ADVERTISEMENT

ಅನ್‌ಲಾಕ್‌: ರಸ್ತೆಗಿಳಿದ ಸಾರಿಗೆ ಬಸ್‌

ವ್ಯಾಪಾರ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಣೆ, ಹೆಚ್ಚಿದ ಜನ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:08 IST
Last Updated 21 ಜೂನ್ 2021, 16:08 IST
ಜಿಲ್ಲೆಯ ವಿವಿಧ ಕಡೆಗೆ ತೆರಳಲು ಚಾಮರಾಜನಗರದ ಬಸ್‌ ನಿಲ್ದಾಣದಲ್ಲಿ ಸೋಮವಾರ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು
ಜಿಲ್ಲೆಯ ವಿವಿಧ ಕಡೆಗೆ ತೆರಳಲು ಚಾಮರಾಜನಗರದ ಬಸ್‌ ನಿಲ್ದಾಣದಲ್ಲಿ ಸೋಮವಾರ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು   

ಚಾಮರಾಜನಗರ: ಕೋವಿಡ್‌ 2ನೇ ಅಲೆಗೆ ತಡೆಗೆ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ನಿರ್ಬಂಧಗಳ ಮೊದಲ ಹಂತದ ಸಡಿಲಿಕೆ ಜಿಲ್ಲೆಯಲ್ಲಿ ಸೋಮವಾರದಿಂದ ಜಾರಿಗೆ ಬಂದಿದ್ದು, ಜನರ ಸಂಚಾರ ಹೆಚ್ಚಿತ್ತು.

ಅಗತ್ಯ ವಸ್ತುಗಳ ವಹಿವಾಟಿನ ಅವಧಿಯನ್ನು ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿಸಿದ್ದರಿಂದ ಹಾಗೂ ಕೆಎಸ್‌ಆರ್‌ಟಿಸಿ ಬಸ್‌, ಆಟೊ, ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ನೀಡಿದ್ದರಿಂದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನ ಹಾಗೂ ವಾಹನಗಳ ಓಡಾಟ ಹೆಚ್ಚು ಕಂಡು ಬಂತು.

ಲಾಕ್‌ಡೌನ್‌ ಅವಧಿಯಲ್ಲಿ ವಾರದಲ್ಲಿ ಮೂರು ದಿನ (ಸೋಮವಾರ, ಮಂಗಳವಾರ ಮತ್ತು ಬುಧವಾರ) ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಬೆಳಗಿನ ಹೊತ್ತು ದಿನಸಿ, ತರಕಾರಿ ಹಣ್ಣಿನ ಅಂಗಡಿಗಳಲ್ಲಿ ಜನ ಸಂದಣಿ ಕಂಡು ಬರುತ್ತಿತ್ತು.

ADVERTISEMENT

ಆದರೆ, ಸೋಮವಾರದಿಂದ ವ್ಯಾಪಾರದ ಅವಧಿಯನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿದ್ದರಿಂದ ಮಳಿಗೆಗಳಲ್ಲಿ ಹೆಚ್ಚು ಜನದಟ್ಟಣೆ ಇರಲಿಲ್ಲ.

ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿಗಳು, ಹಾಲಿನ ಕೇಂದ್ರಗಳು, ಎಲೆಕ್ಟ್ರಿಕಲ್‌, ಹಾರ್ಡ್‌ವೇರ್‌ ಅಂಗಡಿಗಳು, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಕೃಷಿ ಪರಿಕರಗಳ ಮಾರಾಟ ಮಳಿಗೆಗಳು, ಗ್ಯಾರೇಜ್‌ಗಳು, ಬೇಕರಿಗಳು, ಜ್ಯೂಸ್‌ ಅಂಗಡಿಗಳು ತೆರೆದಿದ್ದವು.

ಹೆಚ್ಚಿನ ಹೋಟೆಲ್‌ಗಳು ಹಾಗೂ ಮದ್ಯದ ಅಂಗಡಿಗಳು ಕೂಡ ವಹಿವಾಟು ನಡೆಸಿದವು. ಆದರೆ ಇಲ್ಲಿ ಪಾರ್ಸೆಲ್‌ ನೀಡುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ರಸ್ತೆಗಿಳಿದ ಬಸ್‌:ಲಾಕ್‌ಡೌನ್‌ ಜಾರಿಯಾದ ಏಪ್ರಿಲ್‌ 27ರ ನಂತರ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದವು. ಮೈಸೂರಿನಲ್ಲಿ ಕಠಿಣ ಲಾಕ್‌ಡೌನ್‌ ನಿರ್ಬಂಧ ಇನ್ನೂ ಜಾರಿಯಲ್ಲಿರುವುದರಿಂದ ಮೈಸೂರು ಭಾಗ ಬಿಟ್ಟು ಉಳಿದ ಕಡೆಗಳಿಗೆ ಬಸ್‌ಗಳು ಸಂಚರಿಸಿದವು. ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದವು.

‘ಜಿಲ್ಲೆಯಾದ್ಯಂತ ಸೋಮವಾರ 45 ಬಸ್‌ಗಳು ಕಾರ್ಯಾಚರಿಸಿವೆ. ಬೆಂಗಳೂರಿಗೆ 14 ಬಸ್‌ಗಳು ಸಂಚರಿಸಿವೆ. ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಬಸ್‌ಗಳನ್ನು ಓಡಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಂಗಳವಾರದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಮ ಪಾಲನೆ: ‘ಕೋವಿಡ್‌ ನಿಯಮಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಆಸನ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರತಿ ಟ್ರಿಪ್‌ ಆದ ನಂತರ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಕೋವಿಡ್‌ ಲಸಿಕೆ ಪಡೆದ ಚಾಲಕರು ಹಾಗೂ ನಿರ್ವಾಹಕರಿಗೆ ಆದ್ಯತೆ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಲಸಿಕೆ ಪಡೆಯದವರು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.