ ಸಂದರ್ಭದಲ್ಲಿ ಉದ್ಘಾಟನೆಯಾಗಿದೆ. ಇದು ಸಾರ್ವಜನಿಕರ ಸ್ವತ್ತು’ ಎಂದು ಹೇಳಿದರು.

‘ದೂರದ ಊರುಗಳಿಂದ ಬರುವ ಜನರು ಬಸ್‌ ನಿಲ್ದಾಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಆ ಉದ್ದೇಶದಿಂದ ಉದ್ಘಾಟನೆ ಮಾಡಲಾಗಿದೆ. ಖಾಸಗಿ ಬಸ್‌ಗಳಿಗೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಉದ್ಘಾಟನೆ ಮಾಡುವುದು ನನ್ನ ತೀರ್ಮಾನ ಅಲ್ಲ. ಸರ್ಕಾರದ ತೀರ್ಮಾನ. ಸ್ವತಃ ಉಸ್ತುವಾರಿ ಸಚಿವರೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ದಿನಾಂಕ ನಿಗದಿ ಪಡಿಸಿದ್ದಾರೆ. ಜನಪ್ರತಿನಿಧಿಗಳು ಸರ್ಕಾರದ ಭಾಗ. ಆದರೂ ಕೆಲವು ಸಹೋದರ ಸಹೋದರಿಯರು ಕಾರ್ಯಕ್ರಮಕ್ಕೆ ಬಂದಿಲ್ಲ’ ಎಂದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಕಾಡಾ ಅಧ್ಯಕ್ಷ ನಿಜಗುಣರಾಜು, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಪೂವಿತಾ, ನಗರಸಭಾ ಸದಸ್ಗರಾದ ಕವಿತಾ, ನಾಗಸುಂದ್ರಮ್ಮ, ಪವಿತ್ರ, ಸಿರೀಶ, ಮಾನಸ, ರಾಮಕೃಷ್ಣ ನಗರಸಭೆ ಆಯುಕ್ತ ರಾಜಣ್ಣ ಇತರರು ಇದ್ದರು.

ಮಹೇಶ್‌ಗೆ ಶಹಬ್ಬಾಸ್‌ಗಿರಿ

ಸಚಿವ ಸೋಮಣ್ಣ ಅವರು ತಮ್ಮ ಭಾಷಣದಲ್ಲಿ ಶಾಸಕ ಎನ್‌.ಮಹೇಶ್‌ ಅವರನ್ನು ಹಲವು ಬಾರಿ ಹೊಗಳಿದರು. ತರಾತುರಿಯಲ್ಲಿ ಉದ್ಘಾಟನೆ ಮಾಡಲು ಕ್ರಮ ಕೈಗೊಂಡಿದ್ದನ್ನೂ ಸಮರ್ಥಿಸಿಕೊಂಡರು.

‘ಕೊಳ್ಳೇಗಾಲದ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಮಹೇಶ್‌ ದುಡಿಯುತ್ತಿದ್ದಾರೆ. ಅವರ ಕಾರ್ಯವೈಖರಿ ಅಭಿನಂದನೀಯ. ಎಲ್ಲ ನೋವನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದಾರೆ. ಜನ ದಡ್ಡರಲ್ಲ. ಬುದ್ಧಿವಂತರು ಅವರಿಗೆ ಎಲ್ಲವೂ ಗೊತ್ತಾಗುತ್ತದೆ. ನೀರು, ರಸ್ತೆ ಮತ್ತು ಮೂಲಸೌಕರ್ಯ ಬಿಟ್ಟು ಬೇರೆ ಏನನ್ನೂ ಅವರು ಕೇಳುವುದಿಲ್ಲ. ಮಹೇಶ್‌ ಅವರು ಅವರಿಗಾಗಿ ಅಥವಾ ಸ್ವಾರ್ಥಕ್ಕಾಗಿ ಈ ಕೆಲಸ ಮಾಡಿಲ್ಲ. ಜನರಿಗೆ ಅನುಕೂಲ ಮಾಡಿಕೊಳ್ಳುವ ಕಾರ್ಯಕ್ಕಾಗಿ ತಪ್ಪು ಹೆಜ್ಜೆ ಇಟ್ಟಿದ್ದಾರೆ’ ಎಂದರು.

ಭಾಷಣದಲ್ಲಿ ಯಡಿಯೂರಪ್ಪ ಹೆಸರನ್ನೂ ಪ್ರಸ್ತಾಪಿಸಿದ ಸಚಿವರು, ‘ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕಾರಣಕರ್ತರು ಅವರು’ ಎಂದರು.

‘ಹಳೆ ನಿಲ್ದಾಣದಲ್ಲಿರುವ ಮಳಿಗೆ ಮಾಲೀಕರ ಸಭೆಯನ್ನು ಶೀಘ್ರದಲ್ಲಿ ಕರೆದು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಸಂಬಂಧ ಚರ್ಚಿಸಿ ನನಗೆ ವರದಿ ನೀಡಬೇಕು’ ಎಂದು ಆಯುಕ್ತ ರಾಜಣ್ಣ ಅವರಿಗೆ ಸೋಮಣ್ಣ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.