ADVERTISEMENT

ರಸ್ತೆಗಿಳಿಯದ ಸಾರಿಗೆ ಬಸ್‌, ಜನರ ಪರದಾಟ

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಆರಂಭ, ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 14:57 IST
Last Updated 7 ಏಪ್ರಿಲ್ 2021, 14:57 IST
ಚಾಮರಾಜನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡು ಬಂತು
ಚಾಮರಾಜನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡು ಬಂತು   

ಚಾಮರಾಜನಗರ/ಕೊಳ್ಳೇಗಾಲ: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕು ಎಂ‌ದು ಆಗ್ರಹಿಸಿಕೆಎಸ್‌ಆರ್‌ಟಿಸಿ ನೌಕರರು ರಾಜ್ಯದಾದ್ಯಂತ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಜಿಲ್ಲೆಯಲ್ಲೂ ಬುಧವಾರ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು.

ಚಾಮರಾಜನಗರ ವಿಭಾಗೀಯ ಘಟಕದ ವ್ಯಾಪ್ತಿಯಲ್ಲಿರುವ ಬರುವ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ 2,300 ನೌಕರರು ಕೆಲಸಕ್ಕೆ ಹಾಜರಾಗಲಿಲ್ಲ. ಘಟಕದ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಭಾಗಗಳಲ್ಲಿ ಬಸ್‌ಗಳೆಲ್ಲ ಡಿಪೊದಲ್ಲೇ ಇದ್ದವು.

ಮುಷ್ಕರ ನಡೆಯುತ್ತಿದೆ ಎಂಬುದು ಮೊದಲೇ ತಿಳಿದಿದ್ದರಿಂದ ಬುಧವಾರ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಬಸ್‌ಗಳ ಸಂಚಾರ, ಆಟೊ, ಮ್ಯಾಕ್ಸಿ ಕ್ಯಾಬ್‌ ಸೇರಿದಂತೆ ಇತರೆ ಬಾಡಿಗೆ ವಾಹನಗಳ ಸಂಚಾರ ಇದ್ದರೂ, ಪ್ರಯಾಣಿಕರು ತೊಂದರೆ ಅನುಭವಿಸಿದರು.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳಾದರೆ ನಿರ್ದಿಷ್ಟ ಸಮಯಕ್ಕೆ ಪ್ರಯಾಣ ಆರಂಭಿಸುತ್ತಿದ್ದವು. ಖಾಸಗಿ ಬಸ್‌ಗಳು ಪ್ರಯಾಣಿಕರಿಗಾಗಿ ಕಾದು, ಆಸನಗಳು ಭರ್ತಿಯಾದ ನಂತರಷ್ಟೇ ಸಂಚಾರ ಆರಂಭಿಸಿದವು. ಇದರಿಂದ ಜನರು ಬಸ್‌ಗಳಲ್ಲಿ ಗಂಟೆ ಗಟ್ಟಲೆ ಕಾಯಬೇಕಾಯಿತು. ‌

ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆ ನಡೆಸಿದವು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಖಾಸಗಿ ಬಸ್‌ಗಳನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲೇ ಅವುಗಳಿಗೆ ಅವಕಾಶ ನೀಡಲಾಗಿತ್ತು.

100ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಸಂಚಾರ:45ಕ್ಕೂ ಹೆಚ್ಚು ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ಬಸ್‌ಗಳು ಮೈಸೂರು, ಬೆಂಗಳೂರು, ಕೋಳ್ಳೇಗಾಲ, ಗುಂಡ್ಲುಪೇಟೆ... ಹೀಗೆ ಪ್ರಮುಖ ನಗರ ಹಾಗೂ ಪಟ್ಟಣಗಳ ನಡುವೆ ಸಂಚರಿಸಿದವು. ಉಳಿದ ಖಾಸಗಿ 50ರಿಂದ 60 ಖಾಸಗಿ ಬಸ್‌ಗಳು ತಮ್ಮ ಮಾರ್ಗಗಳಲ್ಲಿ ಸಂಚಾರ ನಡೆಸಿದವು. ಪ್ರಮುಖ ಗ್ರಾಮೀಣ ಭಾಗಗಳಿಗೆ ಎಂದಿನಂತೆ ಬಸ್‌ಗಳಿದ್ದವು. ತೀರಾ ಒಳಪ್ರದೇಶಗಳಿಗೆ ಬಸ್‌ಗಳು ಇರಲಿಲ್ಲ.

