ಸಂತೇಮರಹಳ್ಳಿ: ಕನಕಾಂಬರ ಹೂ ಬೆಳೆಯುವುದರ ಜೊತೆಗೆ ಹೈನುಗಾರಿಕೆ ಮಾಡುತ್ತಲೇ ಉತ್ತಮ ಆದಾಯ ಗಳಿಸುತ್ತ ಮಾದರಿಯಾಗಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ ಸಂತೇಮರಹಳ್ಳಿ ಗ್ರಾಮದ ಪರಶಿವ ಮೂರ್ತಿ.
ಒಂದು ಎಕರೆ ಜಮೀನಿನಲ್ಲಿ ಅರ್ಧ ಎಕರೆ ಕನಕಾಂಬರ ಬೆಳೆದು, ಉಳಿದರ್ಧ ಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆಯುತ್ತಿರುವ ಶಿವಮೂರ್ತಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮಾರಸಿಂಗನಹಳ್ಳಿಯಲ್ಲಿ ಕನಕಾಂಬರ ಹೂವಿನ ಗಿಡಗಳನ್ನು ತಂದು ಅರ್ಧ ಎಕರೆಯಲ್ಲಿ ನಾಟಿ ಮಾಡಿದ್ದಾರೆ. 1 ಗಿಡಕ್ಕೆ ₹2 ರಂತೆ ಎರಡು ಸಾವಿರ ಗಿಡಗಳನ್ನು ಜಮೀನಿನಲ್ಲಿ ನೆಟ್ಟಿದ್ದಾರೆ. ನಾಟಿ, ಕೂಲಿ ಆಳುಗಳ ಖರ್ಚು, ನಿರ್ವಹಣೆ ಸೇರಿದಂತೆ ₹ 25 ಸಾವಿರದವರೆಗೆ ಖರ್ಚು ಮಾಡಿದ್ದಾರೆ.
ಹೂವು ಬೆಳೆಯುವುದರ ಜೊತೆಗೆ ಹೈನುಗಾರಿಕೆಯನ್ನು ಅವಲಂಬಿಸಿಕೊಂಡಿರುವುದರಿಂದ ಕೊಟ್ಟಿಗೆ ಗೊಬ್ಬರವನ್ನು ಕನಕಾಂಬರ ಬೆಳೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರ, ಔಷಧ ಸಿಂಪರಣೆ ಮೂಲಕ ರೋಗಬಾಧೆ, ಕಳೆಬಾಧೆ ತಡೆಗಟ್ಟಿದ್ದಾರೆ.
‘ಕನಕಾಂಬರ ಗಿಡಗಳನ್ನು ನೆಟ್ಟ 3 ತಿಂಗಳಿಗೆ ಹೂವು ಬಿಡಲು ಶುರುಮಾಡಿದೆ. ಎರಡು ದಿನಕ್ಕೊಮ್ಮೆ ಹೂವು ಬಿಡಿಸುತ್ತೇನೆ. ಒಂದು ಬಾರಿ ಹೂವು ಬಿಡಿಸಿದಾಗ 4 ಕೆ.ಜಿ.ಯವರೆಗೂ ಸಿಗುತ್ತದೆ. ಸಾಮಾನ್ಯವಾಗಿ ಕೆ.ಜಿ.ಗೆ ₹ 800ರವರೆಗೂ ದರ ಸಿಗುತ್ತದೆ. 2 ದಿನಗಳಿಗೊಮ್ಮೆ ಹೂವು ಮಾರಾಟದಿಂದ ₹3 ಸಾವಿರದವರೆಗೆ ಆದಾಯ ಸಿಗುತ್ತದೆ’ ಎನ್ನುತ್ತಾರೆ ಶಿವಮೂರ್ತಿ.
ಹಬ್ಬ, ಹರಿದಿನಗಳಲ್ಲಿ ಕನಕಾಂಬರ ಕೆ.ಜಿ.ಗೆ ₹2000ದವರೆಗೂ ದರ ಏರಿಕೆ ಆಗುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ದರ ಸಿಗುತ್ತದೆ. ಕನಕಾಂಬರ ಹೂವಿನ ಬೀಡು ಉತ್ತಮವಾಗಿ ವ್ಯವಸಾಯ ಮಾಡಿಕೊಂಡು ಕಾಪಾಡಿಕೊಂಡು ಬಂದರೆ ಒಂದೂವರೆ ವರ್ಷದವರೆಗೂ ಬೀಡು ಇರುತ್ತದೆ ಎಂದು ಪರಶಿವಮೂರ್ತಿ ತಿಳಿಸಿದರು.
ಹೈನುಗಾರಿಕೆ: ಪಶು ಇಲಾಖೆಯಿಂದ ವಿತರಿಸುವ ಮೇವಿನ ಬೀಜ ಬಳಸಿಕೊಂಡು ಅರ್ಧ ಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆಯುತ್ತಿದ್ದು, ಎರಡು ಹಸುಗಳನ್ನು ಸಾಕಿಕೊಂಡಿದ್ದೇನೆ. ಬೆಳಿಗ್ಗೆ ಹಾಗೂ ಸಂಜೆ 6 ಲೀಟರ್‌ವರೆಗೆ ಹಾಲು ಇಳುವರಿ ಸಿಗುತ್ತಿದ್ದು ಸಮೀಪದ ಡೇರಿಗೆ ಹಾಕುತ್ತಿದ್ದೇನೆ. ಹೈನುಗಾರಿಕೆಯಿಂದ ಎರಡು ವಾರಕ್ಕೆ ₹4 ಸಾವಿರ ಆದಾಯ ಸಿಗುತ್ತದೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಆದಾಯ ಗಳಿಸಬಹುದು ಎಂಬುದು ಶಿವಮೂರ್ತಿ ಅವರ ಅನುಭವದ ಮಾತು.
ಹಲವು ವರ್ಷಗಳಿಂದ ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. ಕೃಷಿಯಲ್ಲಿ ನಷ್ಟ ಅನುಭವಿಸಿಲ್ಲ ಕಷ್ಟಪಟ್ಟು ದುಡಿದರೆ ವ್ಯವಸಾಯ ಕೈಹಿಡಿಯುತ್ತದೆ. ಇದೇ ನಂಬಿಕೆಯಲ್ಲಿ ಮುಂದೆಯೂ ವ್ಯವಸಾಯ ಮುಂದುವರಿಸಿಕೊಂಡು ಹೋಗುತ್ತೇನೆ.ಶಿವಮೂರ್ತಿ ರೈತ
‘ಚೆಂಡು ಹೂವು ತರಕಾರಿ’
ಕನಕಾಂಬರ ಬೆಳೆಯಿಂದ ವರ್ಷಕ್ಕೆ ಎರಡೂವರೆ ಲಕ್ಷ ರೂಪಾಯಿವರೆಗೂ ಆದಾಯ ಪಡೆಯಬಹುದು. ಕನಕಾಂಬರ ಹೂವಿನ ಬೀಡು ಮುಗಿದ ನಂತರ ಚೆಂಡು ಹೂವು ಹಾಗೂ ತರಕಾರಿ ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಹೆಚ್ಚಿಸಿಕೊಂಡಿದ್ದೇನೆ. ಜಮೀನಿಗೆ ಕೊಳವೆ ಬಾವಿ ಕೊರೆಯಿಸಿ ಪಂಪ್‌ಸೆಂಟ್ ನೀರಾವರಿ ಸೌಲಭ್ಯ ಒದಗಿಸಲಾಗಿದ್ದು ವರ್ಷಪೂರ್ತಿ ಬೆಳೆಗಳನ್ನು ತೆಗೆಯುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.