ADVERTISEMENT

ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ, ಆಕ್ರೋಶ

ಕೆಎಸ್ಆರ್‌ಟಿಸಿ ಬಸ್‌ ಪ್ರಯಾಣ ದರ ಏರಿಕೆ ಜಿಲ್ಲೆಯಲ್ಲೂ ಜಾರಿ, ವೇಗದೂತ ಬಸ್‌ ದರ ಗಣನೀಯ ಹೆಚ್ಚಳ

ಸೂರ್ಯನಾರಾಯಣ ವಿ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST
 ಕೆಎಸ್‌ಆರ್‌ಟಿಸಿ ಬಸ್‌
 ಕೆಎಸ್‌ಆರ್‌ಟಿಸಿ ಬಸ್‌   

ಚಾಮರಾಜನಗರ: ಮಂಗಳವಾರ ಮಧ್ಯರಾತ್ರಿಯಿಂದ ಜಿಲ್ಲೆಯಲ್ಲೂ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ‌ ಏರಿಕೆಯಾಗಿದ್ದು, ಪ್ರತಿ ದಿನ ಬಸ್‌ನಲ್ಲಿ ಓಡಾಡುವ ಪ್ರಯಾಣಿಕರು ಮೊದಲ ದಿನ ಆಕ್ರೋಶ ವ್ಯಕ್ತಪಡಿಸಿಯೇ ಹೆಚ್ಚು ದುಡ್ಡು ತೆತ್ತರು.

ದೂರದ ಊರಿಗೆ ಪ್ರಯಾಣಿಸುವಎಕ್ಸ್‌ಪ್ರೆಸ್‌ ಬಸ್‌ಗಳ ಟಿಕೆಟ್‌ ದರ ಗಣನೀಯವಾಗಿ ಹೆಚ್ಚಿದೆ.ಚಾಮರಾಜನಗರ, ಗುಂಡ್ಗುಪೇಟೆಗಳಿಂದ ಮೈಸೂರಿಗೆ ಹೋಗುವ ಎಕ್ಸ್‌ಪ್ರೆಸ್‌ ಬಸ್‌ಗಳ ದರ ₹8, ಯಳಂದೂರು–ಮೈಸೂರು ಮಾರ್ಗದಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್‌ಗಳ ಟಿಕೆಟ್‌ ದರ ₹9, ಕೊಳ್ಳೇಗಾಲ–ಮೈಸೂರು ಮಾರ್ಗದ ದರ ₹6 ಹೆಚ್ಚಾಗಿದೆ. ಇದುವರೆಗೂ ಈ ಮಾರ್ಗಗಳಲ್ಲಿ ಟಿಕೆಟ್‌ ದರ ಕ್ರಮವಾಗಿ (ಟೋಲ್‌ ಶುಲ್ಕ ಸೇರಿ) ₹55, ₹54 ಮತ್ತು ₹59 ಇತ್ತು.

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಮೂಲಕ ಮೈಸೂರಿಗೆ ಹೋಗುವ ಅಂತರರಾಜ್ಯ ಬಸ್‌ ಟಿಕೆಟ್‌ ದರ ₹65ರಿಂದ ₹70ಕ್ಕೆ ಹೆಚ್ಚಿದೆ.

ADVERTISEMENT

ಮಹದೇಶ್ವರ ಬೆಟ್ಟ ಹಾಗೂ ಮೈಸೂರು ನಡುವೆ ಸಂಚರಿಸುವವರು ಬುಧವಾರದಿಂದ ಟಿಕೆಟ್‌ಗೆ ₹155 ಪಾವತಿಸುತ್ತಿದ್ದಾರೆ. ಇದುವರೆಗೂ ಟಿಕೆಟ್‌ ದರ ₹134 ಇತ್ತು.ಕೊಳ್ಳೇಗಾಲ ಮತ್ತು ಬೆಂಗಳೂರು ಮಾರ್ಗದ ಪ್ರಯಾಣ ದರ ₹12 ಹೆಚ್ಚಾಗಿದೆ. ₹130 ಇದ್ದ ಟಿಕೆಟ್‌ ಬೆಲೆ ₹142 ಆಗಿದೆ.

