ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಸಮೀಪವಿರುವ, ಕಾವೇರಿ ನದಿಯಿಂದ ಸುತ್ತುವರಿದಿರುವಎಡಕುರಿಯಾ ಗ್ರಾಮಕ್ಕೆ ದಶಕಗಳ ಹೋರಾಟದ ಫಲವಾಗಿ ಸೇತುವೆ ಬಂದರೂ ಮೂಲ ಸೌಕರ್ಯಗಳ ಭಾಗ್ಯ ಇನ್ನೂ ಸಿಕ್ಕಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮ ಬಡವಾಗಿದೆ.
ಈ ಗ್ರಾಮದಲ್ಲಿ 450 ಕುಟುಂಬಗಳಿವೆ. 1,800 ಜನರು ವಾಸಿಸುತ್ತಿದ್ದಾರೆ.ಮೂಲಸೌಕರ್ಯಗಳ ಕೊರತೆ ಇಲ್ಲಿ ತಾಂಡವವಾಡುತ್ತಿದೆ. ಗ್ರಾಮಸ್ಥರು ಪ್ರತಿ ದಿನ ಸಮಸ್ಯೆಗಳ ಜೊತೆಗೇ ಜೀವನ ಸಾಗಿಸಬೇಕಾಗಿದೆ. ಗ್ರಾಮದ ಸುತ್ತ ಕಾವೇರಿ ನದಿ ಹರಿದರೂ ನೀರು ಸರಿಯಾಗಿ ಬರುವುದಿಲ್ಲ. ಗ್ರಾಮದಲ್ಲಿ ನೀರಿನ ತೊಂಬೆಗಳು ಕೆಟ್ಟಿವೆ. ನೀರುವ ಬರುವ ತೊಂಬೆಗಳ ಸುತ್ತ ಅನೈರ್ಮಲ್ಯ ಇದೆ.ಗ್ರಾಮದಲ್ಲಿ ಸ್ವಚ್ಚತೆಯೂ ಮರೀಚಿಕೆಯಾಗಿದೆ.
ರಸ್ತೆ, ಚರಂಡಿ ಇಲ್ಲ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ರಸ್ತೆಯ ಮಧ್ಯದಲ್ಲೇ ಕೊಳಚೆ ನೀರು ಹರಿಯುತ್ತದೆ. ಕೆಲವು ಕಡೆಗಳಲ್ಲಿ ಕೊಳಚೆ ನೀರು ನೇರ ಕಾವೇರಿ ನದಿಗೆ ಸೇರುತ್ತದೆ. ಗಲೀಜು ನೀರು ಸಮರ್ಪಕವಾಗಿ ಹರಿಯದೇ ಇರುವುದರಿಂದ ಸೊಳ್ಳೆ ಕಾಟ ವಿಪರೀತವಾಗಿದೆ.
ರಸ್ತೆಯೂ ಸರಿಯಾಗಿಲ್ಲ. ಹೊಂಡಗುಂಡಿಗಳ ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಗ್ರಾಮಸ್ಥರದ್ದು. ಮಳೆ ಬಂದರೆ ರಸ್ತೆ ಕೆಸರುಗದ್ದೆಯೇ ಆಗುತ್ತದೆ. ಬೀದಿ ದೀಪಗಳಿದ್ದರೂ ಉರಿಯುತ್ತಿಲ್ಲ. ಕತ್ತಲೆಯಲ್ಲೇ ಸಂಚರಿಸಬೇಕಾಗಿದೆ.
ಬಯಲು ಶೌಚಾಲಯ: ‘ಗ್ರಾಮದಲ್ಲಿ ಶೌಚಾಲಯದ ಕೊರತೆ ಇದೆ. ಹಾಗಾಗಿ ಜನರು ಬಯಲನ್ನೇ ಅವಲಂಬಿಸಿದ್ದಾರೆ.ಮಳೆ ಬಂದರೆ ಸಾಕು ನಮಗೆ ಭಯವಾಗುತ್ತದೆ. ಎಲ್ಲಿ ರೋಗ ಬರುತ್ತದೆ ಎಂಬ ಹೆದರಿಕೆಯಲ್ಲಿ ಗ್ರಾಮಸ್ಥರು ಬದುಕುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಸ್ಥಳೀಯರಾದ ಶಿವನಂಜಯ್ಯ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.