ADVERTISEMENT

ಹೆಬ್ಬಸೂರು ಶಂಕರ ಮಠ: ಕುಂಭಾಭಿಷೇಕ ಸಂಪನ್ನ

ಗೋಪುರಗಳ ಕಳಶಗಳಿಗೆ ಶೃಂಗೇರಿ ಶ್ರೀಗಳಿಂದ ಅಭಿಷೇಕ, ಪೂಜೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:17 IST
Last Updated 12 ಮೇ 2022, 15:17 IST
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರಿನ ನವೀಕೃತ ಶಂಕರ ಮಠದ ರಾಜಗೋಪುರದ ಕಳಶಗಳಿಗೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು. ಮಠದ ಧರ್ಮಾಧಿಕಾರಿ ಶ್ರೀಧರ್‌ ಪ್ರಸಾದ್‌ ಹಾಗೂ ವೈದಿಕರು ಇದ್ದರು
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರಿನ ನವೀಕೃತ ಶಂಕರ ಮಠದ ರಾಜಗೋಪುರದ ಕಳಶಗಳಿಗೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು. ಮಠದ ಧರ್ಮಾಧಿಕಾರಿ ಶ್ರೀಧರ್‌ ಪ್ರಸಾದ್‌ ಹಾಗೂ ವೈದಿಕರು ಇದ್ದರು   

ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರಿನಲ್ಲಿ ನವೀಕರಣಗೊಂಡಿರುವ ಶೃಂಗೇರಿ ಶಾರದಾಪೀಠದ ಶಾಖಾ ಮಠವಾದ ಶಂಕರ ಮಠದ ಕುಂಭಾಭಿಷೇಕ ಮಹೋತ್ಸವ ಶೃಂಗೇರಿಯ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶಾರದಾಂಬ ಮತ್ತು ಪರಿವಾರ ದೇವತೆಗಳ ಕುಂಭಾಭಿಷೇಕ ಹಾಗೂ ಮಠದ ರಾಜಗೋಪುರ, ವಿಮಾನಗೋಪುರಗಳ ಕುಂಭಾಭಿಷೇಕವನ್ನು ವೇದ ಮಂತ್ರ ಪಠಣ, ಚೆಂಡೆ, ಮಂಗಳವಾದ್ಯ ಘೋಷಗಳ ನಡುವೆ ಶ್ರೀಗಳು ನೆರವೇರಿಸಿದರು.

ಇದಕ್ಕೂ ಮುನ್ನ, ಪ್ರಾತಃಕಾಲದಿಂದಲೇ ಧಾರ್ಮಿಕ ವಿಧಿ ವಿಧಾನ ನಡೆದವು. ಬೆಳಿಗ್ಗೆ 7.30ಕ್ಕೆ ಶ್ರೌತಯಾಗ ಆರಂಭವಾಯಿತು. ಬಳಿಕ ವಿಧುಶೇಖರ ಭಾರತೀ ಶ್ರೀಗಳು, ಶಾರದಾಂಬೆ, ಗಣಪತಿ, ಸುಬ್ರಹ್ಮಣ್ಯ, ಆದಿಶಂಕರಾಚಾರ್ಯ, ಸೀತಾ ರಾಮ ಲಕ್ಷ್ಮಣ ಸಹಿತ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಠದ ರಾಜಗೋಪುರ, ವಿಮಾನಗೋಪುರಗಳನ್ನು ಏರಿ, ಸುವರ್ಣ ಮಿಶ್ರಿತ ಕಳಶಗಳಿಗೆ ಅಭಿಷೇಕ, ಪೂಜೆ, ಮಂಗಳಾರತಿ ನೆರವೇರಿಸಿದರು.

ADVERTISEMENT

ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಶ್ರೀಗಳು ದರ್ಶನ ನೀಡಿದರು. ಭಕ್ತರು ಪಾದಪೂಜೆ ನೆರವೇರಿಸಿದರು. ಭಕ್ತರಿಂದ ಭಿಕ್ಷಾವಂದನೆ ಸ್ವೀಕರಿಸಿದರು. ಭಕ್ತರು ಫಲ ಪುಷ್ಪಗಳನ್ನು ಸಮರ್ಪಿಸಿ, ಮಂತ್ರಾಕ್ಷತೆ ಪಡೆದರು.

ನಂತರ ಚಂದ್ರಮೌಳೀಶ್ವರ ಪ್ರತಿಷ್ಠೆ, ಶತಚಂಡಿಕಾಯಾಗದ ಪೂರ್ಣಾಹುತಿ ನೆರವೇರಿತು. ಸೇರಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ,ಶೃಂಗೇರಿ ಶಂಕರ ಮಠದ ಆಡಳಿತಾಧಿಕಾರಿ ಗೌರಿಶಂಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್, ಹೆಬ್ಬಸೂರು ಶಂಕರ ಮಠದ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್, ಮೈಸೂರು ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ಭಾಸ್ಕರ್, ಸತ್ಯನಾರಾಯಣ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹೆಗಡೆ, ಹೆಬ್ಬಸೂರಿನ ಮುಖಂಡರು, ಕೊಯಮತ್ತೂರು ಶ್ರೀ ಚಂದ್ರಶೇಖರ ಭಾರತೀ ವೇದಪಾಠಶಾಲೆ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆ, ಮೈಸೂರು ಹಾಗೂ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.