ಉಳಿದಂತೆ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು, ಹನೂರು, ನಂಜನಗೂಡು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್‌ಗಳ ದರ ₹3ರಿಂದ ₹5ವರೆಗೆ ಹೆಚ್ಚಾಗಿದೆ. ಸಾಮಾನ್ಯ ಬಸ್‌ ದರ ₹3ರಿಂದ ₹7ರವರೆಗೂ ಹೆಚ್ಚಾಗಿದೆ.

ಮತ್ತಷ್ಟು ಹೊರೆ:ಕೊಳ್ಳೇಗಾಲ ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿ766ರಲ್ಲಿ ನಿರ್ಮಿಸಲಾಗಿರುವ ಮೂರು ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಡಿಸೆಂಬರ್‌ 10ರಿಂದ ಟೋಲ್‌ ಸಂಗ್ರಹ ಆರಂಭವಾಗುತ್ತಿದ್ದಂತೆಯೇ, ಆ ಮೊತ್ತವನ್ನು ಪ್ರಯಾಣಿಕರಿಂದಲೇ ಪಡೆಯಲು ಕೆಎಸ್‌ಆರ್‌ಟಿಸಿ ನಿರ್ಧರಿಸಿತ್ತು. ಹಾಗಾಗಿ, ನಂಜನಗೂಡು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಟಿಕೆಟ್‌ ದರವನ್ನು ₹5 ಹಾಗೂ ತಿ.ನರಸೀಪುರ ಮಾರ್ಗದಲ್ಲಿ ಸಾಗುವ ಬಸ್‌ಗಳ ದರವನ್ನು ₹4 ಹೆಚ್ಚಿಸಲಾಗಿತ್ತು.

ಡಿಸೆಂಬರ್‌ 10ರಿಂದ ಪ್ರಯಾಣಿಕರು ಟಿಕೆಟ್‌ಗೆಹೆಚ್ಚುವರಿವಾಗಿ ₹5, ಈಗ ಮತ್ತೆ ‌ಪ್ರಯಾಣ ದರವನ್ನು ₹6–₹9ರವರೆಗೆ ಹೆಚ್ಚು ಮಾಡಿರುವುದು ಜನ ಸಾಮಾನ್ಯರಿಗೆ ಮತ್ತಷ್ಟು ಹೊರೆ ಆದಂತಾಗಿದೆ.

ಪ್ರಯಾಣಿಕರ ಆಕ್ರೋಶ:ಬುಧವಾರ ಬಹುತೇಕ ಬಸ್‌ಗಳಲ್ಲಿ ನಿರ್ವಾಹಕರು ಪ್ರಯಾಣಿಕರ ಆಕ್ರೋಶವನ್ನು ಎದುರಿಸಬೇಕಾಯಿತು.

ಮೈಸೂರು ಬಸ್‌ ಹತ್ತಿದ್ದ ರೈತರೊಬ್ಬರು, ₹63 ಟಿಕೆಟ್‌ ದರ ನೋಡಿ ನಿರ್ವಾಹಕರ ಮೇಲೆ ಕೋಪಗೊಂಡರು. ‘ರಾಜ್ಯದಾದ್ಯಂತ ಟಿಕೆಟ್‌ ದರ ಹೆಚ್ಚಾಗಿದೆ’ ಎಂದು ನಿರ್ವಾಹಕರು ಹೇಳಿದ್ದಕ್ಕೆ, ‘ನಮ್ಮ ಟೊಮೆಟೊ ಬೆಲೆ ಹೆಚ್ಚಾಗುವುದಿಲ್ಲ. ಅಷ್ಟೇ ಇದೆ. ನಿಮಗೆ ಸಂಬಳ ಕೊಡುವುದಕ್ಕೆ ನಮ್ಮ ಕೈಯಲ್ಲಿ ಯಾಕೆ ಹೆಚ್ಚು ದುಡ್ಡು ತೆಗೆದುಕೊಳ್ಳುತ್ತೀರಿ’ ಎಂದು ಆ ರೈತ ಅಸಮಾಧಾನ ವ್ಯಕ್ತಪಡಿಸಿದರು.

