ಕೊಳ್ಳೇಗಾಲ: ಜಿಲ್ಲೆಯಿಂದ ನೆರೆ ರಾಜ್ಯ ತಮಿಳುನಾಡು ಹಾಗೂ ಕೇರಳಕ್ಕೆ ಎಗ್ಗಿಲ್ಲದೆ ಭತ್ತದ ಹುಲ್ಲು ಸಾಗಾಟವಾಗುತ್ತಿದ್ದು ಬೇಸಗೆಯ ಹಂಗಾಮಿಗೆ ಮೇವಿನ ಕೊರತೆ ಉಂಟಾಗುವ ಆತಂಕ ಎದುರಾಗಿದೆ.
ಹೊರ ರಾಜ್ಯಗಳಿಗೆ ಮೇವು ಸಾಗಾಟಕ್ಕೆ ನಿರ್ಬಂಧವಿದ್ದರೂ ನಿಯಮ ಮೀರಿ ಲಾರಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಸಾಗಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮೇವಿನ ಸಾಗಾಟಕ್ಕೆ ತಡೆ ಹಾಕಲು ವಿಫಲವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತಿದ್ದು ಜಿಲ್ಲೆಯ ಜಾನುವಾರುಗಳಿಗೆ ಮೇವು ಸಿಗುತ್ತಿದೆ. ಲಭ್ಯವಿರುವ ಮೇವು ಸಂಪೂರ್ಣವಾಗಿ ನೆರೆ ರಾಜ್ಯಗಳ ಪಾಲಾದರೆ ಮುಂದೆ ಮೇವಿನ ಕೊರತೆ ಎದುರಾಗಿ ಜಾನುವಾರ ಸಾಕಾಣೆದಾರರು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.
ಮೂರು ವರ್ಷಗಳ ಹಿಂದೆ ಹನೂರು ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲೂಕಿನಲ್ಲಿ ಬರ ಪರಿಸ್ಥಿತಿಯಿಂದ ಮೇವಿನ ಅಭಾವ ಸೃಷ್ಟಿಯಾಗಿತ್ತು. ಆ ಸಂದರ್ಭ ಹೊರ ರಾಜ್ಯಗಳಿಗೆ ಮೇವು ಸಾಗಣೆ ಮಾಡುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೂ ದಳ್ಳಾಳಿಗಳು ರೈತರಿಗೆ ಹೆಚ್ಚಿನ ದರ ಆಮಿಷವೊಡ್ಡಿ ಹೊರ ರಾಜ್ಯಗಳಿಗೆ ಹೆಚ್ಚಿನ ಬೆಲೆಗೆ ಮೇವನ್ನು ಮಾರಾಟ ಮಾಡುತ್ತಿದ್ದಾರೆ.
ತಕ್ಷಣ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆಯಾದರೆ ಜಿಲ್ಲಾಡಳಿತವೇ ಮೇವು ಪೂರೈಸಬೇಕಾಗುತ್ತದೆ ಎಂದು ಹೊಸಅಣ್ಣಗಳಿ ಗ್ರಾಮದ ರೈತ ಕೀರ್ತಿ ಒತ್ತಾಯಿಸಿದರು.
ಮಿತಿಮೀರಿದ ದಲ್ಲಾಳಿಗಳ ಹಾವಳಿ:
ಗುಂಡ್ಲುಪೇಟೆ, ಚಾಮರಾಜನಗರ, ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕಿನಲ್ಲಿ ಬೆಳೆದ ಭತ್ತದ ಫಸಲು ಕಟಾವು ನಡೆಯುತ್ತಿದ್ದು, ಬಹುತೇಕ ಭತ್ತದ ಹುಲ್ಲಿನ ಮೇವು ಹೊರ ರಾಜ್ಯಕ್ಕೆ ಮಾರಾಟವಾಗುತ್ತಿದೆ. ಹೆಚ್ಚಿನ ದರ ನೀಡುವುದಾಗಿ ರೈತರಿಂದ ಭತ್ತದ ಹುಲ್ಲನ್ನು ಖರೀದಿಸಿ ಸಾಗಿಸಲಾಗುತ್ತಿದೆ.
ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ರೈತರಿಂದ ಮೇವನ್ನು ಖರೀದಿಸಿ ಸಂಗ್ರಹಿಸಿದರೆ ಹೈನುಗಾರಿಕೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಹಣ ನೀಡಿ ಮೇವು ಖರೀದಿಸುವ ಸಂದರ್ಭ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರು.
