ಚಾಮರಾಜನಗರ: ಮಕ್ಕಳ ಬಾಲ್ಯದ ಜೊತೆಗೆ ಜೀವನವನ್ನೇ ಕಸಿದುಕೊಳ್ಳುವ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪೋಷಕರ ಸಹಕಾರ ಅಗತ್ಯ. ಮಕ್ಕಳಿಗೆ ಬಾಲ್ಯವಿವಾಹ ಮಾಡಿ ಭವಿಷ್ಯವನ್ನು ಕತ್ತಲಿಗೆ ದೂಡುವ ಬದಲು ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.
ತಾಲ್ಲೂಕಿನ ನಾಗವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ನಿಸರ್ಗ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು, ಆರೋಗ್ಯ-ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯ ವಿವಾಹ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮದುವೆ ವಯಸ್ಸು ತುಂಬಿದ ನಂತರವೇ ವಿವಾಹ ಮಾಡಬೇಕು, ಮುಖ್ಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪೋಷಕರಿಗೆ ತಿಳಿ ಹೇಳಿದರು.
ಮಕ್ಕಳ ಕಳ್ಳ ಸಾಗಾಣೆ, ಬಾಲ್ಯ ವಿವಾಹ, ಭಿಕ್ಷಾಟನೆಗೆ ದೂಡುವುದು, ಬಾಲ ಕಾರ್ಮಿಕ ಪದ್ಧತಿ ಕಾನೂನಿನಡಿ ಶಿಕ್ಷಾರ್ಹ ಅಪರಾಧ. ಮಕ್ಕಳ ಹಕ್ಕುಗಳಿಗೆ ಚ್ಯುತಿ ತರಬಾರದು ಎಂದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದವರ ಮೇಲೆ ಜಾತಿ ತಾರತಮ್ಯ, ನಿಂದನೆ ದೌರ್ಜನ್ಯ ಎಸಗುವುದು, ಮಹಿಳೆಯರ ಘನತೆಗೆ ಕುಂದು ಉಂಟು ಮಾಡುವುದು, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸೇರಿದ ಜಮೀನನ್ನು ಕಾನೂನುಬಾಹಿರವಾಗಿ ಪಡೆಯುವುದು ಅಪರಾಧವಾಗಿದ್ದು ಇದನ್ನು ತಡೆಯಲು 1989ರಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಆರೋಗ್ಯವೇ ಜೀವನದ ಅತಿದೊಡ್ಡ ಸಂಪತ್ತಾಗಿದ್ದು ಪೂರಕವಾದ ಪೌಷ್ಟಿಕ ಆಹಾರ ಸೇವಿಸಬೇಕು. ಮದ್ಯಪಾನ, ಧೂಮಪಾನಗಳಂತಹ ದುಷ್ಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಮಿಕ ರೋಗಗಳು ಹರಡುವುದಿಲ್ಲ, ವೈಯಕ್ತಿಕ ಶುಚಿತ್ವದ ಜೊತೆಗೆ ಪರಿಸರವನ್ನು ಶುಚಿಯಾಗಿಡಬಹುದು. ಮನೆಯ ಸಮೀಪ ಗಿಡಗಳನ್ನು ನೆಟ್ಟು ಘೋಷಿಸಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಅಸ್ಗರ್ ಪಾಷ, ವಕೀಲ ಬಿ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೇಘಾ, ನಿಸರ್ಗ ಟ್ರಸ್ಟ್ ಸಿಇಒ ನಾಗರಾಜು ಪಿಡಿಒ ಎನ್.ರವಿಕುಮಾರ್ ಸೇರಿದಂತೆ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.