ಸ್ಟೇಜ್‌ ದರವೂ ಹೆಚ್ಚಳ: ‘ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಮೊದಲ ಮೂರು ಕಿ.ಮೀಗಳವೆರೆಗೆ (ಮೊದಲ ಸ್ಟೇಜ್‌) ಇದ್ದ ಪ್ರಯಾಣ ದರವನ್ನು ₹7 ರಿಂದ ₹5ಕ್ಕೆ ಇಳಿಸಲಾಗಿದೆ. ಉಳಿದಂತೆ ಎರಡನೇ ಹಂತದ ದರವನ್ನು ₹9ರಿಂದ ₹10ಕ್ಕೆ ಹೆಚ್ಚಿಸಲಾಗಿದೆ. ಮೂರನೇ ಹಂತದ ದರವನ್ನು ಬದಲಿಸಲಾಗಿಲ್ಲ. ₹15 ಅಷ್ಟೇ ಇದೆ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ಸಂಚಾರ ಅಧಿಕಾರಿ ಎಸ್‌.ಎಸ್‌.ಪರಮೇಶ್ವರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದುವರೆಗೂ ಬಸ್‌ ಹತ್ತಿದ ಪ್ರಯಾಣಿಕರು ಮುಂದಿನ ನಿಲ್ದಾಣದಲ್ಲಿ ಇಳಿದರೂ ₹7 ಕೊಡಬೇಕಿತ್ತು. ಇನ್ನು ₹5 ನೀಡಿದರೆ ಸಾಕು’ ಎಂದು ಅವರು ಹೇಳಿದರು.

ರೈಲಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ

ಬಸ್‌ ದರ ಏರಿಕೆಯಾಗುತ್ತಿದ್ದಂತೆಯೇ ಚಾಮರಾಜನಗರದಿಂದ ಮೈಸೂರಿಗೆ ಪ್ರಯಾಣಿಸುವವರು ಇನ್ನು ಮುಂದೆ ರೈಲುಗಳನ್ನು ಬಳಸುವ ನಿರೀಕ್ಷೆ ಹೆಚ್ಚಾಗಿದೆ.

ಪ್ರಯಾಣಿಕರ ರೈಲಿಗೆ ಚಾಮರಾಜನಗರ–ಮೈಸೂರು ನಡುವೆ ₹20 ಟಿಕೆಟ್‌ ದರವಿದೆ. ಎಕ್ಸ್‌ಪ್ರೆಸ್‌ಗಾದರೆ ₹40 ಪಾವತಿಸಬೇಕು.

ತಿರುಪತಿ ಎಕ್ಸ್‌ಪ್ರೆಸ್‌ ಸೇರಿದಂತೆ ದಿನಂಪ್ರತಿ ಐದು ರೈಲುಗಳು ಚಾಮರಾಜನಗರ–ಮೈಸೂರು ನಡುವೆ ಓಡಾಡುತ್ತವೆ. ಬೆಳಿಗ್ಗೆ 7.15, 10.40, ಮ. 3.10 (ಎಕ್ಸ್‌ಪ್ರೆಸ್‌), ಸಂ. 5.00, 6.00 ಮತ್ತು ರಾತ್ರಿ 9 ಗಂಟೆಗೆ ರೈಲುಗಳು ಇವೆ.

ಚಾಮರಾಜನಗರದಿಂದ ಮಾತ್ರ ಮೈಸೂರಿಗೆ ರೈಲು ಸಂಪರ್ಕ ಇದ್ದು, ಉಳಿದ ಪಟ್ಟಣಗಳ ಜನರು ಬಸ್ಸುಗಳನ್ನೇ ಅವಲಂಬಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.