ಖಾಸಗಿ ಬಸ್‌ಗಳು ಕೂಡ ಕೆಎಸ್‌ಆರ್‌ಟಿಸಿ ಬಸ್‌ ದರವನ್ನೇ ಪ್ರಯಾಣಿಕರಿಂದ ಪಡೆದವು. ಆಟೊ, ಟ್ಯಾಕ್ಸಿಗಳು ಕೂಡ ಹೆಚ್ಚು ಹಣ ವಸೂಲಿ ಮಾಡಿರುವ ಬಗ್ಗೆ ವರದಿಯಾಗಿಲ್ಲ.ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕಿಂತಲೂ ಖಾಸಗಿ ಬಸ್‌ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ಕಂಡು ಬಂದರು.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇಲ್ಲದಿದ್ದುದರಿಂದ ಜನರು ತಮ್ಮ ಕೆಲಸಗಳಿಗೆ ತೆರಳಲು ತಮ್ಮ ಸ್ವಂತ ವಾಹನಗಳ ಮೊರೆ ಹೋದರು. ಗ್ರಾಮೀಣ ಭಾಗದ ಜನರು ಕೂಡ ದೈನಂದಿನ ವ್ಯವಹಾರಕ್ಕಾಗಿ ನಗರ, ಪಟ್ಟಣ ಪ್ರದೇಶಗಳಿಗೆ ಬರಲು ತಮ್ಮ ಸ್ವಂತ ವಾಹನ, ಬಾಡಿಗೆ ವಾಹನಗಳನ್ನು ಬಳಸಿದರು.

ರಾಜ್ಯಮಟ್ಟದಲ್ಲಿ ಮನವೊಲಿಕೆ ಪ್ರಯತ್ನ

ನೌಕರರ ಮುಷ್ಕರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು, ‘ಯಾರೊಬ್ಬರೂ ಕೆಲಸಕ್ಕೆ ಬಂದಿಲ್ಲ. ಹಾಗಾಗಿ, ಒಂದು ಬಸ್‌ ಕೂಡ ಸಂಚಾರ ಮಾಡಿಲ್ಲ. ಖಾಸಗಿ ಬಸ್‌ಗಳಿಗೆ ಅವಕಾಶ ನೀಡಿರುವುದರಿಂದ ನಮ್ಮ ನಿಲ್ದಾಣದಿಂದಲೇ ಕಾರ್ಯಾಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಕಾಣಿಸುತ್ತಿದೆ’ ಎಂದು ತಿಳಿಸಿದರು.

‘ರಾಜ್ಯಮಟ್ಟದಲ್ಲಿ ನೌಕರರನ್ನು ಮನವೊಲಿಸುವ ಕಾರ್ಯ ನಡೆಯುತ್ತಿದೆ. ಸಂಧಾನ ಯಶಸ್ವಿಯಾದರೆ ಬಸ್‌ ಸಂಚಾರ ಪುನರಾರಂಭವಾಗಲಿದೆ’ ಎಂದು ಅವರು ಹೇಳಿದರು.

₹‌50 ಲಕ್ಷ ನಷ್ಟ: ಕೋವಿಡ್‌ ಲಾಕ್‌ಡೌನ್‌ ನಂತರ ಕುಸಿದಿದ್ದ ಕೆಎಸ್ಆರ್‌ಟಿಸಿ ಆದಾಯ, ಅನ್‌ಲಾಕ್‌ ನಂತರ ಚೇತರಿಸುತ್ತಾ ಈಗ ಬಹುಪಾಲು ಮೊದಲ ಸ್ಥಿತಿಗೆ ಬಂದಿತ್ತು. ಮುಷ್ಕರದಿಂದಾಗಿ ಸಂಸ್ಥೆ ಮತ್ತೆ ನಷ್ಟ ಅನುಭವಿಸುವಂತಾಗಿದೆ.

‘ಈಗ ಪ್ರತಿ ದಿನ ₹50 ಲಕ್ಷದ‌ವರೆಗೆ ಆದಾಯ ಬರುತ್ತಿದೆ. ಕೋವಿಡ್‌ ಹಾವಳಿಯ ನಂತರ ಮೊದಲಿನ ಸ್ಥಿತಿಗೆ ಬಂದಿದ್ದೆವು. ಮುಷ್ಕರದಿಂದಾಗಿ ಬಸ್‌ಗಳು ರಸ್ತೆಗಿಳಿಯದೇ ಇರುವುದರಿಂದ ಆದಾಯ ಖೋತಾ ಆಗಿದೆ’ ಎಂದು ಶ್ರೀನಿವಾಸ ಅವರು ಹೇಳಿದರು.

‘ಕೆಎಸ್‌ಆರ್‌ಟಿಸಿ ದರದಲ್ಲೇ ಸೇವೆ’

ಬುಧವಾರದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜ್‌ ಅವರು, ‘ಸುಮಾರು 100 ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿ ಸಂಚರಿಸಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಮ್ಮ ಬಸ್‌ಗಳು ಓಡಾಡುತ್ತಿದ್ದುದರಿಂದ ಜನರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ದರದಲ್ಲೇ ಸೇವೆ ಒದಗಿಸಿದ್ದೇ‌ವೆ’ ಎಂದು ಹೇಳಿದರು.

‘ಮೈಸೂರು ಸೇರಿದಂತೆ ಪ್ರಮುಖ ನಗರ ಪಟ್ಟಣಗಳಿಗೆ ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ಬಸ್‌ಗಳು ಸಂಚರಿಸಿವೆ. ಉಳಿದ ಬಸ್‌ಗಳು ಮಾಮೂಲಿ ಮಾರ್ಗಗಳಲ್ಲಿ ಓಡಾಟ ನಡೆಸಿವೆ. ಗುರುವಾರ, ಶುಕ್ರವಾರ ಇನ್ನಷ್ಟು ಹೆಚ್ಚು ಬಸ್‌ಗಳು ರಸ್ತೆಗಿಳಿಯಲಿವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.