ಹುಲ್ಲಿನ ಪಿಂಡಿ ಕಟ್ಟುವ ಯಂತ್ರಗಳು, ಭತ್ತ ಕಟಾವು ಯಂತ್ರಗಳನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಂದ ತಂದಿರುವ ದಲ್ಲಾಳಿಗಳು ಸ್ಥಳೀಯ ರೈತರಿಂದ ತೀರಾ ಕಡಿಮೆ ದರಕ್ಕೆ ಪಿಂಡಿಗೆ 80 ರಿಂದ 100ಕ್ಕೆ ಖರೀದಿಸಿ ತಮಿಳುನಾಡಿಗೆ ಕೊಂಡೊಯ್ದು 200 ರಿಂದ 250ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದ್ದು ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತಾರೆ ರೈತರಾದ ನಂಜುಂಡಸ್ವಾಮಿ.
ಅಧಿಕಾರಿಗಳ ನಿರ್ಲಕ್ಷ್ಯ:
ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭತ್ತದ ಹುಲ್ಲಿನ ಸಾಗಾಟ ತಡೆಯಲು ವಿಫಲವಾಗಿದ್ದಾರೆ. ಬರಗಾಲ ಬಂದಾಗ ಮೇವಿಗೆ ಪರದಾಡುವ ಬದಲು ಹೊರ ರಾಜ್ಯಗಳಿಗೆ ಹೋಗುತ್ತಿರುವ ಮೇವು ಪೂರೈಕೆ ತಡೆಯಬೇಕು. ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಭದ್ರತೆ ಮಾಡಬೇಕು.
ಚಾಮರಾಜನಗರ ತಾಲ್ಲೂಕಿನ ಪುಣಜೂರು ಚೆಕ್‌ಪೋಸ್ಟ್, ಗುಂಡ್ಲುಪೇಟೆಯ ಮದ್ದೂರು ಚೆಕ್ ಪೋಸ್ಟ್, ಹನೂರು ತಾಲ್ಲೂಕಿನ ಪಾಲಾರ್, ಅರ್ಧನಾರಿಪುರ, ಗರಿಕೆ ಕಂಡಿ, ನಾಲ್ ರೋಡ್ ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಮಾಡಿ ಹೊರರಾಜ್ಯಗಳಿಗೆ ಮೇವು ಪೂರೈಕೆ ತಡೆಯಬೇಕು ರೈತರು ಒತ್ತಾಯಿಸಿದ್ದಾರೆ.
ಲಾರಿಗಳಿಗೆ ದಂಡ
ಹೊರ ರಾಜ್ಯಗಳಿಗೆ ಮೇವು ಸಾಗಣೆ ಮಾಡಿದರೆ ಜಿಲ್ಲೆಯ ಜಾನುವಾರಗಳಿಗೆ ಮುಂದೆ ಮೇವಿನ ಕೊರತೆ ಉಂಟಾಗುತ್ತದೆ. ಪಶುಪಾಲನಾ ಇಲಾಖೆಗೆ ಸೂಚನೆ ನೀಡಲಾಗಿದ್ದು ಹೊರ ರಾಜ್ಯಕ್ಕೆ ಹೋಗುತ್ತಿರುವ ಲಾರಿಗಳನ್ನು ತಡೆದು ದಂಡ ಸಹ ಹಾಕಲಾಗುತ್ತಿದೆ. ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಮಾಡಲಾಗುವುದು. –ಬಸವರಾಜು ತಹಶೀಲ್ದಾರ್
ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿವೆ. ಭತ್ತದ ಹುಲ್ಲಿನ ಪಿಂಡಿಗಳು ತಮಿಳುನಾಡಿಗೆ ಪ್ರತಿನಿತ್ಯ ರಾತ್ರಿ ಲಾರಿಗಳಲ್ಲಿ ಹೋಗುತ್ತಿದೆ. ಕೂಡಲೇ ಇದನ್ನು ತಡೆಯಬೇಕು. ಜಿಲ್ಲೆಯ ಜಾನುವಾರು ಸಾಕಣೆದಾರರ ಹಿತ ಕಾಯಬೇಕು. –ಕುಂತೂರು ನಂಜುಂಡಸ್ವಾಮಿ ರೈತಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.